‘ನೀವ್ಯಾಕೆ ಮೆಚ್ಚಿಕೊಂಡಿ­ದ್ದೀರಿ?' ಎನ್ನುವ ಪ್ರಶ್ನೆಯನ್ನು ತಾರೆಗಳ ಮುಂದಿಟ್ಟಾಗ ‘ನನ್ನಿಷ್ಟದ ಸಿನಿಮಾ ಇದೇ' ಎಂದು ಮನಸ್ಸು ಬಿಚ್ಚಿ ಹೇಳಿಕೊಂಡಿದ್ದಾರೆ.

ಚಿತ್ರೋತ್ಸವಗಳಿಗೆ, ಸಂವಾದಗಳಿಗೆ ಮಾತ್ರ ಸೀಮಿತ ಎನಿಸಿಕೊಂಡಿದ್ದ ಹೊಸ ಅಲೆಯ ಸಿನಿಮಾಗಳು ಸಾಮಾನ್ಯ ಪ್ರೇಕ್ಷಕನಿಂದ ಹಿಡಿದು ಸ್ಟಾರ್‌ ನಟ- ನಟಿ, ನಿರ್ದೇಶಕ, ನಿರ್ಮಾಪಕರ ಗಮನ ಸೆಳೆಯುತ್ತಿವೆ. ಇತ್ತೀಚೆಗೆ ಬಂದ ಆ ಹೊಸ ಅಲೆಯ ಚಿತ್ರಗಳನ್ನು ‘ನೀವ್ಯಾಕೆ ಮೆಚ್ಚಿಕೊಂಡಿ­ದ್ದೀರಿ?' ಎನ್ನುವ ಪ್ರಶ್ನೆಯನ್ನು ತಾರೆಗಳ ಮುಂದಿಟ್ಟಾಗ ‘ನನ್ನಿಷ್ಟದ ಸಿನಿಮಾ ಇದೇ' ಎಂದು ಮನಸ್ಸು ಬಿಚ್ಚಿ ಹೇಳಿಕೊಂಡಿದ್ದಾರೆ.

ನನ್ನಿಷ್ಟದ ಚಿತ್ರ: ಯು ಟರ್ನ್‌, ರಾಮಾ ರಾಮಾ ರೇ
ಇಷ್ಟವಾಗಿದ್ದು ಯಾಕೆ?:ನ್ಯಾನೋ ಕತೆಗಳು ಅಂತೀವಲ್ಲ, ಅದಕ್ಕಿಂತ ಚಿಕ್ಕ ಕತೆಯೊಂದನ್ನು ಹಿಡಿದು ಅದಕ್ಕೆ ಹಾರರ್‌, ಥ್ರಿಲ್ಲರ್‌ ಬೆರೆಸಿ ಕೊನೆಯ ತನಕ ಕುತೂಹಲ ಉಳಿಸಿಕೊಂಡು ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಆದರೆ, ‘ಯು ಟರ್ನ್‌' ಈ ಅಸಾಧ್ಯವನ್ನು ಸಾಧ್ಯವಾಗಿಸಿದೆ. ಒಬ್ಬ ನಟನಾಗಿ ನನಗೆ ಈ ಚಿತ್ರದಲ್ಲಿ ಮೊದಲು ಕಂಡಿದ್ದು ಇದೇ ಅಂಶ. ನಂತರ ಅದರ ತಾಂತ್ರಿಕತೆಯ ಗುಣಮಟ್ಟಸೂಪರ್‌ ಮತ್ತು ಸಿಂಪಲ್‌. ಇನ್ನು ‘ರಾಮಾ ರಾಮಾ ರೇ' ಚಿತ್ರದ ಪ್ರತಿ ಪಾತ್ರವೂ ಚಿತ್ರ ನೋಡುತ್ತಿದ್ದಾಗ ತಣ್ಣಗೆ ಕೂರಿಸುತ್ತದೆ. ಅದರ ಹಿನ್ನೆಲೆ ಸಂಗೀತ, ಕತೆಯ ವಿಭಿನ್ನ ಹಾದಿ ಪಾತ್ರಧಾರಿಗಳ ಔಟ್‌ ಲುಕ್‌ ಕಾರಣಕ್ಕೆ ಸಿನಿಮಾ ಮುಗಿದ ಮೇಲೂ ಈ ಚಿತ್ರ ನನ್ನನ್ನೂ ಕಾಡುತ್ತಲೇ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ಮುಗ್ಧತೆಯಿಂದ ಕೂಡಿದ ಸಿನಿಮಾ ಎನ್ನುವುದು ಏನಾದರೂ ನಾನು ಇತ್ತೀಚೆಗೆ ನೋಡಿದ್ದೇನೆ ಅಂದರೆ ಅದುವೇ ‘ರಾಮಾ ರಾಮಾ ರೇ'. ಆದರೆ, ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ಜಯರಾಂ ಸಿನಿಮಾ ತೆರೆಗೆ ಬರುವ ಮುನ್ನವೇ ನಿಧನರಾದರು ಎಂದು ಕೇಳ್ಪಟ್ಟೆ. ಅವರು ತಮ್ಮದೇ ಒಳ್ಳೆಯ ಸಿನಿಮಾ ಮಿಸ್‌ ಮಾಡಿಕೊಳ್ಳುವ ಜತೆಗೆ ನಾವು ಒಳ್ಳೆಯ ನಟನನ್ನು ದೂರ ಮಾಡಿಕೊಂಡಿದ್ದೇವೆ. ಹೀಗೆ ಬೇರೆ ಬೇರೆ ಕಾರಣಕ್ಕೆ ಈ ಸಿನಿಮಾಗಳು ನನ್ನ ಮನಸ್ಸಿಗೆ ಹತ್ತಿರವಾಗಿವೆ. ಗುಡ್‌ ಜಾಬ್‌ ಟು ನಿರ್ದೇಶಕರಾದ ಪವನ್‌ ಕುಮಾರ್‌ ಹಾಗೂ ಸತ್ಯ ಪ್ರಕಾಶ್‌.
- ಸುದೀಪ್‌,​ ನಟ

(ವರದಿ: ಆರ್.ಕೇಶವಮೂರ್ತಿ, ಕನ್ನಡಪ್ರಭ)