ಕೈರೋ [ಡಿ.2] ಆಕ್ಷೇಪಾರ್ಹ ಉಡುಗೆ ತೊಟ್ಟಿದ್ದ ಕಾರಣಕ್ಕಾಗಿ ಈಜಿಪ್ಟ್ ನಟಿಯೊಬ್ಬರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸಂಪ್ರದಾಯ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವಂತೆ ಉಡುಗೆ ತೊಟ್ಟಿದ್ದರು ಎಂದು ಆಕ್ಷೇಪಿಸಿ ವಕೀಲರಿಬ್ಬರು ನ್ಯಾಯಾಲಯಕ್ಕೆ  ದೂರು ನೀಡಿದ ನಂತರ ನಟಿ ರನಿಯಾ ಯುಸೆಫ್ ಶಿಕ್ಷೆ ಅನುಭವಿಸಬೇಕಾಗಿ ಬಂದಿದೆ.

ಕೈರೋ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‍ನ ಮುಕ್ತಾಯ ಸಮಾರಂಭದಲ್ಲಿ ರನಿಯಾ ಅವರು ಪಾರದರ್ಶಕ ಉಡುಗೆ ತೊಟ್ಟಿ ಮಿಂಚಿದ್ದರು. ಸ್ವಿಮ್ ಸೂಟ್ ತರಹದ ಬಟ್ಟೆ ಮೇಲೆ ಬಲೆಯ ರೀತಿಯ ವಸ್ತ್ರ ಧರಿಸಿದ್ದರು.

ಧಾರ್ಮಿಕ ವಿಚಾರಕ್ಕೆ ಇದು ವಿರೋಧವಾಗಿದೆ ಎಂದು ವಕೀಲರಾದ ಅಂಬ್ರೋ ಅಬುಸೆಲಮ್ ಮತ್ತು ಸಮೀರ್ ಸಬಾರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಾಮಾಜಿಕ ಜಾಲತಾಣದಲ್ಲಿ ನಟಿಯ ಅರೆಬೆತ್ತಲೆ ಉಡುಗೆ ಟೀಕೆಗೆ ಗುರಿಯಾಗಿತ್ತು. ಹಿಂದೆ ಗಾಯಕಿಯೊಬ್ಬರು ಸಹ ಇಂಥದ್ದೆ ಉಡುಗೆ ಧರಿಸಿದ್ದಕ್ಕೆ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು.