ಅಮ್ಮಚ್ಚಿಯನ್ನು ಲೇಖಕಿ ವೈದೇಹಿ ನೆನಪಿಸಿಕೊಂಡ ರೀತಿಯಲ್ಲೇ ಇಡೀ ಸಿನಿಮಾ ಚಿತ್ರಿತವಾಗಿದೆ. ಅದಕ್ಕೆ ಪೂರಕವಾಗಿ ವೈದೇಹಿಯವರು ಚಿತ್ರದ ಒಂದು ಭಾಗವಾಗಿ ಕಾಣಿಸಿಕೊಂಡಿದ್ದಾರೆ. ಈ ಮೂರು ಕತೆಗಳನ್ನು ಸೇರಿಸಿ, ಅಕ್ಕು ಹೆಸರಲ್ಲಿ ರಂಗಭೂಮಿಗೆ ತಂದ ಚಂಪಾ ಶೆಟ್ಟಿ ಅದನ್ನೀಗ ಸಿನಿಮಾ ಮಾಡಿದ್ದಾರೆ.

ಚಂಪಾಶೆಟ್ಟಿ ನಿರ್ದೇಶನದ ಮೊದಲ ಚಿತ್ರ ಇದು. ಸಾಮಾನ್ಯವಾಗಿ ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದ ನಿರ್ದೇಶಕರು ರಂಗಭೂಮಿಯ ಜಾಯಮಾನವನ್ನು ಸಿನಿಮಾಕ್ಕೂ ಅಳವಡಿಸುತ್ತಾರೆ ಮತ್ತು ಅದೇ ಕಾರಣಕ್ಕೆ ಸಿನಿಮಾ ಮಾಧ್ಯಮದ ಎಲ್ಲ ಸಾಧ್ಯತೆಗಳನ್ನೂ ಬಳಸಿಕೊಳ್ಳುವಲ್ಲಿ ಸೋಲುತ್ತಾರೆ. ರಂಗಭೂಮಿಯಿಂದ ಬಂದು ಹತ್ತಾರು ಸಿನಿಮಾ ಮಾಡಿದವರು ಕೂಡ ಅದರ ನೆರಳಿನಿಂದ ಹೊರಗೆ ಬರಲಾರದೇ ಇರುವುದನ್ನು ನಾವು ನೋಡಬಹುದು. ಆದರೆ ಚಂಪಾ ಶೆಟ್ಟಿ ಮೊದಲ ಪ್ರಯತ್ನದಲ್ಲೇ ರಂಗಭೂಮಿಯಿಂದ ಪೂರ್ತಿ ಕಳಚಿಕೊಂಡು ಸಿನಿಮಾದ ವ್ಯಾಕರಣಕ್ಕೆ ಬದ್ಧರಾಗಿದ್ದಾರೆ.

ಇದೇ ರೀತಿ ವೈದೇಹಿ ಕೂಡ ಚಿತ್ರಮಾಧ್ಯಮವನ್ನು ಆವಾಹಿಸಿಕೊಂಡಿರುವುದನ್ನು ಕಾಣಬಹುದು. ಅವರ ಚಿತ್ರಕತೆ ಹಾಗೂ ಸಂಭಾಷಣೆಯಲ್ಲಿ ಅನಗತ್ಯ ಎನ್ನಿಸುವ ಒಂದೇ ಒಂದು ದೃಶ್ಯವಾಗಲೀ, ಅನಪೇಕ್ಷಿತ ಅನ್ನಬಹುದಾದ ಒಂದೇ ಒಂದು ಮಾತಾಗಲೀ ಇಲ್ಲ. ಮಾತು ಮತ್ತು ಮೌನವನ್ನು ಹದವಾಗಿ ಬೆರೆಸಿಕಟ್ಟಿದ ಈ ಕಂಬನಿಮಾಲೆ ವೈದೇಹಿ ಬರೆದಿರುವ ಕತೆಗಳ ಸತ್ವವನ್ನೂ ಕೋಟ-ಕುಂದಾಪುರದ ಆಡುಭಾಷೆಯ ಆರ್ದ್ರತೆಯನ್ನೂ ಬಿಚ್ಚಿಮಾತಾಡಿದರೂ ಸಂಕೋಚ ಉಳಿಸಿಕೊಳ್ಳುವುದು ಹೇಗೆಂಬ ಸಂಕೋಚವನ್ನೂ ತನ್ನದಾಗಿಸಿಕೊಂಡಿದೆ.  

ಇವೆಲ್ಲಕ್ಕೂ ಪೂರಕವಾಗಿ ಚಂಪಾಶೆಟ್ಟಿ ಆಯಾ ಪಾತ್ರಕ್ಕೆ ಆರಿಸಿಕೊಂಡಿರುವ ಕಲಾವಿದರು ಆಯಾ ಪಾತ್ರವೇ ಆಗಿಬಿಟ್ಟಿದ್ದಾರೆ. ಕ್ಯಾಮರಾದ ಕಣ್ಣು ಆ ಪರಿಸರದಲ್ಲಿ ಅಡ್ಡಾಡುತ್ತಿರುವ ನಮ್ಮ ಕಣ್ಣೇ ಆಗಿಬಿಟ್ಟು, ಒಂದಿಡೀ ಪ್ರದೇಶವನ್ನು ಅದರ ಭಾಷೆ, ಲಯ, ಜೀವನಶೈಲಿ, ಕಾಲ ಮತ್ತು ಯಾತನೆಗಳ ಜೊತೆ ಕಟ್ಟಿಕೊಡುತ್ತದೆ.

ಒಂದೊಳ್ಳೆಯ ಕತೆ, ಅದಕ್ಕೆ ತಕ್ಕ ಚಿತ್ರಕತೆ, ಅದಕ್ಕೊಪ್ಪುವ ಸಂಭಾಷಣೆ, ಇವೆಲ್ಲವನ್ನೂ ಚಿತ್ರೀಕರಿಸುವ ಪ್ರಾಮಾಣಿಕತೆ -ಇವೇ ಚಿತ್ರದ ಅಗತ್ಯವೇ ಹೊರತು ಜನಪ್ರಿಯ ತಾರಾಗಣವಾಗಲೀ, ಅದ್ದೂರಿತನವಾಗಲೀ ಅಲ್ಲ ಅನ್ನುವುದನ್ನು ಅಮ್ಮಚ್ಚಿಯೆಂಬ ನೆನಪು ಮತ್ತೊಮ್ಮೆ ತೋರಿಸಿಕೊಟ್ಟಿದೆ. ಕಲಾವಿದ ಸುಧಾಕರ್ ದರ್ಬೆ ಬರೆದ ಚಿತ್ರದ ಶೀರ್ಷಿಕೆಯಿಂದ ಹಿಡಿದು, ಚಿತ್ರದ ಕೊನೆಯ ಫ್ರೇಮ್‌ನಲ್ಲಿ ನಾಯಕಿ ಎಷ್ಟು ಬಾಗಿರಬೇಕು, ಎಷ್ಟು ನಗಬೇಕು ಎನ್ನುವುದನ್ನು ತೋರಿಸುವಲ್ಲಿ ನಿರ್ದೇಶಕಿಯ ಕಲಾಪ್ರಜ್ಞೆ, ಶಿಸ್ತು ಕಾಣುತ್ತದೆ. 

ಅರವತ್ತರ ದಶಕದ ಚಿತ್ರಣವೊಂದನ್ನು ಇಲ್ಲಿ ಕಾಣಬಹುದು. ಹೆಣ್ಣು ಹಾದುಬಂದಿರುವ ಅಸಂಖ್ಯ ಅಗ್ನಿದಿವ್ಯಗಳು ಯಾವುವು ಎಂದು ನೋಡುತ್ತಾ ಹೋದಾಗ ಗ್ರಾಮೀಣ ಪ್ರದೇಶದ ಮೇಲ್ವರ್ಗದ ಮಹಿಳೆಯ ಶೋಷಣೆಯೂ ಕಣ್ಣಿಗೆ ರಾಚುತ್ತದೆ.
ಅದರಲ್ಲೂ ಮದುವೆ, ವೈಧವ್ಯ- ಮುಂತಾದ ವಿಚಾರಗಳಲ್ಲಿ ಆಕೆಗಿದ್ದ ಅಲ್ಪ ಸ್ವಾತಂತ್ರ್ಯ ಮತ್ತು ಅಪರಿಮಿತ ಶಿಕ್ಷೆಯ ಕಥನ ಇದು. ಮಹಿಳೆಯ ಕುರಿತು ಗಂಡು ತಳೆದಿರಬಹುದಾದ ಧೋರಣೆ ಮತ್ತು ನಿಲುವನ್ನು ಈ ಚಿತ್ರ ಯಾವ ಅತಿರೇಕವೂ ಇಲ್ಲದೇ ತೋರಿಸುತ್ತದೆ. ಹೀಗಾಗಿಯೇ ಇದು ಸಿನಿಮಾ ನೋಡುತ್ತಿರುವಷ್ಟು ಹೊತ್ತೂ ಗಂಡನ್ನು ಹೆಣ್ಣಾಗಿಸುವ ಸಿನಿಮಾ. ಈ ಬಗೆ ಸಿನಿಮಾಗಳನ್ನು ಕೊಟ್ಟ ಪುರುಷ ನಿರ್ದೇಶಕರ ಚಿತ್ರಗಳಲ್ಲಿ ಹೆಣ್ಣಿನ ಕುರಿತು ವ್ಯಕ್ತವಾಗುತ್ತಿದ್ದ ಭಾವನೆಗಳಲ್ಲಿ ಅನುಕಂಪ ಮತ್ತು ನ್ಯಾಯಪರತೆ ಕಾಣಿಸುತ್ತಿತ್ತು. ಅಂಥ ಹೆಚ್ಚಿನ ಚಿತ್ರಗಳ ಕತೆಗಾರರು ಪುರುಷರೇ ಆಗಿದ್ದದ್ದೂ ಅದಕ್ಕೆ ಕಾರಣ ಇರಬಹುದು. ಆದರೆ ಅಮ್ಮಚ್ಚಿಯೆಂಬ ನೆನಪು ಚಿತ್ರದಲ್ಲಿ ಅನುಕಂಪಕ್ಕಿಂತ ಹೆಚ್ಚಾಗಿ ಆಕ್ರೋಶ ಮತ್ತು ವ್ಯಂಗ್ಯ ಕಾಣುತ್ತದೆ. ಅದಕ್ಕೆ ಆರ್ದ್ರತೆ ಜೊತೆಯಾಗಿದೆ.

ಬಾಳುವ ಬಾಳು ಬೇರೆ, ಕಾಣುವ ಬಾಳು ಬೇರೆ, ತೋರುವ ಬಾಳು ಬೇರೆ! ಎಲ್ಲ ಕೃತಿಗಳ ವಿಚಾರದಲ್ಲೂ ಇದು ನಿಜವೇ. ಯಾರೋ ಒಂದು ಕಾಲದಲ್ಲಿ ಬಾಳಿದ ಬಾಳನ್ನು ಮತ್ತೊಂದು ಕಾಲದಲ್ಲಿ ನಿಂತವರು ತೋರುವ ಹೊತ್ತಿಗೆ, ಅವರ ಗಮನ ಯಾವುದರ ಮೇಲಿರುತ್ತದೆ ಅನ್ನುವುದು ನೋಡುವವ ಮನೋಧರ್ಮವನ್ನೂ ಸೂಚಿಸುತ್ತದೆ. ಈ ಕಾರಣಕ್ಕೆ ಈ ಚಿತ್ರದಲ್ಲಿ ಬರುವ ಹೆಣ್ಣುಗಳ ಸಂಭ್ರಮದ ಗಳಿಗೆಗಳ ಕಡೆಗೆ ಚಿತ್ರ ಕಣ್ಣುಹಾಯಿಸಿಲ್ಲ. ಅಮ್ಮಚ್ಚಿಯ ಉಲ್ಲಾಸ ಕೂಡ ಆಮೇಲೆ ಕವಿಯಲಿರುವ ದುರಂತಕ್ಕೆ ಮುನ್ನುಡಿಯಂತಿದೆ.

ಚಿತ್ರದ ಅತ್ಯಂತ ವಿಷಾದದ ಕ್ಷಣಗಳಲ್ಲಿ ಹಾಡಿನ ತುಣುಕನ್ನು ಬಳಸಿದ್ದು ಮಾತ್ರ ಥೇಟ್ ರಂಗಭೂಮಿಯ ಶೈಲಿ. ಅಕ್ಕುವಿನ ಪಾತ್ರ ಕೂಡ ರಂಗಭೂಮಿಯಿಂದಲೇ ಎದ್ದು ಬಂದಂತಿದೆ. ಭಜನೆ, ಆರಾಧನೆಯಂಥ ಒಂದೆರಡು ಸಾಂಪ್ರದಾಯಿಕ ಆಚರಣೆಗಳು ಚಿತ್ರಕ್ಕೆ ಅನಗತ್ಯವಾಗಿದ್ದವುಎನ್ನುವುದನ್ನು ಬಿಟ್ಟರೆ ‘ಅಮ್ಮಚ್ಚಿಯೆಂಬ ನೆನಪು’ ಹೆಣ್ಣಿನ ಹೋರಾಟದ ನಿರ್ವಿಣ್ಣ ಪುಟದಂತಿದೆ. 

ಚಿತ್ರ: ಅಮ್ಮಚ್ಚಿಯೆಂಬ ನೆನಪು

ತಾರಾಗಣ: ರಾಜ್ ಬಿ ಶೆಟ್ಟಿ, ವೈಜಯಂತಿ ಅಡಿಗ, ಡಾ. ರಾಧಾಕೃಷ್ಣ ಉರಾಳ, ದಿಯಾ ಪಲಕಲ್, ದೀಪಿಕಾ ಪಿ ಆರಾಧ್ಯ, ಚಂದ್ರಹಾಸ್ ಉಲ್ಲಾಳ್

ನಿರ್ದೇಶನ: ಚಂಪಾ ಪಿ ಶೆಟ್ಟಿ

ನಿರ್ಮಾಣ: ಪ್ರಕಾಶ್ ಪಿ ಶೆಟ್ಟಿ, ವೇಣು ನೆಪೋಲಿಯನ್, ಗೀತಾ ಸುರತ್ಕಲ್

ಛಾಯಾಗ್ರಾಹಣ: ನವೀನ್ ಕುಮಾರ್

ರೇಟಿಂಗ್: ****