‘ವೀಕೆಂಡ್‌ ವಿತ್‌ ರಮೇಶ್‌’ ನಾಲ್ಕನೇ ಸೀಸನ್‌ಗೆ ಸಿದ್ಧರಾಗಿದ್ದೀರಿ, ಹೇಗಿದೆ ಸಿದ್ಧತೆ?

ಎರಡೂವರೆ ವರ್ಷದ ನಂತರ ಮತ್ತೆ ಶುರುವಾಗುತ್ತಿದೆ. ಜನರು ಕೂಡ ಕೇಳುತ್ತಿದ್ದರು. ಅಂತೆಯೇ ಮತ್ತೊಂದು ಸೀಸನ್‌ ಬರುತ್ತಿದೆ. ಈಗಾಗಲೇ ಚಾನೆಲ್‌ ಕಡೆಯಿಂದ ಅಧಿಕೃತ ಸಿದ್ಥತೆ ನಡೆದಿದೆ. ವರ್ಕ್ ಕೂಡ ಶುರುವಾಗಿದೆ. ಪೋಟೋಶೂಟ್‌ ಆಗಿದೆ. ಟ್ರೇಲರ್‌ಗೂ ಚಿತ್ರೀಕರಣ ನಡೆದಿದೆ. ಅದರಲ್ಲಿ ಈ ಬಾರಿ ತುಸು ವಿಶೇಷತೆಯಿದೆ. ಕುಶಾಲಗನಗರದಿಂದ ಮುಂದೆ ಮಾಂದಲಪಟ್ಟಿಎನ್ನುವ ಬೆಟ್ಟವಿದೆ. ಅಲ್ಲಿ ಅದರ ಟ್ರೈಲರ್‌ ಶೂಟ್‌ ನಡೆದಿದೆ. ಸಾಧನೆಯಲ್ಲಿ ಎತ್ತರಕ್ಕೇರಿದವರ ಕತೆ ಅದು. ಅವರೆಡರ ಹೋಲಿಕೆಗೆ ಹೊಳೆದಿದ್ದು ಈ ರೀತಿಯ ಟ್ರೇಲರ್‌ ಶೂಟಿಂಗ್‌ ಆಲೋಚನೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ ಸೀಸನ್‌ 4 ರ ಮೊದಲ ಅತಿಥಿ ಎನ್ನುವುದು ನಿಜವಾ?

ಹೌದು. ಹಿಂದಿನ ಸೀಸನ್‌ಗಳಲ್ಲೇ ಅವರು ‘ವೀಕೆಂಡ್‌ ವಿತ್‌ ರಮೇಶ್‌’ ಶೋಗೆ ಬರಬೇಕಿತ್ತು. ಜನರೇ ಹಾಗೊಂದು ಸಲಹೆ ನೀಡಿದ್ದರು. ಅದು ಅವರ ಒತ್ತಾಯವೂ ಆಗಿತ್ತು. ಚಾನೆಲ್‌ ಕಡೆಯಿಂದ ಆ ಪ್ರಯತ್ನ ನಡೆದಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಆ ಸಮಯ ಈಗ ಬಂದಿದೆ. ನಾನು ಇತ್ತೀಚೆಗೆ ಮಹಾಮಸ್ತಾಭಿಷೇಕದ ಕಾರ್ಯಕ್ರಮಕ್ಕೆ ಧರ್ಮಸ್ಥಳಕ್ಕೆ ಹೋಗಿದ್ದೆ. ಅಲ್ಲಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದಾಗ ಈ ವಿಚಾರವನ್ನು ಪ್ರಸ್ಥಾಪಿಸಿದ್ದೆ. ಶೋ ಶುರುವಾದ್ರೆ ನೀವು ಬರಬೇಕು ಅಂತ ಮನವಿ ಮಾಡಿದ್ದೆ. ಅದಕ್ಕವರು ಓಕೆ ಅಂತಲೂ ಹೇಳಿದ್ದರು. ಅಷ್ಟುದೊಡ್ಡ ಸಾಧಕರು ನಮ್ಮ ಶೋಗೆ ಬರ್ತಿರೋದು ಅದು ನಮ್ಮ ಸೌಭಾಗ್ಯ. ಅವರ ಜತೆಗೆ ಲೇಖಕಿ ಸುಧಾ ಮೂರ್ತಿ ಅವರು ಇದ್ದಾರೆ. ಅಂತಹ ದೊಡ್ಡು ಸಾಧಕರ ಮಾತು ಕೇಳುವ ಮತ್ತೊಂದು ಸಂದರ್ಭ.

ಹಿಂದಿನ ಆ ಮೂರು ಸೀಸನ್‌ಗೆ ಹೋಲಿಸಿದ್ರೆ, 4ರಲ್ಲಿ ಏನಾದ್ರು ವಿಶೇಷತೆ ಇರುತ್ತಾ?

ಅಂಥದ್ದೇನು ಇರೋದಿಲ್ಲ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಪಾರವಾದ ಸಾಧನೆ ಮಾಡಿದವರನ್ನು ಆಹ್ವಾನಿಸಿ, ಅವರ ಸಾಧನೆಯ ದಾರಿಯನ್ನು ಒಮ್ಮೆ ತಿರುಗಿ ನೋಡುವುದು, ಅವರ ಆಪ್ತರು ಹೇಳುವ ಮಾತುಗಳನ್ನು ಕೇಳುವುದು, ಸಾಧಕರ ಬದುಕು ಮತ್ತೊಬ್ಬರಿಗೆ ಸ್ಫೂರ್ತಿ ಆಗುವಂತೆ ಕಟ್ಟಿಕೊಡುವುದು ಈ ಶೋ ಉದ್ದೇಶ. ಇಲ್ಲೂ ಅದೇ ಇರುತ್ತೆ. ಸಾಧಕರು ಮಾತ್ರ ಹೊಸಬರು. ಹಾಗೆಯೇ ಅವರ ಸಾಧನೆಯ ಯಶೋಗಾಥೆ ಹೊಸದು. ಅದು ಬಿಟ್ಟರೆ ನನ್ನ ಗೆಟಪ್‌ ಹೊಸತಾಗಿ ಕಾಣಿಸಬಹುದು. ಯಾಕಂದ್ರೆ ಸಿನಿಮಾ ಗೆಟಪ್‌ನಲ್ಲೇ ಒಂದಷ್ಟುಎಪಿಸೋಡ್‌ ಮಾಡಬೇಕಾಗಿದೆ. ಏಪ್ರಿಲ್‌ ಕಳೆದರೆ ಎಂದಿನಂತೆ ನನ್ನ ಗೆಟಪ್‌.

ಪ್ರತಿ ಸೀಸನ್‌ ನಿಮಗೆ ಹೇಗೆ ವಿಶೇಷ, ಎಷ್ಟುವೈಶಿಷ್ಟ್ಯ?

ನಾನಿನ್ನು ಕಲಿಕೆಯ ವಿದ್ಯಾರ್ಥಿ. ಸಿನಿಮಾವೇ ಆಗಲಿ, ವಿಕೇಂಡ್‌ ವಿತ್‌ ರಮೇಶ್‌ ನಂತಹ ರಿಯಾಲಿಟಿ ಶೋಗಳೇ ಆಗಲಿ, ಶ್ರದ್ಧೆಯಿಂದ ಅಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುವುದು ನನ್ನ ವ್ಯಕ್ತಿಗತ ಸ್ವಭಾವ. ಆ ದೃಷ್ಟಿಯಲ್ಲಿ ‘ವೀಕೆಂಡ್‌ ವಿತ್‌ ರಮೇಶ್‌’ ಪ್ರತಿ ಶೋ ನಲ್ಲೂ ಸಾಕಷ್ಟುಕಲಿತಿದ್ದೇನೆ. ಕಲಿಯುತ್ತಲೇ ಇದ್ದೇನೆ. ದೊಡ್ಡ ದೊಡ್ಡ ಸಾಧಕರ ಸಾಧನೆಯ ಯಶೋಗಾಥೆ ಕೇಳುತ್ತಾ ಹೋದಾಗ ಥ್ರಿಲ್‌ ಆಗಿದ್ದೇನೆ. ಅವರ ಸಾಧನೆ ಮುಂದೆ ನಾನೇನು ಅಲ್ಲ ಅಂತ ಕೊರಗಿದ್ದೇನೆ. ಕೆಲವರ ಸಾಧನೆ ಕಂಡಾಗ ಅವರಿಗಿಂತ ನಾನೇ ಎಷ್ಟೋ ಉತ್ತಮ ಅಂತಲೂ ತೃಪ್ತಿ ಪಟ್ಟಿದ್ದೇನೆ. ಇದು ಪ್ರತಿ ಸೀಸನ್‌ನಲ್ಲೂ ಆದ ಅನುಭವ. ಇದು ನನ್ನನ್ನು ನಾನು ಕಂಡುಕೊಳ್ಳಲು ದೊಡ್ಡ ವೇದಿಕೆ ಆಗಿದೆ.

ವೀಕೆಂಡ್‌ ವಿತ್‌ ರಮೇಶ್‌ ಶೋನ ಒಟ್ಟು ಫಲಿತಾಂಶದ ಬಗ್ಗೆ ಹೇಳುವುದಾದರೆ?

ಚಾನೆಲ್‌ಗಳಲ್ಲಿ ಬರುವ ಇಂತಹ ಶೋಗಳ ಮೂಲ ಉದ್ದೇಶ ಹೆಚ್ಚು ವೀಕ್ಷಕರನ್ನು ತಲುಪುವುದು, ಆ ಮೂಲಕ ಟಿಆರ್‌ಪಿ ಹೆಚ್ಚಿಸಿಕೊಳ್ಳುವುದು ಎನ್ನುವುದೇನು ಹೊಸತಲ್ಲ. ಇದರಲ್ಲಿ ಝೀ ಕನ್ನಡ ಗೆದ್ದಿದೆ. ಜನರ ಒತ್ತಾಯದಿಂದಲೇ ಈ ಶೋ ಮತ್ತೆ ಶುರುವಾಗುತ್ತಿದೆಯೆಂದರೆ, ಅದರ ರೀಚ್‌ ಹೇಗಿದೆ ಎನ್ನುವುದನ್ನು ಹೆಚ್ಚು ಹೇಳಬೇಕಿಲ್ಲ. ಹಾಗೆಯೇ ಜನರ ಮನ ಗೆದ್ದಿದೆ. ಅದೆಷ್ಟೋ ಯುವಕರಿಗೂ ಪ್ರೇರಣೆ ನೀಡಿದೆ. ನಂಗೊಂದು ವಾಟ್ಸಾಪ್‌ ಬಂದಿತ್ತು. ಒಬ್ಬ ಯುವಕ ತುಂಬಾ ಸುಂದರವಾಗಿ ತನ್ನ ಅನಿಸಿಕೆ ದಾಖಲಿಸಿದ್ದ. ಪ್ರಪಂಚದಲ್ಲಿ ಅದೆಷ್ಟೋ ಸಾಧನೆ ಮಾಡಿದವರು, ಜನರಿಗೆ ಗೊತ್ತಾಗಿದೆಯೋ ಸತ್ತು ಹೋಗಿದ್ದಾರೆ. ಅವರು ತಮ್ಮ ಸಾಧನೆಗಳ ಮೂಲಕ ಜೀವಂತವಾಗುಳಿಯಬೇಕಾದ್ರೆ, ಅವರ ಸಾಧನೆಗಳು ಜನರಿಗೆ ಗೊತ್ತಾಗಲೇಬೇಕು. ಹಾಗೆ ಗೊತ್ತಾಗಲು ವೀಕೆಂಡ್‌ ವಿತ್‌ ರಮೇಶ್‌ ನಂತಹ ಶೋ ದೊಡ್ಡ ವೇದಿಕೆ ಎನ್ನುವುದು ಆತನ ಅಭಿಪ್ರಾಯ. ಅಲ್ಲಿಗೆ ಶೋನ ಸಾರ್ಥಕ.

ಒಂದೆಡೆ ಕಿರುತೆರೆ ಮತ್ತೊಂದೆಡೆ ಸಿನಿಮಾ, ಅವೆರೆಡರ ಒತ್ತಡವನ್ನು ಹೇಗೆ ನಿಭಾಸುತ್ತೀರಿ?

ನನಗದು ಒತ್ತಡ ಎನಿಸಿಲ್ಲ. ನಿತ್ಯ ಕೆಲಸ, ಬ್ಯುಸಿ ಆಗಿರಬೇಕು ಎನ್ನುವ ಸ್ವಭಾವ ನನ್ನದು. ನೀವು ಮಾಡುವ ಕೆಲಸದಲ್ಲಿ ಖುಷಿಯಿದೆ, ನೆಮ್ಮೆದಿ ಸಿಗುತ್ತೆ. ಅದು ಜನರಿಗೂ ಮೆಚ್ಚುಗೆ ಆಗುತ್ತೆ. ಅದರ ಉದ್ದೇಶವೂ ಈಡೇರುತ್ತೆ ಅಂದ್ರೆ ಯಾವ್ದೆ ಕೆಲಸ ನಿಮ್ಗೆ ಒತ್ತಡ ಅಂತ ಎನಿಸೋದಿಲ್ಲ. ನನಗೆ ನಾನು ಮಾಡುವ ಪ್ರತಿ ಕೆಲಸವೂ ಅಂತ ಖುಷಿ ಕೊಟ್ಟಿದೆ. ಇದು ನನ್ನ ಅದೃಷ್ಟ. ಕೆಲವರಿಗೆ ಮಾತ್ರ ಇಂತಹ ಅವಕಾಶ ಸಿಕ್ಕಿರಬಹುದು. ಅದರಲ್ಲಿ ನಾನು ಒಬ್ಬ. ಪ್ರತಿ ಕೆಲಸವನ್ನು ನಾನು ಇಷ್ಟಪಟ್ಟೆಮಾಡುತ್ತೇನೆ. ಮಾಡೋ ಕೆಲಸದಲ್ಲಿ ಎಲ್ಲವೂ ಸಿಗುತ್ತಿದೆ. ಹಾಗಾಗಿ ದಿನದ 24 ತಾಸು ಬ್ಯುಸಿ ಇದ್ದರೂ ನಾನು ಒತ್ತಡ ಅಂತ ಅಂದುಕೊಂಡಿದ್ದಿಲ್ಲ. ಸಿನಿಮಾ ಮತ್ತು ಟಿವಿ ಎರಡರಲ್ಲೂ ಅಷ್ಟೆ.

ಒಂದು ವಿಕೇಂಡ್‌ ವಿತ್‌ ರಮೇಶ್‌, ಮತ್ತೊಂದೆಡೆ ಕೋಟ್ಯಾಧಿಪತಿ ಎರಡು ಒಟ್ಟಿಗೆ ಕಿರುತೆರೆಯಲ್ಲಿ ಶುರುವಾಗುತ್ತಿವೆ...

ಇದು ಜನರಿಗೆ ಎಕ್ಸೈಟ್‌ ಅಂತೆನಿಸಬಹುದು, ಆದ್ರೆ ನನಗಾಗಲಿ, ಪುನೀತ್‌ ಅವರಿಗಾಗಲಿ ಇದೆಲ್ಲ ಸಿನಿಮಾದ ಹಾಗೆಯೇ. ಒಂದು ಬಾರಿ ನಾನೂ ಕೂಡ ‘ ಕೋಟ್ಯಾಧಿಪತಿ’ ಕಾರ್ಯಕ್ರಮಕ್ಕೆ ನಿರೂಪಕನಾಗಿದ್ದೆ. ಆಗ ಪುನೀತ್‌ ಅವರು ಸಿನಮಾದಲ್ಲಿ ಬ್ಯುಸಿ ಇದ್ದರು. ಈಗ ಅದು ಕಲರ್ಸ್‌ಗೆ ಸಿಫ್ಟ್‌ ಆಗಿದೆ. ಅಲ್ಲಿ ಅದಕ್ಕೆ ಅದರದ್ದೇ ಆದ ಆಡಿಯನ್ಸ್‌ ಇರುತ್ತಾರೆ. ನಮ್ಮ ಶೋಗೂ ಅದರದ್ದೇ ಆದ ಆಡಿಯನ್ಸ್‌ ಇದ್ದಾರೆ. ಹಾಗಾಗಿ ಅದೊಂದು ಸ್ಪರ್ಧೆ, ಫೈಪೋಟಿ ಅಂತ ನನಗಿಸೋದಿಲ್ಲ. ಹಾಗೆ ನೋಡಿದರೆ ಕಿರುತೆರೆ ವೀಕ್ಷಕರಿಗೆ ಇದು ಸಂಭ್ರಮ.

ಕಿರುತೆರೆಗೆ ಸೀರಿಯಲ್‌ ನಿರ್ಮಾಪಕರಾಗಿಯೂ ಬಂದಿದ್ದೀರಿ, ಹೇಗಿದೆ ನಿರ್ಮಾಣದ ಸಾಹಸ?

ನಂದಿನಿ ಅಂತ ಸೀರಿಯಲ್‌. ನಮ್ಮದೇ ಪ್ರೊಡಕ್ಷನ್‌ ಮೂಲಕ ನಿರ್ಮಾಣವಾಗುತ್ತಿದೆ. ನನ್ನ ರಿಲೇಷನ್‌ ಒಬ್ಬರು ಅದರ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ಸೀರಿಯಲ್‌ ಜಗತ್ತಿನಲ್ಲೂ ಈಗ ದೊಡ್ಡ ಪೈಪೋಟಿಯಿದೆ. ಆದರೂ ಒಳ್ಳೆಯ ಟಿಆರ್‌ಪಿ ಅದಕ್ಕಿದೆ. ಖುಷಿ ಆಗುತ್ತಿದೆ.ಕಂಟೆಂಟ್‌ ಚೆನ್ನಾಗಿದೆ ಅನ್ನೋದು ವೀಕ್ಷಕರ ಅಭಿಪ್ರಾಯ. ವಿಚಿತ್ರ ಅಂದ್ರೆ ದೆವ್ವ, ಭೂತದ ಸಬ್ಜೆಕ್ಟ್ ಅದು. ನಂಗೆ ಹೊಸದು.

ನಿಮ್ಮ ನಿರ್ದೇಶನದ ‘ಬಟರ್‌ಫ್ಲೈ’ ರಿಲೀಸ್‌ ತಡವಾಗಿದ್ದೇಕೆ?

ತಡವಾಗಿಲ್ಲ. ಮೊನ್ನೆಯಷ್ಟೇ ಸೆನ್ಸಾರ್‌ ಮುಗಿಸಿದೆ. ನಾಲ್ಕು ಭಾಷೆಯಲ್ಲೂ ಒಟ್ಟಿಗೆ ರಿಲೀಸ್‌ ಮಾಡೋಣ ಅನ್ನೋದು ನಿರ್ಮಾಪಕರ ಆಸೆ. ಅದಕ್ಕೆ ತಕ್ಕಂತೆ ಸಿದ್ಧತೆ ನಡೆಯುತ್ತಿದೆ. ಎಲೆಕ್ಷನ್‌ ಬೇರೆ ಬಂತು, ಮೇಲಾಗಿ ಐಪಿಎಲ್‌, ಎಕ್ಸಾಂ ಅಂತೆಲ್ಲ ರಿಲೀಸ್‌ಗೆ ಅಡಚಣೆಗಳಿವೆ. ಸೂಕ್ತ ಸಮಯ ನೋಡಿಕೊಂಡು ಬರಬೇಕಿದೆ. ಅಂತಹ ಸಮಯ ನಾಲ್ಕು ಭಾಷೆಗಳಲ್ಲೂ ಇರಬೇಕು. ಬಹುತೇಕ ಮೇ ತಿಂಗಳ ಮೊದಲ ವಾರ ತೆರೆಗೆ ಗ್ಯಾರಂಟಿ.

‘ಶಿವಾಜಿ ಸುರತ್ಕಲ್‌’ ಸಿನಿಮಾದ ನಿಮ್ಮ ಪಾತ್ರದ ಗೆಟಪ್‌ ವಿಭಿನ್ನವಾಗಿದೆ, ಪಾತ್ರದ ವಿಶೇಷತೆ ಏನು?

ಸದ್ಯಕ್ಕೆ ಅದರ ಚಿತ್ರೀಕರಣದಲ್ಲೇ ಬ್ಯುಸಿ ಆಗಿದ್ದೇನೆ. ಕುಶಾಲ ನಗರ, ಮೈಸೂರು ಸುತ್ತಮುತ್ತ ಶೂಟಿಂಗ್‌ ನಡೆಯುತ್ತಿದೆ. ಆಕಾಶ್‌ ಶ್ರೀವತ್ಸ ಅಂತ ನಿರ್ದೇಶಕರು. ನನ್ನ ಹತ್ತಿರ ಸಹಾಯಕರಾಗಿದ್ದರು. ತುಂಬಾ ಒಳ್ಳೆಯ ಸಬ್ಜೆಕ್ಟ್. ಸೈಕಾಲಜಿಕಲ್‌ ಥ್ರಿಲ್ಲರ್‌ ಸಿನಿಮಾ. ಒಂದು ಕ್ರೈಮ್‌ ಅನ್ನು ಭೇದಿಸುವ ಕತೆ. ಅಲ್ಲಿ ನಾನೊಬ್ಬ ಪತ್ತೇದಾರಿ. ಶಾರ್ಲಾಕ್‌ ಹೋಮ್ಸ್‌ ಶೈಲಿಯ ಪಾತ್ರ. ಶಿವಾಜಿ ಅನ್ನೋದು ಪಾತ್ರದ ಹೆಸರು. ಮಿಂಚಿನ ಆಲೋಚನೆ, ಮಿಂಚಿನ ಕಾರ್ಯ ಆತನ ವೈಶಿಷ್ಟ್ಯ. ಇಂತಹ ಪಾತ್ರ ಮಾಡಿರಲಿಲ್ಲ. ಖುಷಿ ಆಗುತ್ತಿದೆ.ಅದಕ್ಕಾಗಿ ಗಡ್ಡ ಬಿಟ್ಟಿದ್ದೇನೆ. ಅದರ ಜತೆಗೆ ಈಗ ವೀಕೆಂಡ್‌ ವಿತ್‌ ರಮೇಶ್‌ ಶೂಟಿಂಗ್‌ ನಡೆಯುತ್ತಿದೆ. ಗಡ್ಡ ತೆಗೆಯುವ ಹಾಗಿಲ್ಲ, ಅದರಲ್ಲಿ ಒಂದಷ್ಟುಎಪಿಸೋಡ್‌ ಬರಬಹುದು.

ಬೈರಾದೇವಿಯಲ್ಲಿನ ನಿಮ್ಮ ಪೊಲೀಸ್‌ ಪಾತ್ರ ಸಾಕಷ್ಟುಕುತೂಹಲ ಹುಟ್ಟಿಸಿದೆ...

ಹೌದು, ಆ ಪಾತ್ರ ಮತ್ತು ಸಿನಿಮಾ ತುಂಬಾ ಸ್ಪೆಷಲ್‌. ಒಂದ್ರೀತಿ ಅದು ಆಪ್ತಮಿತ್ರ ಶೈಲಿಯ ಕಥಾ ಹಂದರದ ಸಿನಿಮಾ. ಸಾಕಷ್ಟುಕಾಲದ ನಂಚರ ನಾನು ಪೊಲೀಸ್‌ ಗೆಟಪ್‌ ಹಾಕಿದ್ದು. ಒಂದು ಪೊಲೀಸ್‌ ಪಾತ್ರ, ನೀವೆ ಮಾಡ್ಬೇಕು ಅಂತ ನಿರ್ದೇಶಕರು ಹೇಳಿದಾಗ, ಹೇಗೋ ಏನೋ ಎನ್ನುವ ಅನುಮಾನ ಇತ್ತು. ಆ ಪಾತ್ರದ ಡಿಟೈಲ್ಸ್‌ ತೆಗೆದುಕೊಂಡಾಗ ಕುತೂಹಲ ಹುಟ್ಟಿತು. ಆ ಸಿನಿಮಾ ಸಾಕಷ್ಟುಕುತೂಹಲದ ಅಂಶಗಳನ್ನು ಹೇಳಲಿದೆ.

ಮತ್ತೆ ನಿರ್ದೇಶನಕ್ಕೆ ಸಿದ್ಧರಾಗುತ್ತಿದ್ದೀರಿ ಎನ್ನುವ ಸುದ್ದಿ..

ನಿಜ, ಕನ್ನಡದ ಜತೆಗೆ ತೆಲುಗಿನಲ್ಲಿ ಒಂದು ಸಿನಿಮಾ ಶುರುವಾಗುತ್ತಿದೆ. ಸದ್ಯಕ್ಕೆ ಅದು ಮಾತುಕತೆ ಆಗಬೇಕಿದೆ. ಈಗಷ್ಟೇ ಅದರ ಪ್ರಾಥಮಿಕ ಕೆಲಸ ಶುರುವಾಗಿದೆ. ಬಟರ್‌ಫ್ಲೈ ರಿಲೀಸ್‌ ನಂತರ ಅದರ ಕೆಲಸಕ್ಕೆ ಚಾಲನೆ ಸಿಗಬಹುದು.