ಬೆಂಗಳೂರು (ಆ. 14): ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಳಿಕ ಮತ್ತೊಮ್ಮೆ ಸ್ವಾತಂತ್ರ್ಯ ಸೇನಾನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಚಾಲೆಂಜಿಂಗ್ ಸ್ಟಾರ್. ಅವರು ಮತ್ತೆ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ
ಚಿತ್ರ ‘ಇನ್ಸ್‌ಪೆಕ್ಟರ್ ವಿಕ್ರಂ’.

ಪ್ರಜ್ವಲ್ ದೇವರಾಜ್ ನಾಯಕನಾಗಿ ಮತ್ತು ರಮೇಶ್ ಅರವಿಂದ್ ಖಳನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಬಹು ಮುಖ್ಯ ತಿರುವಿನಲ್ಲಿ ದರ್ಶನ್ ಅವರ ಭಗತ್ ಸಿಂಗ್ ಪಾತ್ರ ಎಂಟ್ರಿ ಆಗಲಿದೆ. ವಿಶೇಷ ಅಂದರೆ ಪ್ರಜ್ವಲ್ ದೇವರಾಜ್ ಈ ಕಾಲದ ಪೊಲೀಸ್, ಭಗತ್‌ಸಿಂಗ್ ಪಾತ್ರದಾರಿ ದರ್ಶನ್ ಅವರದ್ದು ಐತಿಹಾಸಿಕ ಪಾತ್ರ. ಇವರೆಡರ ನಡುವೆ ಒಂದು ಪೌರಾಣಿಕ ಪಾತ್ರವೂ ಬರಲಿದ್ದು, ಆ ಪಾತ್ರಕ್ಕೆ ದರ್ಶನ್ ಮುಖಾಮುಖಿ ಆಗುವುದು ಚಿತ್ರದ ಹೈಲೈಟ್.

ಐತಿಹಾಸಿಕ ಮತ್ತು ಪೌರಾಣಿಕ ಎರಡು ಒಟ್ಟಿಗೆ ಹೇಗೆ ಎಂದರೆ ಅದೇ ಚಿತ್ರದ ಸ್ಪೆಷಲ್ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಎ ಆರ್ ವಿಖ್ಯಾತ್. ‘ದರ್ಶನ್ ಅವರದ್ದು ಬಹು ಮುಖ್ಯ ಪಾತ್ರ. ಅವರ ಪಾತ್ರದ ಬಗ್ಗೆ ಒಂದು ಮಾತು ಜಾಸ್ತಿ ಹೇಳಿದರೂ ಕತೆಯ ಗುಟ್ಟು ಬಿಟ್ಟುಕೊಂಡಂತಾಗುತ್ತದೆ. ಆದರೆ, ಒಂದು ಪವರ್‌ಫುಲ್ ಪಾತ್ರ ಮಾಡುತ್ತಿದ್ದಾರೆಂಬುದು ಸತ್ಯ. ನಾವು ದರ್ಶನ್ ಬಳಿಗೆ ಹೋಗಿ ಪಾತ್ರದ ಬಗ್ಗೆ ಹೇಳಿದಾಗ ತಮಗೆ ಸೂಕ್ತವೇ ಈ ಪಾತ್ರ ಎಂದು ಕೇಳಿ, ಕಾಸ್ಟ್ಯೂಮ್, ಔಟ್ ಲುಕ್, ಕತೆ ಹೀಗೆ ಎಲ್ಲವನ್ನೂ ಕೇಳಿ ಮತ್ತು ಪಾತ್ರ ಹೇಗಿರುತ್ತದೆಂದು ತೋರಿಸಿದ ಮೇಲೆಯೇ ನಟಿಸುವುದಕ್ಕೆ ಒಪ್ಪಿಕೊಂಡರು’ ಎಂಬುದು ಎಆರ್ ವಿಖ್ಯಾತ್ ಮಾತು.

ಶ್ರೀ ನರಸಿಂಹ ನಿರ್ದೇಶನದ ಈ ಚಿತ್ರಕ್ಕೆ ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ಅದ್ದೂರಿಯಾಗಿ ಸೆಟ್ ಹಾಕಿ ದರ್ಶನ್ ಪಾತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರೀಕರಣ ಬಹುತೇಕ ಮುಗಿದ್ದು, ರಮೇಶ್ ಅರವಿಂದ್ ಪಾತ್ರದ ಚಿತ್ರೀಕರಣ
ಇನ್ನು ನಡೆಯಬೇಕಿದೆ.