ಚನ್ನಮ್ಮನ ಕಿತ್ತೂರು: ನಟ ಯಶ್‌ ಹಾಗೂ ರಾಧಿಕಾ ದಂಪತಿಯ ಮಗುವಿಗೆ ರೆಬೆಲ್‌ ಸ್ಟಾರ್‌, ಚಿತ್ರನಟ ಅಂಬರೀಷ್‌ ಪ್ರೀತಿಯಿಂದ ಮಾಡಿಸಿರುವ ತೊಟ್ಟಿಲು ಎರಡ್ಮೂರು ದಿನದಲ್ಲಿ ಯಶ್‌ ಮನೆ ಸೇರಲಿದೆ.

ಈ ಬಗ್ಗೆ ಮಾಹಿತಿ ನೀಡಿದ ಉದ್ಯಮಿ ಮತ್ತು ನಟ ಅಂಬರೀಷ್‌ ಆಪ್ತರಾಗಿರುವ ನಾರಾಯಣ ಕಲಾಲ, ಈ ತೊಟ್ಟಿಲಿಗೆ ಚೆನ್ನಮ್ಮನ ಕಿತ್ತೂರಿನಲ್ಲಿ ಫೆ.16ರಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ವಿವಿಧ ಮಠಾಧೀಶರ ಆಶೀರ್ವಾದದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಗುವುದು. ಹಾಗೇ ಅಂದು ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿಗೆ ಈ ತೊಟ್ಟಿಲನ್ನು ತೆಗೆದುಕೊಂಡು ಹೋಗಲಾಗುತ್ತದೆ ಎಂದು ತಿಳಿಸಿದ್ದಾರೆ.

1.25 ಲಕ್ಷ ವೆಚ್ಚದ ಭರ್ಜರಿ ಕಾಣಿಕೆ ಇದಾಗಿದ್ದು, ರಾಜಕೀಯ ಹಾಗೂ ಚಿತ್ರರಂಗದಲ್ಲಿ ರೆಬೆಲ್‌ ಎಂದೇ ಖ್ಯಾತಿ ಪಡೆದಿದ್ದ ಅಂಬರೀಷ್‌ ಅವರು ರಾಧಿಕಾ ಪಂಡಿತ್‌ ಅವರು ಗರ್ಭಿಣಿ ಇರುವಾಗಲೇ ಅವರ ಮಗುವಿಗೊಂದು ತೊಟ್ಟಿಲನ್ನು ನಿರ್ಮಿಸುವಂತೆ ಆಪ್ತರಾದ ಉದ್ಯಮಿ ನಾರಾಯಣ ಕಲಾಲಗೆ ತಿಳಿಸಿದ್ದರು. ಅದರಂತೆ ಧಾರವಾಡ ಜಿಲ್ಲೆಯ ಕಲಘಟಗಿಯ ಶ್ರೀಧರ ಸಾವುಕಾರ ಅವರಲ್ಲಿ ತೊಟ್ಟಿಲು ಮಾಡಿಸಲಾಗಿತ್ತು. ರಾಮಾಯಣ, ಮಹಾಭಾರತದ ಕೃಷ್ಣಾವತಾರ, ದಶಾವತಾರ, ಕಥೆಗಳನ್ನು ಸಾರುವ ಚಿತ್ರಗಳು ಈ ತೊಟ್ಟಿಲ ಮೇಲೆ ನಿರ್ಮಾಣಗೊಳಿಸಲಾಗಿದೆ.