ಈಗೀಗ ಬಯೋಪಿಕ್ ಚಿತ್ರಗಳು ಹೆಚ್ಚಾಗುತ್ತಿವೆ. ಅದರಲ್ಲಿಯೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಬಗ್ಗೆ ಸಾಲು ಸಾಲು ಸಿನಿಮಾಗಳು ಬಂದಿವೆ, ಬರುತ್ತಲೂ ಇವೆ.

ಈಗಷ್ಟೇ ರಣವೀರ್ ಸಿಂಗ್ ಕಪಿಲ್ ದೇವ್ ಬಯೋಪಿಕ್‌ನ ‘83’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಮೊನ್ನೆಯಷ್ಟೇ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಗೊಂಡು ನಿರೀಕ್ಷೆ ಹೆಚ್ಚಿಸಿದೆ. ಪರಿಣಿತಿ ಚೋಪ್ರಾ ಸೈನಾ ನೆಹ್ವಾಲ್ ಬಯೋಪಿಕ್‌ನಲ್ಲಿ ನಟಿಸುವುದಕ್ಕಾಗಿ ಬ್ಯಾಡ್ಮಿಂಟನ್ ಅಭ್ಯಾಸದಲ್ಲಿ ತೊಡಗಿಯಾಗಿದೆ.

ಹೀಗಿರುವಾಗ, ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧೂ ಮತ್ತು ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಕುರಿತಾದ ಚಿತ್ರಗಳು ತೆರೆಗೆ ಬರಲು ಸಿದ್ಧತೆ ನಡೆಸುತ್ತಿರುವಂತೆಯೇ ಈ ಚಿತ್ರಗಳಿಗೆ ದೀಪಿಕಾ ಪಡುಕೋಣೆ ಮತ್ತು ತಾಪ್ಸಿ ಪನ್ನು ಅವರ ಹೆಸರು ಖಚಿತವಾಗುವ ಹಂತ ತಲುಪಿಯಾಗಿದೆ.

ಪಿ.ವಿ. ಸಿಂಧೂ ಪಾತ್ರಕ್ಕೆ ದೀಪಿಕಾ ಹೇಳಿ ಮಾಡಿಸಿದ ಹಾಗಿದ್ದಾರೆ. ಈಗಾಗಲೇ ಅವರು ಚೆನ್ನಾಗಿ ಬ್ಯಾಡ್ಮಿಂಟನ್ ಆಡಬಲ್ಲರು. ಹಾಗಾಗಿ ಅವರು ಈ ಪಾತ್ರ ಮಾಡಿದರೆ ಅದಕ್ಕೆ ಜೀವ ಬರುತ್ತದೆ ಎಂದು ಸಿಂಧೂ ಕೋಚ್ ಗೋಪಿಚಂದ್ ಪಾತ್ರ ಮಾಡುತ್ತಿರುವ ಸೋನು ಸೂದ್ ಹೇಳಿಕೊಂಡಿದ್ದಾರೆ. ಇದನ್ನು ಚಿತ್ರತಂಡವೂ ಒಪ್ಪಿದೆ. ದೀಪಿಕಾ ಕಾಲ್‌ಶೀಟ್ ಸಿಕ್ಕಿದರೆ ಮುಗಿಯಿತು.

ಇನ್ನೊಂದು ಬದಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಪಾತ್ರಕ್ಕೆ ತಾಪ್ಸಿ ಪನ್ನು ಆಯ್ಕೆ ಬಹುತೇಕ ಖಚಿತವಾಗಿದೆ. ಸ್ಕ್ರಿಪ್ಟ್ ವರ್ಕ್ ಮುಗಿದ ನಂತರ ತಾಪ್ಸಿ ಸ್ಕ್ರಿಪ್ಟ್ ಓದಿ ಚಿತ್ರಕ್ಕೆ ಸಹಿ ಹಾಕುವುದಷ್ಟೇ ಬಾಕಿ. ಇದು ಸಾಧ್ಯವಾದರೆ ತಾಪ್ಸಿ ಮೊದಲ ಬಾರಿಗೆ ಸ್ಕ್ರೀನ್‌ನಲ್ಲಿ ಬ್ಯಾಟ್ ಹಿಡಿದು ರಂಚಿಸಲಿದ್ದಾರೆ.