ಧರ್ಮದುರ್ಗದ ರಾಣಿ ಅನುಷ್ಕಾ ಕಥೆ
ಈಚಿತ್ರದ ಹೆಸರು ‘ಅನುಷ್ಕಾ’. ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಮೂಡಿಬರುತ್ತಿರುವ ಸಿನಿಮಾ. ಬಹುಭಾಷೆಯ ಸಿನಿಮಾ, ಹೆಸರಿನಲ್ಲಿ ಅನುಷ್ಕಾ ಇದೆ ಎನ್ನುವ ಕಾರಣಕ್ಕೆ ಇದು ಬಾಹುಬಲಿ ಅನುಷ್ಕಾ ಶೆಟ್ಟಿ ನಟನೆಯ ಚಿತ್ರವಲ್ಲ
ಈ ಹಿಂದೆ ‘ನಿಶ್ಯಬ್ದ 2’ಚಿತ್ರವನ್ನು ನಿರ್ದೇಶಿಸಿದ್ದ ದೇವರಾಜ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ರೂಪೇಶ್ ಶೆಟ್ಟಿ ಈ ಚಿತ್ರದ ನಾಯಕ. ಅಮೃತಾ ಚಿತ್ರದ ನಾಯಕಿ. ಮೊನ್ನೆ ಚಿತ್ರದ ಫೋಟೋಶೂಟ್ ಜತೆಗೆ ಪತ್ರಿಕಾಗೋಷ್ಟಿಯೂ ನಡೆಯಿತು.
ಈ ಚಿತ್ರದ ಟೀಸರ್ ಬಿಡುಗಡೆ ಮಾಡುವುದಕ್ಕೆ ನಟಿ ಅನುಷ್ಕಾ ಶೆಟ್ಟಿ ಅವರನ್ನೇ ಕರೆದಿದ್ದಾರಂತೆ. ಹಾಗಂತ ನಿರ್ದೇಶಕರು ಹೇಳಿಕೊಂಡರು. ಇದು ನಿಜವೇ ಎಂದರೆ, ‘ಅನುಷ್ಕಾ ಶೆಟ್ಟಿ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದೇವೆ. ಬಂದ್ರೂ ಬರಬಹುದು’ ಎಂದರು. ಇನ್ನೂ ಚಿತ್ರದ ವಿಚಾರಕ್ಕೆ ಬಂದರೆ. ‘ಮೂರು ಆಯಾಮಗಳಲ್ಲಿ ಸಿನಿಮಾ ಸಾಗುತ್ತದೆ. ಧರ್ಮದುರ್ಗ ಸಾಮ್ರಾಜ್ಯದ ರಾಣಿ ಜನರನ್ನು ಹೇಗೆ ರಕ್ಷಿಸುತ್ತಾಳೆ, ಅವರಿಗಾಗಿ ಯಾವ ರೀತಿಯ ತ್ಯಾಗ ಮಾಡುತ್ತಾಳೆ. ಮಧುಚಂದ್ರಕ್ಕೆಂದು ನವದಂಪತಿಗಳ ಪಯಣ, ಕೊನೆಯದಾಗಿ ಪ್ರಸಕ್ತ ಸಮಾಜದಲ್ಲಿ ನಡೆಯುತ್ತಿರುವ ಹೆಣ್ಣಿನ ಮೇಲಿನ ದೌರ್ಜನ್ಯಗಳ ವಿರುದ್ದ ಹೋರಾಡುವ ದಿಟ್ಟ ಹೆಣ್ಣಿನ ಕಥನ. ಇವೆಲ್ಲವು ಕ್ಲೈಮಾಕ್ಸ್ ನಲ್ಲಿ ಯಾವ ರೀತಿ ಕೂಡಿಕೊಳ್ಳುತ್ತದೆ ಎಂಬುದು ಥಿಲ್ಲರ್ ಫ್ಯಾಂಟಸಿ ನೆರಳಲ್ಲಿ ಇಡೀ ಚಿತ್ರವನ್ನು ರೂಪಿಸಲಾಗುತ್ತಿದೆ. ಅರಸಿಕೆರೆ, ತಾವರೆಕೆರೆ, ಶ್ರೀರಂಗಪಟ್ಟಣ, ಬೆಂಗಳೂರು, ಮೈಸೂರು ಹಾಗೂ ಒಂದು ಹಾಡನ್ನು ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ಮಾಡಲಾಗುವುದು’ ಎಂದರು ದೇವರಾಜ್.
‘ಸತ್ಯಂ ಶಿವಂ ಸುಂದರಂ’ ಧಾರಾವಾಹಿ ನಿರ್ಮಾಣ ಮಾಡಿದ್ದ ಎಸ್ ಕೆ ಗಂಗಾಧರ್ ಈ ಚಿತ್ರದ ನಿರ್ಮಾಪಕರು. ಮೊದಲ ಬಾರಿಗೆ ಸಿನಿಮಾ ನಿರ್ಮಾಣಕ್ಕೆ ಬಂದಿದ್ದಾರೆ. ‘ಕತೆ ನನಗೆ ಇಷ್ಟವಾಯಿತು. ಕನ್ನಡದಲ್ಲಿ ಇಂಥ ಕತೆ ಬಂದಿಲ್ಲ. ಹೀಗಾಗಿ ಈ ಸಿನಿಮಾ ನನ್ನ ನಿರ್ಮಾಣದಲ್ಲೇ ಬರಲಿ ಎಂದು ನಿರ್ಮಾಣಕ್ಕೆ ಮುಂದಾಗಿರುವೆ’ ಎಂದರು ಎಸ್ ಕೆ ಗಂಗಾಧರ್. ರೂಪೇಶ್ ಶೆಟ್ಟಿ ಇಲ್ಲಿ ಕೊಂಚ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ದೇವರಾಜ್ ಅವರ ನಿಶ್ಯಬ್ಧ ೨ ಚಿತ್ರದಲ್ಲೇ ನಟಿಸಿದ್ದೆ. ಈಗ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿರುವೆ’ ಎಂದರು ರೂಪೇಶ್ ಶೆಟ್ಟಿ. ಅಮೃತಾ ಅವರಿಗೆ ಇಲ್ಲಿ ಮೂರು ರೀತಿಯ ಪಾತ್ರವಂತೆ. ರಾಣಿಯಾಗಿ ನಟಿಸುತ್ತಿರುವುದರಿಂದ ಕುದುರೆ ಸವಾರಿ, ಕತ್ತಿ ವರಸೆ ಕಲಿಯುತ್ತಿದ್ದಾರಂತೆ. ಬಲರಾಜುವಾಡಿ ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕತೆ ಬರೆಯುವ ಜತೆಗೆ ಕಡ್ಡಿಪುಡಿ ಶಾಂತರಾಜು ಎಪ್ಪತ್ತು ವರ್ಷದ ಮುದುಕನಾಗಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವಿಕ್ರಂ ಸೆಲ್ವ ಸಂಗೀತ ಇದೆ. ವೀನಸ್ ಮೂರ್ತಿ ಕ್ಯಾಮೆರಾ ಇದೆ.