ಮೊದಲೇ ಅವರ ಇಂಗ್ಲಿಷ್ ಮಿಶ್ರಿತ ಕಂಗ್ಲಿಷ್ ಮಾತುಗಳಿಂದ ಬೇಸತ್ತಿದ್ದ ಚಿತ್ರ ಪ್ರೇಮಿಗಳಿಗೆ, ‘ಕನ್ನಡ ನನಗೆ ಬಲು ಕಷ್ಟ’ ಅಂತ ತಮಿಳಿನಲ್ಲೇ ನೀಡಿರುವ ಹೇಳಿಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಮಾಡಿದೆ.

ರಶ್ಮಿಕಾ ಮಂದಣ್ಣ ಸೂಪರ್‌ಹಿಟ್ ಚಿತ್ರ ‘ಕಿರಿಕ್ ಪಾರ್ಟಿ’ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಕೊಡಗಿನ ಬೆಡಗಿ. ಆದರೆ ಟಾಲಿವುಡ್‌ಗೆ ಹಾರಿದ ನಂತರ ಈಗವರವರಸೆಯೇ ಬದಲಾಗಿದೆ. ‘ಗೀತ ಗೋವಿಂದಂ’ ಚಿತ್ರದ ಬಹುದೊಡ್ಡ ಸಕ್ಸಸ್ ನಂತರ ಅಲ್ಲೀಗ ಅವರು ಬಹುಬೇಡಿಕೆಯ ನಟಿ. ಚಿತ್ರವೊಂದಕ್ಕೆ ಒಂದು ಕೋಟಿ ರು. ಸಂಭಾವನೆ ಪಡೆಯುತ್ತಿದ್ದಾರೆನ್ನುವ ಮಾತುಗಳೂ ಇವೆ. ಇದೆಲ್ಲದರ ಪರಿಣಾಮ ರಶ್ಮಿಕಾ ಈಗ ತೆಲುಗು ಕಲಿತುಕೊಂಡಿದ್ದಾರೆ. ಜತೆಗೆ ತಮಿಳು ಭಾಷೆಯ ಮೇಲೂ ಹಿಡಿತ ಸಾಧಿಸಿದ್ದಾರೆ. ಕಲಾವಿದೆಯಾಗಿ ಅವರು ಭಾಷೆ ಕಲಿತುಕೊಳ್ಳುತ್ತಿರುವುದಕ್ಕೆ ಇಲ್ಲಿ ಯಾರದೂ ಆಕ್ಷೇಪ ಇಲ್ಲ. ಆದರೆ ಅಲ್ಲಿ ಬೇಡಿಕೆ ಇದೆ ಅಂದಮಾತ್ರಕ್ಕೆಕನ್ನಡವನ್ನೇ ಮರೆತರೆ ಹೇಗೆ ಎನ್ನುವುದು ಕನ್ನಡಿಗರ ಪ್ರಶ್ನೆ. ಟಾಲಿವುಡ್‌ನ ಬೇಡಿಕೆಯ ಹಿನ್ನೆಲೆಯಲ್ಲಿ ಕನ್ನಡದ
ಅವಕಾಶಗಳನ್ನು ಅವರು ತಿರಸ್ಕರಿಸುತ್ತಿದ್ದಾರೆ. ಒಪ್ಪಿಕೊಂಡಿದ್ದ ಚಿತ್ರಗಳನ್ನೂ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಇದು ಅವರ ವೈಯಕ್ತಿಕ ವಿಚಾರ. ಆದರೆ ಕನ್ನಡದ ಬಗ್ಗೆ ಅವರು ತೋರಿದ ಧೋರಣೆ ಸರಿಯಲ್ಲ ಎನ್ನುವುದು ಹಲವರ ಅಭಿಪ್ರಾಯ. ಬೆಂಗಳೂರಿಗೆ ಬಂದಾಗಲೂ ಮಾಧ್ಯಮಗಳ ಮುಂದೆ ಮಾತನಾಡುವಾಗ ಉದ್ದೇಶ ಪೂರ್ವಕವಾಗಿಯೇ ಇಂಗ್ಲಿಷ್‌ನಲ್ಲೇ ಮಾತನಾಡುತ್ತಾರೆ. ಇಂಗ್ಲಿಷ್ ಜತೆಗೆ ತೆಲುಗು ಬಳಸುತ್ತಾರೆ. ಜುಲೈ ೨೬ಕ್ಕೆ ತೆರೆ ಕಾಣುತ್ತಿರುವ ‘ಡಿಯರ್ ಕಾಮ್ರೇಡ್’ ಚಿತ್ರದ ಪ್ರಚಾರಕ್ಕಾಗಿ ಇತ್ತೀಚೆಗೆ ವಿಜಯ್ ದೇವರಕೊಂಡ ಜತೆಗೆ ಬೆಂಗಳೂರಿಗೆ ಬಂದಾಗಲೂ ಇದೇ ಪುನಾರಾವರ್ತನೆ ಆಯಿತು.

ರಶ್ಮಿಕಾ, ಚೆನ್ನೈಗೆ ಹೋದಾಗ ಶುದ್ಧ ತಮಿಳಿನಲ್ಲಿ ಮಾತನಾಡುತ್ತಾರೆ, ಹೈದರಾಬಾದ್‌ನಲ್ಲಿದ್ದಾಗ ತೆಲುಗಿನಲ್ಲೇ ಮಾತನಾಡುತ್ತಾರೆ, ಬೆಂಗಳೂರಿಗೆ ಬಂದಾಗ ಯಾಕೆ ಹೀಗೆ ಕನ್ನಡವನ್ನು ಕಡೆಗಣಿಸಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ.

‘ಡಿಯರ್ ಕಾಮ್ರೇಡ್’ ಚಿತ್ರದ ಕನ್ನಡದ ಅವತರಣಿಕೆಗೆ ನಾನೇ ವಾಯ್ಸ್ ಡಬ್ಬಿಂಗ್ ಮಾಡಿದ್ದೇನೆ. ಇದು ತಮಗೆ ಸಾಕಷ್ಟು ಖುಷಿ ತಂದಿದೆ ಎಂಬುದಾಗಿ ಸಂತೋಷಪಟ್ಟರೂ, ಅವರು ಅಲ್ಲಿ ಮಾತನಾಡಿದ್ದು ಮಾತ್ರ ಇಂಗ್ಲಿಷ್ ಮಿಶ್ರಿತ ಕಂಗ್ಲಿಷ್. ಅದರಲ್ಲೂ ತೆಲುಗು ಪದಗಳೇ ಹೆಚ್ಚಿದ್ದವು. ಅದು ಮಾಧ್ಯಮದವರಿಗೂ ಬೇಸರ ತರಿಸಿತ್ತು. ಪತ್ರಿಕಾಗೋಷ್ಠಿಯಲ್ಲಿನ ಅವರು ಮಾತುಗಳಿನ್ನು ಕೇಳಿದ್ದ ಸಿನಿ ಪ್ರೇಕ್ಷಕರು ಸೋಷಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಈಗ ಸಿನಿ ಪ್ರೇಕ್ಷಕರ ಆಕ್ರೋಶ ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದು ಕನ್ನಡದ ಬಗೆಗೆ ನಟಿ ರಶ್ಮಿಕಾ ತಮಿಳಿನಲ್ಲಿ ನೀಡಿರುವ ಹೇಳಿಕೆ.

ರಶ್ಮಿಕಾ ಎಲ್ಲೇ ಹೋದರೂ ಅಲ್ಲಿರುತ್ತೆ ಅವನ ನೆರಳು!

‘ಡಿಯರ್ ಕಾಮ್ರೇಡ್’ ಚಿತ್ರದ ಪ್ರಚಾರಕ್ಕೆ ಅವರು ಮೊನ್ನೆಯಷ್ಟೇ ಚೆನ್ನೈಗೆ ಹೋಗಿದ್ದರು. ಅಲ್ಲಿನ ವೆಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ‘ಕನ್ನಡ ನನಗೆ ಬಲು ಕಷ್ಟ’ ಅಂತ ಹೇಳಿಕೆ ನೀಡಿದ್ದರು. ಆ ಮಾತುಗಳನ್ನು ಅವರು ಅಲ್ಲಿ ಶುದ್ಧ ತಮಿಳಿನಲ್ಲೇ ಹೇಳಿದ್ದರು. ಆ ಹೇಳಿಕೆಯ ವಿಡಿಯೋ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕನ್ನಡದಿಂದಲೇ ಬೆಳೆದು, ಕನ್ನಡವನ್ನು ತಾತ್ಸಾರದಿಂದ ನೋಡುವ ಇಂತಹ ನಟಿಯರಿಗೆ ಪಾಠ ಕಲಿಸಲಾಗುವುದು ಎಂದು ಚಿತ್ರಪ್ರೇಮಿಗಳು ಎಚ್ಚರಿಸಿದ್ದಾರೆ.