ಚಿತ್ರ ವಿಮರ್ಶೆ: ಕನ್ನಡ ದೇಶದೊಳ್
ಹೆಸರು ಭಿನ್ನವಾಗಿದ್ದರೆ ಸಾಲದು, ಕತೆ ಮತ್ತು ಅದನ್ನು ಹೇಳುವ ರೀತಿ ಕೂಡ ಹೊಸದಾಗಿರಬೇಕು ಎನ್ನುವ ಅಭಿಪ್ರಾಯಕ್ಕೆ ಬರುವಂತೆ ಮಾಡಿದ ಸಿನಿಮಾ ‘ಕನ್ನಡ ದೇಶದೊಳ್’.
ನಿರ್ದೇಶಕ ಅವಿರಾಮ್ ಕಂಠೀರವ ಅವರ ಕನ್ನಡ ಭಾಷೆಯ ಮೇಲಿನ ಅಭಿಮಾನದ ಉತ್ಸಾಹದಲ್ಲಿ ಮೂಡಿಬಂದಿರುವ ಸಿನಿಮಾ ಇದು. ಆದರೆ, ಈ ಉತ್ಸಾಹ ತೆರೆ ಮೇಲೆ ಸಿನಿಮಾ ಆಗಿ ಬರುವ ಹೊತ್ತಿಗೆ ತುಂಬಾ ಸಪ್ಪೆ ಆಗುತ್ತದೆ.
ಇಲ್ಲಿ ಎರಡು ಘಟನೆಗಳಿವೆ. ಇದೇ ಚಿತ್ರದ ಮುಖ್ಯ ಪಿಲ್ಲರ್‌ಗಳು. ಆ ಎರಡರ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಬಿಡಿ ಬಿಡಿ ದೃಶ್ಯಗಳಾಗಿ, ಕನ್ನಡದ ಅಭಿಮಾನಿಯಾಗಿ, ಕರ್ನಾಟಕದ ಬೇರೆ ಬೇರೆ ಭಾಗದ ವೈಶಿಷ್ಟ್ಯತೆ ಸವಿಯುವ ಟ್ರಾವೆಲ್ ಪ್ರೇಮಿಯಾಗಿ ನೋಡಿದರೆ ಸಿನಿಮಾ ಇಷ್ಟವಾಗುವ ಸಾಧ್ಯತೆಗಳೂ ಇವೆ.
ಮೊದಲ ಘಟನೆ: ಮಂತ್ರಿಯೊಬ್ಬರು ಹೊಸ ಯೋಜನೆಗೆ ಗುದ್ದಲಿ ಪೂಜೆಗೆ ಆಗಮಿಸುತ್ತಾರೆ. ಆಗ ಭೂಮಿ ಅಗೆಯುವಾಗ ಒಂದು ತಾಳೆಗರಿ ಸಿಗುತ್ತದೆ. ಅದರಲ್ಲಿ ‘ಕನ್ನಡ ದೇಶದೊಳ್’ ಎನ್ನುವ ವಾಕ್ಯ ಕಾಣುತ್ತದೆ. ಈ ವಾಕ್ಯದ ಹಿಂದೆ ಏನೋ ಮಹತ್ವದ ಸಂಗತಿ ಇದೆ ಎನ್ನುವ ನಿರ್ಧಾರಕ್ಕೆ ಬಂದು ಅದರ ಸಂಶೋಧನೆಗಿಳಿಯುತ್ತದೆ ಸರ್ಕಾರ.
ಎರಡನೇ ಘಟನೆ: ಕರ್ನಾಟಕವನ್ನು ನೋಡಲು ವಿದೇಶಿ ದಂಪತಿ ಬರುತ್ತಾರೆ. ಇವರಿಗೆ ಒಬ್ಬ ಆಟೋ ಚಾಲಕ ಜತೆಯಾಗುತ್ತಾನೆ. ಈತನೇ ರಾಜ್ಯ ಸುತ್ತಾಡಿಸಿ ನಾಡಿನ ವೈಭವವನ್ನು ಪರಿಚಯಿಸುತ್ತಾನೆ. ಮುಂದೆ ವಿದೇಶಿ ಮಹಿಳೆ ನಾಪತ್ತೆ ಆಗುತ್ತಾಳೆ. ಆಕೆಯ ಗಂಡನಿಗೆ ಈ ಆಟೋ ಚಾಲಕನೇ ಏನೋ ಮಾಡಿದ್ದಾನೆಂಬ ಅನುಮಾನ. ಮೊದಲ ಘಟನೆ ವಿರೋಧ ಪಕ್ಷಗಳ ವಿರೋಧಕ್ಕೆ ಕಾರಣವಾಗಿ ಆಡಳಿತ ಪಕ್ಷ ಅಪಹಾಸ್ಯಕ್ಕೊಳಗಾಗಿ ರಾಜಕೀಯ ರೂಪ ಪಡೆದುಕೊಂಡು ಸದ್ಯದ ರಾಜಕೀಯ ವ್ಯವಸ್ಥೆಯ ಮುಖ ತೆರೆದಿಡುತ್ತದೆ. ಈ ಎರಡೂ ಘಟನೆಗಳು ಹೇಗೆ ಶುರುವಾಗಿ, ಹೇಗೆ ಅಂತ್ಯಗೊಳ್ಳುತ್ತವೆ ಎಂಬುದೇ ಸಿನಿಮಾದ ಅಸಲಿ ತಿರುಳು.
ಇದರ ನಡುವೆ ಕನ್ನಡತನವನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಅವರ ಪ್ರಯತ್ನಕ್ಕೆ ಸಾಥ್ ನೀಡುವುದು ನಾಡಿನ ವೈಶಿಷ್ಟ್ಯಗಳು ಮತ್ತು ಇವುಗಳನ್ನು ತೆರೆ ಮೇಲೆ ತೋರಿಸುವ ಶರತ್ ಕುಮಾರ್ ಕ್ಯಾಮೆರಾ ಕಣ್ಣಿನ ಜಾಣತನ. ಈ ಹಂತದಲ್ಲಿ ಇದು ಸಿನಿಮಾನಾ ಅಥವಾ ನವೆಂಬರ್ ಕನ್ನಡ ರಾಜೋತ್ಸವದ ಸಾಕ್ಷ್ಯ ಚಿತ್ರನಾ ಎನ್ನುವ ಗುಮಾನಿ ಪ್ರೇಕ್ಷನಿಗೆ ಕಾಡದಿರದು. ಟೆನ್ನಿಸ್ ಕೃಷ್ಣ, ರಾಕ್‌ಲೈನ್ ಸುಧಾಕರ್, ರೇಖಾದಾಸ್, ಬಿರಾದಾರ್, ತಾರಕ್ ಪೊನ್ನಪ್ಪ, ಜೇನ್ ಬಂದು ಹೋಗುವ ಪಾತ್ರಗಳಾದರೂ ಸುಚೇಂದ್ರ ಪ್ರಸಾದ್ ಜತೆಗೆ ನಿರ್ದೇಶಕ ಅವಿರಾಮ್ ಕಂಠೀರವ ಚಿತ್ರದ ಪೂರ್ತಿ ಭಾರವನ್ನು ತಾವೇ ಹೊತ್ತು ಸಾಗುತ್ತಾರೆ. ಶರತ್ ಕುಮಾರ್ ಕ್ಯಾಮೆರಾ ಕೆಲಸ ಸೂಪರ್. ಸಂಕಲನಕಾರ ಕತ್ತರಿ ಹಾಕುವುದು ಸಾಧ್ಯವಾದಷ್ಟು ನಿಧಾನಗೊಳ್ಳುತ್ತದೆ.
ಚಿತ್ರ: ಕನ್ನಡ ದೇಶದೊಳ್
ತಾರಾಗಣ: ಸುಚೇಂದ್ರ ಪ್ರಸಾದ್, ಟೆನ್ನಿಸ್ ಕೃಷ್ಣ, ರಾಕ್‌ಲೈನ್ ಸುಧಾಕರ್, ರೇಖಾದಾಸ್, ಬಿರಾದಾರ್
ನಿರ್ದೇಶನ: ಅವಿರಾಮ್ ಕಂಠೀರವ
ನಿರ್ಮಾಣ: ಪ್ರಕಾಶ್.ಆರ್, ವಿನೋದ್ ಕುಮಾರ್, ವೆಂಕಟೇಶ್, ಯೋಗಾನಂದ್.ಆರ್, ವಿಶ್ವನಾಥ್.ಬಿ
ಛಾಯಾಗ್ರಾಹಣ: ಶರತ್‌ಕುಮಾರ್
ರೇಟಿಂಗ್: **