ದೇಶಾದ್ರಿ ಹೊಸ್ಮನೆ

- ಮರ್ಡರ್ ಮಿಸ್ಟರಿ, ಸಸ್ಪೆನ್ಸ್ ಥ್ರಿಲ್ಲರ್ ನನ್ನ ನೆಚ್ಚಿನ ಜಾನರ್. ಅದನ್ನೇ ದುಡಿಸಿಕೊಂಡು ಈ ತನಕ ಅನೇಕ ಸಿನಿಮಾ ನಿರ್ದೇಶಿಸಿದ್ದೇನೆ, ಅದರಲ್ಲೇ ಸಕ್ಸಸ್ ಕೂಡ ಕಂಡಿದ್ದೇನೆ. ಅಂಥದ್ದೇ ಮತ್ತೊಂದು ಸಿನಿಮಾ ಮಾಡ್ಬೇಕು ಅಂತ ಹೊರಟಾಗ ಸದ್ಯದ ಸಿನಿಮಾ ಟ್ರೆಂಡ್, ಹಾಗೆಯೇ ಬದಲಾದ ತಂತ್ರಜ್ಞಾನ ಎರಡೂ ತಲೆಯಲ್ಲಿದ್ದವು. ಅದಕ್ಕೆ ಪೂರಕವಾಗಿಯೇ ಸಾಕಷ್ಟು ಯೋಚಿಸಿ, ಆಲೋಚಿಸಿ, ಸಮಾಲೋಚಿಸಿ ಸಿನಿಮಾ ಮಾಡಿದ್ದೇನೆ. ತರ್ಕ, ನಿಷ್ಕರ್ಷ, ಪ್ರತ್ಯರ್ಥ, ಕ್ಷಣ ಕ್ಷಣ ಮುಂತಾದ ಸಿನಿಮಾಗಳನ್ನು ನೋಡಿದವರಿಗೆ ಆದ ಅನುಭವ, ಸಿಕ್ಕ ಮನರಂಜನೆ ಇಲ್ಲೂ ಗ್ಯಾರಂಟಿ.

- ಚಿತ್ರಕ್ಕೆ ಚಾಲನೆ ಸಿಕ್ಕಾಗ ಅದಕ್ಕೊಂದು ರೂಪವಿತ್ತು. ಆರು ತಿಂಗಳ ಬಳಿಕ ಅದು ಮತ್ತೊಂದು ರೂಪತಾಳಿತು. ನಂತರ ಮೂರು ತಿಂಗಳಿಗೆ ಹೊಸ ಪೋಷಾಕು ತೊಟ್ಟಿತು. ಆದರೆ, ಕಥೆಯ ಎಳೆಯಲ್ಲಿ ಮಾತ್ರ ಯಾವುದು ಚೇಂಜಸ್ ಆಗಲಿಲ್ಲ. ಬದಲಿಗೆ ಅದರ ಸುತ್ತ ಬದಲಾವಣೆ ಅನಿವಾರ್ಯವಾಗಿತ್ತು. ಒಂದು ಮರ ಸುಂದರವಾಗಿ ಬೆಳೆಯುವಾಗ ಅದರ ಓರೆಕೋರೆಯ ರೆಂಬೆ-ಕೊಂಬೆ ಕತ್ತರಿಸಿದ ಹಾಗಿತ್ತು ಆ ಚೇಂಜಸ್. ಅವೆಲ್ಲ ಚಿತ್ರಕ್ಕೆ ಮತ್ತಷ್ಟು ಹೊಳಪು ಕೊಟ್ಟವು. ಈಗ ಅದನ್ನು ತೆರೆ ಮೇಲೆ ನೋಡಿದಾಗ ಆನಂದ, ಸಂತಸ ಆಗುತ್ತೆ.

ನಾಲ್ಕು ಭಾಷೆಯಲ್ಲಿ ತೆರೆಗೆ ಬರುತ್ತಿರುವ ಮಲ್ಟಿಸ್ಟಾರ್ ಸಿನಿಮಾ. ಇದೊಂದು ಹೆಮ್ಮೆಯ ಕನ್ನಡದ ಸಿನಿಮಾ. ಬೇರೆ ಭಾಷಿಕರಿಂದಲೂ ಸಾಕಷ್ಟು ಬೇಡಿಕೆ ಇದೆ. ಇಂಥ ಚಿತ್ರವನ್ನು ಕನ್ನಡಿಗರೂ ಕೂಡ ತಪ್ಪದೇ ನೋಡಿದರೆ, ನಮ್ಮ ಶ್ರಮ ಸಾರ್ಥಕ - ಸುನೀಲ್ ಕುಮಾರ್  ದೇಸಾಯಿ


 

- ಆರಂಭದಲ್ಲಿ ನಮ್ಮ ಮನಸ್ಸಲ್ಲಿ ಇದ್ದಿದ್ದು ಕನ್ನಡ ಸಿನಿಮಾ ಮಾತ್ರ.ಅದಕ್ಕೆ ತಕ್ಕಂತೆಯೇ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳೋಣ ಅಂತಲೇ ಇದ್ದೆವು. ಆದರೆ ಈ ಹೊತ್ತಿನ ಸಿನಿಮಾ ಟ್ರೆಂಡ್ ನಮ್ಮ ಆಲೋಚನೆ ಲಹರಿ ಬದಲಾಯಿಸಿತು. ಮೇಲಾಗಿ ಸಸ್ಪೆನ್ಸ್, ಥ್ರಿಲ್ಲರ್ ಕತೆ ಅನ್ನೋದು ಯೂನಿವರ್ಸಲ್. ಅದಕ್ಕೆ ಯಾವುದೇ ಭಾಷೆ ಅಥವಾ ಗಡಿಯ ಚೌಕಟ್ಟುಗಳಿಲ್ಲ. ಅದನ್ನೇ ಗಮನದಲ್ಲಿಟ್ಟುಕೊಂಡು ಬಹುಭಾಷೆಗಳಲ್ಲಿ ತರಲು ಹೊರಟೆವು. ಅಲ್ಲಿಂದ ಅದು ಕನ್ನಡದ ಜತೆ ತೆಲುಗು, ತಮಿಳು, ಮಲಯಾಳಂ ಸೇರಿ ಹಿಂದಿಗೂ ವಿಸ್ತರಿಸಿತು. ಆಯಾ ಭಾಷೆಯ ಜನರಿಗೆ ಇದು ಪರಭಾಷೆಯ ಸಿನಿಮಾ ಎನ್ನುವುದಕ್ಕಿಂತ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾವಾಗಿ ರಂಜಿಸುತ್ತದೆ.

- ಚಿತ್ರದ್ದು ರೆಗ್ಯುಲರ್ ಹೀರೊ- ಹೀರೊಯಿನ್ ಸಬ್ಜೆಕ್ಟ್ ಅಲ್ಲ. ಸಿನಿಮಾ ಆರಂಭದ ಮೂರು ನಿಮಿಷದ ದೃಶ್ಯವೊಂದರಲ್ಲಿ ಈ ಇಬ್ಬರೂ ಸೇರುತ್ತಾರೆ. ಅವರು ಮತ್ತೆ ಒಟ್ಟಾಗಿ ಕಾಣುವುದು ಕೊನೆಯ ಮೂರು ನಿಮಿಷಗಳಲ್ಲಿ ಮಾತ್ರ. ಇಬ್ಬರದೂ ಒಂದೊಂದು ಪಾತ್ರವಷ್ಟೇ. ಇಲ್ಲಿ ಪ್ರತಿಯೊಂದು ಪಾತ್ರಗಳ ಸುತ್ತವೂ ಕಥೆ ಚಲಿಸುತ್ತದೆ. ಹಾಗೊಂದು ವಿಶೇಷತೆ ಕತೆಯಲ್ಲೂ, ಪಾತ್ರಗಳಲ್ಲೂ ಇದೆ. ಅದು ಈ ಚಿತ್ರದ ಕತೆ ಮತ್ತು ನಿರೂಪಣೆಯ ವಿಶೇಷತೆ.

- ಸಿನಿಮಾದ ಟೈಟಲ್‌ಗೆ ಮೊದಲು ಬಂದ ಪ್ರತಿಕ್ರಿಯೆ ವಿಚಿತ್ರವಾಗಿತ್ತು. ಇದು ಉತ್ಕರ್ಷದ ಇನ್ನೊಂದು ರೂಪ ಅಂದರು. ಹಾಗಂತ ನನ್ನ ಚಿತ್ರಕ್ಕೆ ಮಲ್ಲಿಗೆ ಹೂವು, ಹೂವಿನ ವಾಸನೆ, ಸುಮಧುರ ಅಂತೆಲ್ಲ ಹೆಸರಿಡಲು ಆಗುತ್ತಾ? ನನಗೆ ಅದೆಲ್ಲ ಒಗ್ಗುವುದಿಲ್ಲ. ನನ್ನ ಕತೆಗಳಲ್ಲಿ ಸಂಘರ್ಷ ಇರುತ್ತೆ, ಘರ್ಷಣೆ ಇರುತ್ತೆ. ಅದಕ್ಕೆ ಪೂರಕವಾಗಿ ಒಂದು ಟೈಟಲ್ ಬೇಕಿತ್ತು. ಆಗ ಹೊಳೆದಿದ್ದು ಉದ್ಘರ್ಷ. ಅದು ಇಡೀ ಕತೆಗೆ ಪೂರಕವಾದ ಪದ. ಅದಲ್ಲೇನೋ ಸೌಂಡ್ ಇದೆ. ಇದರ ಅರ್ಥ ಏನೆಂದು ಗೊತ್ತಿಲ್ಲ. ಆದರೆ ವಾರ್, ಥ್ರಿಲ್ಲರ್ ಎಲ್ಲವೂ ಅದರಲ್ಲಿದೆ. ನನ್ನ ಮಟ್ಟಿಗೆ ಅದು ಸಾಲಿಡ್ ಟೈಟಲ್.

ನಾನು ಹಿರಿಯ ನಿರ್ದೇಶಕ ನಿಜ, ಆದರೆ ಹಳೆಯ ನಿರ್ದೇಶಕ ಅಲ್ಲ. ಕಾಲಕ್ಕೆ ತಕ್ಕಂತೆ ಅಪಡೇಟೆಡ್ ಆಗಿದ್ದೇನೆ. ಅದನ್ನು ಈ ಚಿತ್ರದಲ್ಲಿ ತೋರಿಸಿದ್ದೇನೆ. ಚಿತ್ರದ ತಾಂತ್ರಿಕ ಕೆಲಸದಲ್ಲಿ ಪ್ರತಿಯೊಂದನ್ನು ಎಚ್ಚರ ವಹಿಸಿ ಮಾಡಿದ್ದೇವೆ. ಕೆಂಪರಾಜು ಸಂಕಲನ, ಪಿ.ರಾಜನ್ ಛಾಯಾಗ್ರಹಣ, ವೆಂಕಟ್ ಹಾಗೂ ನಭಾ ಸುಬ್ಬು ಸಾಹಸ ಎಲ್ಲವೂ ಅಲ್ಟಿಮೇಟ್- ಸುನೀಲ್ ಕುಮಾರ್  ದೇಸಾಯಿ

- ಕತೆ ಏನು ಅಂತ ಬಂದಾಗ ನಾನು ಹೆಚ್ಚು ಚರ್ಚಿಸುವುದಕ್ಕೆ ಹೋಗುವುದಿಲ್ಲ. ನನ್ನ ಶೈಲಿ ಏನು ಅನ್ನೋದು ಪ್ರೇಕ್ಷಕರಿಗೂಗೊತ್ತಿದೆ. ಇದು ಕೂಡ ಅಂಥದ್ದೇ ಒಂದು ಕತೆ. ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿಯ ಸುತ್ತ ಹೊಸೆದಿರುವ ಕಥೆ ಇದು. ರೆಸಾರ್ಟ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ. ನಾಯಕ ಮತ್ತು ನಾಯಕಿ ಪರಸ್ಪರ ಭೇಟಿಯಾಗಲು ಅಲ್ಲಿಗೆ ಬಂದಿರುತ್ತಾರೆ. ಆಗ ಅಲ್ಲೊಂದು ಕೊಲೆಯಾಗುತ್ತದೆ. ಅರಿವಿಲ್ಲದೆ ಅವರಿಬ್ಬರೂ ನಿಗೂಢ ಜಾಲದೊಳಗೆ ಸಿಲುಕುತ್ತಾರೆ. ಅಲ್ಲಿಂದೇನಾಗುತ್ತೆ ಎನ್ನುವುದೇ ಸಸ್ಪೆನ್ಸ್.

- ನನ್ನ ಉಳಿದೆಲ್ಲ ಚಿತ್ರಕ್ಕಿಂತ ಇದು ತುಂಬಾ ಭಿನ್ನ. ಆಗಿನ ಕಾಲಕ್ಕೆ ಅವುಗಳ ಕಥೆ ಸರಿ ಹೊಂದುತ್ತಿತ್ತು. ‘ಬೆಳದಿಂಗಳ ಬಾಲೆ’ ಚಿತ್ರ ತೆರೆಕಂಡಿದ್ದು ಎರಡೂವರೆ ದಶಕದ ಹಿಂದೆ. ಆಕೆ ಒಬ್ಬೊಬ್ಬರ ಮನದಲ್ಲಿ ಒಂದೊಂದು ರೂಪದಲ್ಲಿ ಅಚ್ಚಾಗಿ ಕುಳಿತಿದ್ದಳು. ಆಕೆಯನ್ನು ಯಾವ ರೂಪದಲ್ಲಿ ಬೇಕಾದರೂ ಕಲ್ಪಿಸಿಕೊಳ್ಳುವುದು ಪ್ರೇಕ್ಷಕನ ಹಕ್ಕು. ಆದರೆ, ಇದು ಹಾಗಲ್ಲ. ‘ಉದ್ಘರ್ಷ’ ಈಗಿನ ಜಮಾನಕ್ಕೆ ಅಪ್‌ಡೇಟೆಡ್ ಆಗಿರುವ ಚಿತ್ರ. ಜನರ ಮನದಲ್ಲಿ ಘರ್ಷಣೆ ಇದೆ. ಆ ಘರ್ಷಣೆ ಚಿತ್ರದಲ್ಲಿಯೂ ಇದೆ. ತಂತ್ರಜ್ಞಾನದ ಬಳಕೆ, ಚಿತ್ರ ನೋಡುವ ರೀತಿಯೊಂದಿಗೆ ಟೈಮಿಂಗ್‌ನಲ್ಲಿ ಭಿನ್ನವಾದ ಸಿನಿಮಾ. ಈಗ ತೆರೆಕಾಣುತ್ತಿರುವ ಸಿನಿಮಾಗಳಿಗೆ
ಹೋಲಿಸಿದರೆ ಹೊಸ ಆಯಾಮದ ಚಿತ್ರ.

- ಇದು ಮಲ್ಟಿ ಸ್ಟಾರ್ ಸಿನಿಮಾ ಆಗಿದ್ದು ಕೂಡ ಕತೆಗೆ ಪೂರಕವಾಗಿಯೇ. ಈ ಕತೆಗೆ ಇಮೇಜ್ ಇರುವ ನಟನ ಅಗತ್ಯವಿರಲಿಲ್ಲ. ಅಂತಹ ನಟ ಈ ಪಾತ್ರ ನಿರ್ವಹಿಸಿದ್ದರೆ ನ್ಯಾಯ ದೊರಕುತ್ತಿರಲಿಲ್ಲ. ಪರಿಚಿತವಲ್ಲದ ಮುಖವೊಂದು ಬೇಕಿತ್ತು. ಅದಕ್ಕಾಗಿ ಸಾಕಷ್ಟು ಹುಡುಕಾಟ ನಡೆಸಿದೆ. ಆಗ ಸಿಕ್ಕಿದ್ದೇ ಠಾಕೂರ್ ಅನೂಪ್ ಸಿಂಗ್. ಅವರು ಇಲ್ಲಿಯವರೆಗೆ ನಟಿಸಿರುವ ಚಿತ್ರಗಳಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಅವರು ಮಿಸ್ಟರ್ ವರ್ಲ್ಡ್ ಆಗಿದ್ದವರು. ನನ್ನ ಚಿತ್ರಕ್ಕೆ ಬೇಕಾದ ನಾಯಕನ ಗುಣ ಅವರಲ್ಲಿತ್ತು. ಹಾಗಾಗಿ, ಅವರನ್ನು ಆಯ್ಕೆ ಮಾಡಿಕೊಂಡೆವು.

- ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ತಾರಾಗಣ. ಈಗ ನಾವೇನು ಬಹುಭಾಷೆಗಳಲ್ಲಿ ಬರುತ್ತಿದ್ದೆವೋ ಅದಕ್ಕೆ ಪೂರಕವಾಗಿಯೇ ಮುಂಬೈ, ತಮಿಳುನಾಡು, ಕೇರಳ, ಆಂಧ್ರದ ಕಲಾವಿದರೂ ಚಿತ್ರದಲ್ಲಿದ್ದಾರೆ. ಮಾರುಕಟ್ಟೆಯ ದೃಷ್ಟಿಗಿಂತ ಆಯಾ ಪಾತ್ರಗಳಿಗೆ ತಕ್ಕಂತೆ, ವಿಶೇಷವಾಗಿ ಬರಬೇಕೆನ್ನುವ ಉತ್ಸಾಹದಿಂದ ಕಲಾವಿದರ ಆಯ್ಕೆ ನಡೆಯಿತು. ಕಾಕತಾಳೀಯ ಎನ್ನುವ ಹಾಗೆ ಅದು ಬಹುಭಾಷೆಗೆ ಹೊರಟಾಗ ಎಲ್ಲವೂ ಹೇಳಿ ಮಾಡಿಸಿದಂತೆಯೇ ಆಯಿತು. ಕಬೀರ್ ದುಹಾನ್ ಸಿಂಗ್, ಹರ್ಷಿಕಾ ಪೂಣಚ್ಚ, ಪ್ರಭಾಕರ್, ಸಾಯಿ ಧನ್ಸಿಕಾ, ಕಿಶೋರ್, ತಾನ್ಯಾ ಹೋಪ್, ಶ್ರದ್ಧಾ ದಾಸ್ ಅಷ್ಟು ಭಾಷೆಯ ಪ್ರೇಕ್ಷಕರಿಗೂ ಇಷ್ಟವಾಗುವ ಕಲಾವಿದರು.

- ಮೇಕಿಂಗ್ ದೃಷ್ಟಿಯಲ್ಲೂ ಇದೊಂದು ಸ್ಪೆಷಲ್ ಸಿನಿಮಾ. 60 ದಿನಗಳ ಕಾಲ ನಾವು ಚಿತ್ರೀಕರಣ ಮಾಡಿದ್ದೇವೆ. ಮಡಿಕೇರಿ, ಹೈದರಾಬಾದ್‌ಗಳಲ್ಲಿ ಚಿತ್ರೀಕರಣ ಆಗಿದೆ. ಚಿತ್ರೀಕರಣಕ್ಕೆ ಅಂತ ನಾವು ಮಡಿಕೇರಿಗೆ ಹೋದಾಗ ಆಗಿನ್ನು ಅಲ್ಲಿ ಪ್ರವಾಹ ಆಗಿರಲಿಲ್ಲ.  ನಮಗೆ ಬೇಕೆನಿಸಿದ ಸುಂದರ ಜಾಗಗಳಲ್ಲಿ ಚಿತ್ರೀಕರಣ ನಡೆಸಿದೆವು. ಬೆಂಗಳೂರಿನಿಂದ ಮಡಿಕೇರಿಗೆ ಟ್ರಾವೆಲ್ ಆಗುವ ಕತೆ. ಹಾಗಾಗಿ ಅಲ್ಲಿ ಚಿತ್ರೀಕರಣ ಮಾಡಿದ್ದು ವಿಶೇಷ ಅನುಭವ. ಅಲ್ಲಿಂದ ಬಂದು ಹೈದರಾಬಾದ್‌ಗೆ ಹೋದೆವು. ಮತ್ತೆ ಮಡಿಕೇರಿಗೆ ಹೊರಟಾಗ ಪ್ರವಾಹ ದೊಡ್ಡ ಅನಾಹುತ ಸೃಷ್ಟಿಸಿತ್ತು. ಆ ನೋವಿನಲ್ಲೇ ಉಳಿದ ಚಿತ್ರೀಕರಣ ಮುಗಿಸಿಕೊಂಡು ಬಂದೆವು.

- ಮರ್ಡರ್ ಮಿಸ್ಟರಿಯ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಸಿನಿಮಾ ಅಂದಾಗ ಸೌಂಡ್ ಎಫೆಕ್ಟ್ ಪ್ರಧಾನ ಪಾತ್ರ ವಹಿಸುತ್ತದೆ. ಬಾಲಿವುಡ್ ಮ್ಯೂಸಿಕ್ ಡೈರೆಕ್ಟರ್ ಸಂಜೋಯ್ ಚೌಧುರಿ ಆ ಕೆಲಸ ಮಾಡಿದ್ದಾರೆ. ಸಂಜೋಯ್ ಬಾಲಿವುಡ್‌ನ ಬಹು ಬೇಡಿಕೆಯ ಸಂಗೀತ ನಿರ್ದೇಶಕ. ಲೆಕ್ಕವಿಲ್ಲದಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಸಕ್ಸಸ್ ಕಂಡಿದ್ದಾರೆ. ಅವರೇ ಬೇಕು ಅಂತ ಡಿಸೈಡ್ ಮಾಡಿದ್ದಕ್ಕೆ ಕಾರಣ ಕಾಲ್ವಿಟಿ. ಚಿತ್ರದಲ್ಲಿ ಹಾಡುಗಳಿಲ್ಲ. ಆದರೂ ಹಿನ್ನೆಲೆ ಸಂಗೀತದಲ್ಲಿ ಸಂಜಯ್ ತುಂಬಾ ಇಷ್ಟವಾಗುತ್ತಾರೆ.