6ನೇ ಮೈಲಿ
ನಟ ಸಂಚಾರಿ ವಿಜಯ್ ನಟನೆಯ ಚಿತ್ರವಿದು. ಹಾಗೆ ನೋಡಿದರೆ ಇದು ಅವರ ರೆಗ್ಯೂಲರ್ ಸಿನಿಮಾ ಅಲ್ಲ. ಪಕ್ಕಾ ಕಮರ್ಷಿಯಲ್ಲಾಗಿದೆ. ಒಂದು ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲ ನೆರಳುಗಳನ್ನು ಒಳಗೊಂಡ ಈ ಚಿತ್ರವನ್ನು ಡಾ ಬಿ.ಎಸ್.ಶೈಲೇಶ್ ಕುಮಾರ್ ನಿರ್ಮಿಸಿದ್ದಾರೆ. ‘6ನೇ ಮೈಲಿ’ ಎನ್ನುವ ಹೆಸರಿನಲ್ಲೇ ಒಂದು ಭಿನ್ನತೆ ಇದೆ. ವಿಶೇಷ ಅಂದರೆ ಕೆಆರ್‌ಜಿ ಫಿಲಮ್ಸ್‌ನಿಂದ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದು, ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತಲುಪಿಸಬೇಕೆಂಬ ಚಿತ್ರತಂಡದ ಕನಸು ನನಸಾಗುತ್ತಿದೆ. ಈ ಚಿತ್ರವನ್ನು ಶ್ರೀನಿ ನಿರ್ದೇಶಿಸಿದ್ದಾರೆ. ಟ್ರೆಕ್ಕಿಂಗ್‌ಗೆಂದು ಹೋದಾಗ ಏನೆಲ್ಲಾ ಸಮಸ್ಯೆಗಳು ಎದುರಾಗುವ ಜತೆಗೆ ನಕ್ಸಲ್ ಹಿನ್ನೆಲೆಯೂ ಇದ್ದು, ಟ್ರೆಕ್ಕಿಂಗ್‌ಗೆಂದು ಹೋದವರು ಅನುಭವಿಸುವ ಕಷ್ಟಗಳನ್ನು ಚಿತ್ರದಲ್ಲಿ ವಿವರಿಸಲಾಗಿದೆಯಂತೆ. ಈ ಕಾರಣಕ್ಕೆ ಕಾಡು, ನಾಡು, ಗುಡ್ಡ- ಬೆಟ್ಟಗಳನ್ನು ಸುತ್ತು ಈ ಸಿನಿಮಾ, ಪ್ರೇಕ್ಷಕನಿಗೂ ಅಷ್ಟೇ ಅಡ್ವೆಂಚರ್ ಕೊಡುತ್ತದೆಯಂತೆ. ಆರ್. ಜೆ.ನೇತ್ರ, ರಘು ಪಾಂಡೇಶ್ವರ್, ಕೃಷ್ಣ ಹೆಬ್ಬಾಳೆ, ಆರ್.ಜೆ.ಸುದ್ದೇಶ್, ಹೇಮಂತ್ ಸುಶೀಲ್, ಮೈತ್ರಿ ಜಗ್ಗಿ ಚಿತ್ರದ ಪಾತ್ರಧಾರಿಗಳು. ವಿಜಯ್ ಗೆಟಪ್‌ಗಳು ವಿಶೇಷವಾಗಿದೆ.

ಧಾಂಗಡಿ
ಇದು ಅಪ್ಪಟ ಬಾಬಾ ಸಾಹೇಬ ಅಂಬೇಡ್ಕರ್ ಅವರ ಕನಸುಗಳನ್ನು ಹೇಳುವ ಸಿನಿಮಾ... ಹೀಗೆ ‘ಧಾಂಗಡಿ’ ಚಿತ್ರದ ಕುರಿತು ಹೇಳಿಕೊಂಡಿದ್ದು ನಿರ್ದೇಶಕ ಶರತ್. ಇವರಿಗಿದು ನಾಲ್ಕನೇ ಸಿನಿಮಾ. ಬಿರಾದಾರ, ಕೆ.ಶರತ್, ಕನಕಲಕ್ಷೀ, ಡಾ. ಸವಿತಾ, ಜಯಸೂರ್ಯ, ಭೀಮಪ್ಪಗಡಾದ, ಮಹೇಶವಾಲಿ, ರಾಘವೇಂದ್ರ ಸಿಂಪಿ ಮುಂತಾದವರು ನಟಿಸಿದ್ದಾರೆ. ಸಿನಿಮಾ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. ‘ಧಾಂಗಡಿ ಎಂದರೆ ಬದಲಾವಣೆಯ ಹೆಜ್ಜೆಗಳು ಎಂದರ್ಥ. ಅಂಬೇಡ್ಕರ್ ಅವರ ಸಾಮಾಜಿಕ ಹೋರಾಟಗಳು, ತುಳಿತಕ್ಕೊಳಗಾದ ಜನರ ಅಭಿವೃದ್ಧಿಗಾಗಿ ಅವರು ಕೈಗೊಂಡ ಯೋಜನೆಗಳ ಮೇಲೆಯೂ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದೇವೆ. ಬೆಳಗಾವಿ  ಸುತ್ತಮುತ್ತ ಸ್ಥಳಗಳಲ್ಲಿ ಅಮವ್ಯಾಸೆ ದಿನದಂದು ಚಿತ್ರೀಕರಣ ಶುರು ಮಾಡಿ ಅದೇ ದಿನದಂದು ಕುಂಬಳಕಾಯಿ ಒಡೆದಿರುವುದು ವಿಶೇಷ’ ಎಂದು ನಿರ್ದೇಶಕ ಕೆ ಶರತ್ ಹೇಳಿಕೊಂಡರು. ಡಾ ಅಂಬೇಡ್ಕರ್ ಪಾತ್ರದಲ್ಲಿ ನಟಿಸಿರುವುದು ಡಾ ಸಿದ್ರಾಮಕಾರಣಿಕ ಅವರು. ಅವರೇ ಚಿತ್ರಕ್ಕೆ ಕತೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ಇನ್ನೂ ಅಂಬೇಡ್ಕರ್ ಅವರ ಅಭಿಮಾನಿಯಾಗಿ ನಟಿಸಿರುವುದು ಸಂಜು ನಾಯಕ. 

ಕ್ರಾಂತಿಯೋಗಿ ಮಹಾದೇವರು
ಸೆಂಟಿಮೆಂಟ್ ನಿರ್ದೇಶಕ ಸಾಯಿಪ್ರಕಾಶ್ ಅವರ 101ನೇ ಸಿನಿಮಾ ಎಂಬುದು ಇದರ ವಿಶೇಷ. ಚಿತ್ರದ ಹೆಸರೇ ಹೇಳುವಂತೆ ಪವಾಡ ಪುರುಷ, ಕ್ರಾಂತಿ ಯೋಗಿ, ಬ್ರಿಟಿಷರ ವಿರುದ್ಧ ಹೋರಾಡಿದ ವ್ಯಕ್ತಿ ಈ ಕ್ರಾಂತಿಯೋಗಿ ಮಹಾದೇವರು. ಇಂಡಿ ತಾಲೂಕಿನ ಬಿಜಾಪುರ ಜಿಲ್ಲೆಯ ಮಹಾದೇವರು ಶ್ರೀಗಿರಿ ಮಲ್ಲೇಶ್ವರ ಭಕ್ತರು. 1910
ರಿಂದ 1980 ರ ವರೆಗೆ ಅವರ ಜೀವನ ಪಯಣ. ಹಲವಾರು ಬಾರಿ ದೇಶದ ಸ್ವಾತಂತ್ರ್ಯಕ್ಕಾಗಿ ಸೆರೆಮನೆ ವಾಸ ಅನುಭವಿಸಿದವರು. ಇಂಥವರ ಬದುಕಿನ ಚಿತ್ರಣವನ್ನು ತೆರೆ
ಮೇಲೆ ತಂದಿದ್ದಾರೆ ನಿರ್ದೇಶಕ ಸಾಯಿ ಪ್ರಕಾಶ್. ನಟ ರಾಮ್‌ಕುಮಾರ್ ಕ್ರಾಂತಿ ಯೋಗಿ ಮಹಾದೇವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಿವಕುಮಾರ್, ಗಣೇಶ್ ರಾವ್, ರಮೇಶ್ ಭಟ್, ಸುಚಿತ್ರಾ, ಸಿಹಿ ಕಹಿ ಚಂದ್ರು, ರವಿಚೇತನ್, ಡಿಂಗ್ರಿ ನಗಾರಜ್, ಸಿತಾರಾ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಮಾಧವಾನಂದ ಶೇಗುಣಿಸಿ ಅವರ ಕಥೆ ಹಾಗೂ ಸಂಭಾಷಣೆ, ಜೆ ಜಿ ಕೃಷ್ಣ ಅವರ ಛಾಯಾಗ್ರಹಣ, ಬಿ ಬಲರಾಮ್ ಸಂಗೀತವನ್ನು ಈ ಚಿತ್ರ ಒಳಗೊಂಡಿದೆ. ಸಾಮಾಜಿಕ, ಪೌರಾಣಿಕ ಹಾಗೂ ಭಕ್ತಿ ಈ ಮೂರರ ನೆರಳನ್ನೂ ಒಳಗೊಂಡಿರುವ ಸಿನಿಮಾ ಇದು.

ಅಸತೋಮ ಸದ್ಗಮಯ
ರಾಧಿಕಾ ಚೇತನ್ ಅವರು ಮುಖ್ಯ ಭೂಮಿಕೆಯಲ್ಲಿರುವ ಕಾರಣಕ್ಕೆ ಈ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗುವುದಕ್ಕೆ ಕಾರಣವಾಗಿದೆ. 70ಕ್ಕೂ ಹೆಚ್ಚು ಕೇಂದ್ರಗಳಲ್ಲಿ ತೆರೆಗೆ ಬರುತ್ತಿರುವ ಈ ಚಿತ್ರದ ನಿರ್ದೇಶಕರು ರಾಜೇಶ್ ವೇಣೂರು. ಸಾಮಾಜಿಕ ಜವಾಬ್ದಾರಿಯೊಂದಿಗೆ ಕೈಗೆತ್ತಿಕೊಂಡು ರೂಪಿಸಿರುವ ಚಿತ್ರವಿದು. ಐಕೇರ್ ಮೂವೀಸ್ ಬ್ಯಾನರಿನಡಿಯಲ್ಲಿ ಅಶ್ವಿನ್ ಪಿರೇರಾ ಈ ಚಿತ್ರವನ್ನ ನಿರ್ಮಿಸಿದ್ದು, ವಿಜಯ್ ಮೂಸ್ ರವರು ಈ ಚಿತ್ರವನ್ನ ರಾಜ್ಯಾದ್ಯಂತ ಹಂಚಿಕೆ ಮಾಡುತ್ತಿದ್ದಾರೆ. 

ಕಿರಣ್ ರಾಜ್, ಲಾಸ್ಯ ನಾಗರಾಜ್, ದೀಪಕ್ ಶೆಟ್ಟಿ ಹಾಗೂ ಬೇಬಿ ಚಿತ್ರಾಲಿ ಚಿತ್ರದ ಮುಖ್ಯ ಪಾತ್ರದಾರಿಗಳು. ಪ್ರಸ್ತುತ ಜನರೇಷನ್ ಆಲೋಚನೆಗಳ ಸುತ್ತ ಮಾಡಿಕೊಂಡಿರುವ ಸಿನಿಮಾ ಇದು. ಮನುಷ್ಯನ ಸಂಬಂಧಗಳು, ಬುದ್ಧಿವಂತಿಕೆ ಚಿತ್ರದ ಮುಖ್ಯ ಪಿಲ್ಲರ್ ಗಳು. ರಾಧಿಕಾ ಚೇತನ್ ಹೊರತಾಗಿ ಉಳಿದಂತೆ ಬಹುತೇಕರು ಹೊಸಬರು ಎಂಬುದು ‘ಅಸತೋಮ ಸದ್ಗಮಯ’ ಚಿತ್ರದ ಹೈಲೈಟ್. ಪಕ್ಕಾ ಇದೊಂದು ಕೌಟುಂಬಿಕ ಮನರಂಜನೆಯ ಸಿನಿಮಾ. ಸದ್ಯ ಚರ್ಚೆಯಲ್ಲಿರುವ ಶಿಕ್ಷಣ ಕ್ಷೇತ್ರದ ಕುರಿತು ಮಾತನಾಡುವ
ಈ ಚಿತ್ರದಲ್ಲಿ ಶಿಕ್ಷಣ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ.  

ಕುಚ್ಚಿಕೂ ಕುಚ್ಚಿಕು
ಇದು ಡಿ ರಾಜೇಂದ್ರ ಬಾಬು ನಿರ್ದೇಶನದ ಕೊನೆಯ ಸಿನಿಮಾ. ಜೆಕೆ, ಪ್ರವೀಣ್, ದೀಪ್ತಿ, ಸುಮಿತ್ರ, ರಮೇಶ್ ಭಟ್, ವಿಜಯ್ ಕೌಂಡಿನ್ಯ, ಸುಂದರರಾಜ್, ಕಾರ್ತಿಕ್, ಶೈಲಜಾಜೋಶಿ, ಪವನ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಸಂಗೀತ ಸಂಯೋಜನೆ ಮಾಡಿದ್ದಾರೆಂಬುದು ಚಿತ್ರದ ಹೈಲೈಟ್‌ಗಳಲ್ಲಿ ಒಂದು. ಇಬ್ಬರು ಸ್ನೇಹಿತರು. ಒಬ್ಬ ಬೈಕ್ ರೇಸರ್, ಮತ್ತೊಬ್ಬ ಬ್ಯುಸಿನೆಸ್ ಮ್ಯಾನ್. ಇವರ ನಡುವೆ ಎಂಟ್ರಿಯಾಗುವ ಹುಡುಗಿ. ಮೇಲ್ನೋಟಕ್ಕೆ ತ್ರಿಕೋನ ಪ್ರೇಮ ಕತೆಯಂತೆ ಕಂಡರೂ ಇದು ಬೇರೆ ರೀತಿಯ ಸಿನಿಮಾ ಎಂಬುದನ್ನುಹೇಳಿಕೊಳ್ಳುತ್ತಿದೆ ಚಿತ್ರತಂಡ. 

ಡಿ. ರಾಜೇಂದ್ರ ಬಾಬು ಇಲ್ಲದ ಹೊತ್ತಿನಲ್ಲಿ, ತುಂಬಾ ತಡವಾಗಿಯಾದರೂ ದೊಡ್ಡ ಮಟ್ಟದಲ್ಲಿ ತೆರೆಗೆ ಮೇಲೆ ಮೂಡುತ್ತಿದೆ. ಯಂಗ್ ಜನರೇಷನ್‌ನ ಅಪ್ಪಟ ಪ್ರೇಮ ಕತೆ. ಸ್ನೇಹ, ಪ್ರೀತಿ ಮತ್ತು ಅಪನಂಬಿಕೆಯ ನೆರಳಿನಲ್ಲಿ ಈ ಸಿನಿಮಾ ಸಾಗುತ್ತದೆ. ಬಾಬು ಅವರ ಕೊನೆಯ ಸಿನಿಮಾ ಆಗಿರುವ ಕಾರಣ ಈ ಚಿತ್ರವನ್ನು ಎಲ್ಲರು ನೋಡಿ ಬೆಂಬಲಿಸಬೇಕೆಂಬುದು ಹಂಸಲೇಖ ಮನವಿ.

ಕನ್ನಡಕ್ಕಾಗಿ ಒಂದನ್ನು ಒತ್ತಿ
ಹೆಸರಿನಿಂದಲೇ ಗಮನ ಸೆಳೆದಿರುವ ಸಿನಿಮಾ. ಕುಶಾಲ್ ಕತೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಅವಿನಾಶ್ ಎಸ್ ಶತಮರ್ಷಣ, ಕೃಷಿ ತಾಪಂಡ, ಚಿಕ್ಕಣ್ಣ ಮುಖ್ಯ ಪಾತ್ರದಾರಿಗಳು. ಅರ್ಜುನ್ ಜನ್ಯ ಸಂಗೀತ ನೀಡಿರುವುದು ಈ ಚಿತ್ರದ ಮತ್ತೊಂದು ಹೈಲೈಟ್. 

ವಿಶೇಷ ಅಂದರೆ ಈ ಚಿತ್ರದ ಹಾಡುಗಳ ಸೀಡಿಗಳನ್ನು ಯೋಗರಾಜ್ ಭಟ್ ಅವರು ತಮ್ಮ ಪಂಚರಂಗಿ ಆಡಿಯೋ ಮೂಲಕ ಲೋಕಾರ್ಪಣೆ ಮಾಡಿದ್ದಾರೆ. ದತ್ತಣ್ಣ, ಮಿಮಿಕ್ರಿ ಗೋಪಿ, ಸುಚೇಂದ್ರ ಪ್ರಸಾದ್, ಜಯಶ್ರೀ, ರಂಗಾಯಣ ರಘು, ಉಮೇಶ್, ಹೆಚ್. ಎಂ.ಟಿ ವಿಜಯ್ ಚಿತ್ರದಲ್ಲಿ ಪೋಷಕ ಪಾತ್ರಗಳಿ ಕಾಣಿಸಿಕೊಳ್ಳುವ ಮೂಲಕ ಹೊಸಬರ ಕನಸಿಗೆ ಸಾಥ್ ನೀಡಿದ್ದಾರೆ. ಬೇರೆಯದ್ದೇ ಆದ ಕತೆ. ಚಿತ್ರದ ಹೆಸರಿನಷ್ಟೆ ಕತೆ ಕೂಡ ಸರಳ ಮತ್ತು ಶುದ್ಧ ಕನ್ನಡ ಸಿನಿಮಾ. ಈ ಕಾರಣಕ್ಕೆ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಎನ್ನುವ ಯುನಿಕ್ ಟೈಟಲ್ ಇಡಲಾಗಿದೆಯಂತೆ. 

ಪರಸಂಗ

ನೋಟದಾಗೆ ನಗೆಯ ಮೀಟಿ ಎನ್ನುವ ಹಾಡಿನೊಂದಿಗೆ ಪ್ರೇಕ್ಷಕರ ಭಾವ ಮೀಟಿ ಒಂದು ಕಾಲದಲ್ಲಿ ಸೂಪರ್ ಹಿಟ್ ಚಿತ್ರ ಎನಿಸಿ ಕೊಂಡಿದ್ದು ‘ಪರಸಂಗದ ಗೆಂಡೆತಿಮ್ಮ’. ಅದೇ ಮತ್ತೆ ನೆನಪಾಗುವಂತಹ ಟೈಟಲ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸುದ್ದಿ ಮಾಡಿದ ಚಿತ್ರ ‘ಪರಸಂಗ’.

ಅಲ್ಲಿ ಗೆಂಡೆತಿಮ್ಮನ ಕತೆ, ಇಲ್ಲಿ ಬರೀ ತಿಮ್ಮನ ವ್ಯಥೆ. ಹಾಗೊಂದು ವ್ಯತ್ಯಾಸದೊಂದಿಗೆ ನಿರ್ಮಾಣವಾದ ‘ಪರಸಂಗ’ ಚಿತ್ರ ಇವತ್ತೇ ತೆರೆಗೆ ಬರುತ್ತಿದೆ. ಹಾಸನ ಜಿಲ್ಲೆಯ  ಹಳ್ಳಿಯೊಂದರ ನೈಜ ಘಟನೆಯೇ ಈ ಚಿತ್ರದ ಕತೆ. ಹಾಗಂತ ನಿರ್ದೇಶಕ ರಘು ಹೇಳುತ್ತಾರೆ. ತಮ್ಮೂರಿನ ಒಬ್ಬ ವ್ಯಕ್ತಿಯೇ ತಿಮ್ಮ. ಆತನ ಬದುಕಿನ ಸುತ್ತಲ ಕತೆಯೇ ಈ ಚಿತ್ರ. ಪಕ್ಕಾ ಗ್ರಾಮೀಣ ಸೊಗಡಿನ ಕತೆಯಿದು. ತಿಮ್ಮ ಇಲ್ಲಿ ಸಾಂಕೇತಿಕ ಮಾತ್ರ, ನಿಮ್ಮೂರಲ್ಲೂ ಅಂತಹ ತಿಮ್ಮ ಇದ್ದಿರಲೂಬಹುದು. ಆ ಮೂಲಕ ಕತೆ ಎಲ್ಲರಿಗೂ ಕನೆಕ್ಟ್ ಆಗುತ್ತೆ ಎನ್ನುವ ವಿಶ್ವಾಸ ನಿರ್ದೇಶಕ ರಘು ಅವರದ್ದು. ಮಿತ್ರ ಈ ಚಿತ್ರದ ಪ್ರಮುಖ ಆಕರ್ಷಣೆ. ಅವರೊಂದಿಗೆ ಅಕ್ಷತಾ, ಮನೋಜ್ ಸೇರಿದಂತೆ ಹಲವರಿದ್ದಾರೆ. ಇಲ್ಲಿ ಮಿತ್ರ ಅವರೇ ಚಿತ್ರದ ಕಥಾ ನಾಯಕ ತಿಮ್ಮ. ‘ಇದುವೆರೆಗೂ ನಾನು ಅಂತಹ ಪಾತ್ರದಲ್ಲಿ ಅಭಿನಯಿಸಿಲ್ಲ. ತುಂಬಾ ಸೊಗಸಾದ ಪಾತ್ರ’ಎನ್ನುತ್ತಾರವರು. 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. 

ವಜ್ರ
ನೆಲದ ಸೊಗಡಿನ ನೈಜ ಘಟನೆಗಳ ಸಿನಿಮಾ ಇದು. ಪ್ರವೀಣ್ ಗಂಗಾ ಅವರಿಗೆ ಮೊದಲ ಚಿತ್ರವಾದರೂ ತೆರೆ ಮೇಲೆ ಅದನ್ನು ತಂದಿರುವ ರೀತಿ ನೋಡಿದರೆ ಹೊಸಬರು ಅನ್ನಲಾಗದು. ಆ ಮಟ್ಟಿಗೆ ಸಿನಿಮಾ ಬಂದಿದೆ ಎನ್ನುವ ಭರವಸೆಯೊಂದಿಗೆ ‘ವಜ್ರ’ ಚಿತ್ರತಂಡ ಪ್ರೇಕ್ಷಕರ ಮುಂದೆ ಬರುತ್ತಿದೆ. ಅಲ್ಲದೆ ಮೂರು ಭಾಷೆಯಲ್ಲಿ ತೆರೆ ಕಾಣುತ್ತಿರುವ ಚಿತ್ರವಿದು. ಕನ್ನಡದ ಜತೆಗೆ ತೆಲುಗು ಹಾಗೂ ತುಳು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಕನ್ನಡದಲ್ಲಿ ‘ವಜ್ರ’ ಎನ್ನುವ ಹೆಸರನ್ನು ಬೇರೆ ಭಾಷೆಯಲ್ಲಿ ‘ರ‌್ಯಾಸ್ಕಲ್’ ಎಂದು  ನಾಮಕರಣ ಮಾಡಲಾಗಿದೆ. ಈಗಾಗಲೇ ಹಾಡು ಮತ್ತು ಟ್ರೇಲರ್ ಮೂಲಕ ಗಮನ ಸೆಳೆದಿದೆ. ‘ಇದು ನನ್ನ ಮೊದಲ ಪ್ರಯತ್ನ. ಹೀಗಾಗಿ ವಿಶೇಷವಾದ ಕತೆಯನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಬೇಕೆಂಬುದು ನನ್ನ ಕನಸಾಗಿತ್ತು. ಅದಕ್ಕೆ ತಕ್ಕಂತೆ ನಮ್ಮ ಸುತ್ತ ನಡೆಯುತ್ತಿರುವ ನೈಜ ಘಟಗಳನ್ನೇ ಅಧ್ಯಯನ ಮಾಡಿಯೇ ಈ ಚಿತ್ರಕ್ಕೆ ಕತೆ ಮಾಡಿಕೊಂಡಿದ್ದೆ. ಅದು ಎಲ್ಲರ ಶ್ರಮದಿಂದ ಈಗ ತೆರೆಗೆ ಬರುತ್ತಿದೆ. ಕನ್ನಡದ ಜತೆಗೆ ತುಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ತೆರೆಕಾಣುತ್ತಿದೆ. ಆದರೆ, ಸಿನಿಮಾ ಜನಕ್ಕೆ ಹಿಡಿಸುತ್ತದೆಂಬ ಭರವಸೆ ಕೂಡ ಇದೆ’ಎನ್ನುತ್ತಾರೆ ನಿರ್ದೇಶಕ ಪ್ರವೀಣ್ ಗಂಗಾ. ಸುಸ್ಮಿತಾ ಈ ಚಿತ್ರದ ನಾಯಕಿ.