Asianet Suvarna News Asianet Suvarna News

ಗಂಗಾವತಿ ಪ್ರಾಣೇಶ್ ಹಾಸ್ಯದ ಹಿಂದಿನ ಪ್ರೇರಕ ಶಕ್ತಿ ಇವರು!

ಅಭಿನವ ಬೀಚಿ ಎಂದೇ ಹೆಸರಾದವರು ಗಂಗಾವತಿ ಪ್ರಾಣೇಶ್. ಇವರ ಹಾಸ್ಯದ ಹಿಂದಿನ ಪ್ರೇರಕ ಶಕ್ತಿ ಇವರ ಸಹೋದರ ಸ್ವಾಮಿರಾಚಾರ್ಯ. ಅವರು ಈಗ ಬರೀ ನೆನಪು ಮಾತ್ರ. ತಮ್ಮ ಪ್ರೀತಿಯ ಸಹೋದರನ ನೆನಪಿನಲ್ಲಿ ‘ಸ್ವಾಮಿ ಕುಟೀರ’ವನ್ನು ಸ್ಥಾಪಿಸಿ ಅಲ್ಲಿ ತಮಗೆ ಬಂದ ಎಲ್ಲಾ ಪ್ರಶಸ್ತಿ, ಉಡುಗೊರೆಗಳನ್ನು ಜೋಪಾನ ಮಾಡಿದ್ದಾರೆ ಪ್ರಾಣೇಶ್. 

Comedian Gangavathi Pranesh build a museum in the memory of his brother
Author
Bengaluru, First Published Sep 20, 2018, 3:34 PM IST
  • Facebook
  • Twitter
  • Whatsapp

ಕೊಪ್ಪಳ (ಸೆ. 20): ಗಂಗಾವತಿ ಪ್ರಾಣೇಶ್ ಮಾತು ಕೇಳಲು ಚೆಂದ. ಒಮ್ಮೆ ಮಾತಿಗೆ ನಿಂತರೆಂದರೆ ನೆರೆದಿರುವ ಎಲ್ಲರನ್ನೂ ಹೊಟ್ಟೆ ತುಂಬಾ ನಗಿಸುವುದರಲ್ಲಿ ಅವರು ಸಿದ್ಧ ಹಸ್ತರು. ಅದಕ್ಕಾಗಿಯೇ ಅವರಿಂದು ನಾಡು, ನಾಡಿನಾಚೆ, ದೇಶದಾಚೆಯಲ್ಲೂ ಪ್ರಸಿದ್ಧ.

ವ್ಯಕ್ತಿ ಖ್ಯಾತಿ ಗಳಿಸಬೇಕು ಎಂದರೆ ಅದರ ಹಿಂದೆ ಸಾಕಷ್ಟು ನೋವಿನ, ಕಷ್ಟದ ಹಾದಿಯಲ್ಲಿ ಕ್ರಮಿಸಲೇಬೇಕಿರುತ್ತದೆ. ಹಾಗೆ ಕ್ರಮಿಸಿದಾಗ ಮಾತ್ರ ಸಾಧನೆಯ ಶಿಖರ ಕಾಣುವುದು, ಏರುವುದಕ್ಕೆ ಆಗುವುದು. ಹೀಗಿರುವಾಗ ಸಾಧಕರ ಬೆನ್ನಿಗೆ ನಿಂತು ಉತ್ಸಾಹ, ಬೆಂಬಲ ನೀಡುವ ಕೈಗಳೂ ಬೇಕು. ಹೀಗೆ ಪ್ರಾಣೇಶ್ ಅವರ ಪಾಲಿಗೆ ಆಸರೆಯಾಗಿ ನಿಂತು ಹಾಸ್ಯ ಜಗತ್ತಿನಲ್ಲಿ ಮಿನುಗುವಂತೆ ಮಾಡಿದವರು ಅವರ ತಮ್ಮ ಸ್ವಾಮಿರಾಚಾರ್ಯ.

ನನ್ನ ತಮ್ಮನೇ ನನ್ನ ಶಕ್ತಿ
‘ಇಂದು ನೀವು ನೋಡುತ್ತಿರುವ ಪ್ರಾಣೇಶ್ ತುಂಬಾ ಆರಾಮವಾಗಿದ್ದಾನೆ. ಎಲ್ಲರನ್ನೂ ನಗಿಸುತ್ತಾ, ತಾನೂ ನಗುತ್ತಾ ಇದ್ದಾನೆ. ಆದರೆ ಇಪ್ಪತ್ತು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ನನಗೆ ಮಾಡಲು ಕೆಲಸ ಇರಲಿಲ್ಲ. ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಿಕೊಂಡಿದ್ದೆ. ಎಲ್ಲರೂ ಬೈಯುತ್ತಿದ್ದರು.

ಏನಾದರೂ ಕೆಲಸ ಮಾಡು, ನಾಲ್ಕು ಕಾಸು ಸಂಪಾದನೆ ಮಾಡು, ಯಾಕೆ ಹೀಗೆ ತಿರುಗಿಕೊಂಡು ನಿಂತಿದ್ದೀಯ ಎಂದು. ಆದರೆ ನನಗೆ ಬೈಯದೇ ನೀನು ನಿನ್ನ ಇಷ್ಟ ಬಂದ ಹಾಗೆ ಕಲೆ, ಸಾಹಿತ್ಯ, ಹಾಸ್ಯ ಎಂದುಕೊಂಡು ನಿನ್ನ ದಾರಿಯಲ್ಲಿ ಸಾಗು. ಅದಕ್ಕೆ ಬೇಕಾದ ಎಲ್ಲಾ ಸಹಾಯವನ್ನು ನಾನು ಮಾಡುತ್ತೇನೆ ಎಂದು ನನ್ನ ಬೆನ್ನಿಗೆ ನಿಂತವನು ನನ್ನ ತಮ್ಮ ಸ್ವಾಮಿರಾಚಾರ್ಯ. ಅವನು ನನಗೆ ಎಲ್ಲವೂ ಆಗಿದ್ದ. ಒಳ್ಳೆಯ ಸ್ನೇಹಿತ, ಗುರು, ಮಾರ್ಗದರ್ಶಿ, ನನ್ನ ಸಾಧನೆಗೆ ಬೆನ್ನು ತಟ್ಟುವ ಕೈ. ನಾನು ವೇದಿಕೆ ಮೇಲೆ ಕೂತಿದ್ದರೆ ಅವನು ಹಿಂದೆ ಬ್ಯಾನರ್ ಹಿಡಿದು ನಿಂತಿರುತ್ತಿದ್ದ.

ಎಲ್‌ಐಸಿಯಲ್ಲಿ ಕೆಲಸ ಮಾಡಿಕೊಂಡು ನನ್ನ ಖರ್ಚು ವೆಚ್ಚಗಳನ್ನೆಲ್ಲಾ ಅವನೇ ನೋಡಿಕೊಳ್ಳುತ್ತಿದ್ದ. ಕೇವಲ 9 ಅಂಕಗಳಿಂದ ಐಎಎಸ್ ಅಧಿಕಾರಿಯಾಗುವ ಅವಕಾಶದಿಂದ ವಂಚಿತನಾದ ಅವನು ತುಂಬಾ ಬುದ್ಧಿವಂತ. ಆದರೆ ಅನಿರೀಕ್ಷಿತವಾಗಿ 1995 ರಲ್ಲಿ ಅವನು ನಮ್ಮನ್ನು ಅಗಲಿ ಹೋದ.

ನನ್ನ ಸಾಧನೆಗೆ ಕಾರಣನಾದ ಅವನಿಂದಲೇ ಅಲ್ಲವೇ ನನಗೆ ಇಷ್ಟೆಲ್ಲಾ ಸನ್ಮಾನ, ಪುರಸ್ಕಾರಗಳು ಸಿಕ್ಕುತ್ತಿರುವುದು. ಅದಕ್ಕೆ  ಅವನ ಹೆಸರಿನಲ್ಲೇ ‘ಸ್ವಾಮಿ ಕುಟೀರ’ವನ್ನು ಸ್ಥಾಪಿಸಿ ಅಲ್ಲಿ ನನಗೆ ಸಿಗುವ ಎಲ್ಲಾ ಪ್ರಶಸ್ತಿಗಳನ್ನು ಇಡುತ್ತಾ ಬಂದಿದ್ದೇನೆ’ ಎನ್ನುವ ಪ್ರಾಣೇಶ್ ಅವರ ಪ್ರಶಸ್ತಿ ಸಂಗ್ರಹಾಲಯದಲ್ಲಿ ಇದುವರೆಗೂ ಅವರಿಗೆ ಸಿಕ್ಕಿರುವ ಎಲ್ಲಾ ಪ್ರಶಸ್ತಿಗಳು ದಾಖಲಾಗಿ ಉಳಿದಿವೆ.

ಸಾಲ ಮಾಡಿ ಕಟ್ಟಿದ ಕುಟೀರ

ಗಂಗಾವತಿಯ ಜಯನಗರದ ಸತ್ಯನಾರಾಯಣ ದೇವಸ್ಥಾನದ ಎದುರಿಗೆ ಇರುವ ಪ್ರಾಣೇಶ್ ಅವರ ‘ಬೀಚಿ ನಿಲಯ’ದ ಮೇಲ್ಭಾಗದ ಐದು ಕೋಣೆಗಳ ಮನೆಯಲ್ಲಿ ‘ಸ್ವಾಮಿ ಕುಟೀರ’ವಿದೆ. ಮಲೆನಾಡಿನ ಶೈಲಿಯಲ್ಲಿ ಬೊಂಬು, ಮಂಗಳೂರಿನ ಹೆಂಚಿನಲ್ಲಿ ನಿರ್ಮಾಣವಾಗಿರುವ ಈ ಕುಟೀರವನ್ನು ಪ್ರಾಣೇಶ್‌ರು ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಹದಿನೈದು ಲಕ್ಷ ರುಪಾಯಿ ಸಾಲ ಮಾಡಿ ನಿರ್ಮಿಸಿರುವುದು
ವಿಶೇಷ.

ಕುಟೀರದ ಹೊಳ ಹೊಕ್ಕರೆ ದೊಡ್ಡದಾಗಿ ಕಾಣುವುದು ಪ್ರಾಣೇಶ್ ತಂದೆ ವೆಂಕೋಬಾಚಾರ್, ಬೀಚಿ, ಡಾ. ರಾಜ್‌ಕುಮಾರ್ ಫೋಟೋಗಳು. ಇದನ್ನು ಬಿಟ್ಟರೆ, ಸರಿ ಸುಮಾರು ಸಾವಿರಕ್ಕೂ ಮೇಲ್ಪಟ್ಟು ವೈವಿದ್ಯಮಯ ನೆನಪಿನ ಕಾಣಿಕೆಗಳು. ಸಾವಿರ ರು. ಬೆಲೆ ಬಾಳುವ ನೆನಪಿನ ಕಾಣಿಕೆಗಳಿಂದ ಹಿಡಿದು ಹತ್ತು ಪೈಸೆಯ ‘ಚಾಕ್ ಪೀಸ್’ನಲ್ಲಿ ಕೆತ್ತಿದ ಪ್ರಾಣೇಶರ ಆಕೃತಿಯ ಪುಟ್ಟ ಮೂರ್ತಿ, ಮುತ್ತಿನ ಹಾರ, ಅಡಿಕೆಹಾರ, ಯಾಲಕ್ಕಿ ಹಾರಗಳು, ಬಗೆ ಬಗೆಯ ಮೈಸೂರು ಪೇಟಾಗಳು, ಅಭಿನಂದನಾ ಬರಹಗಳು, ಅಭಿಮಾನಿಗಳು ತಮ್ಮ ಕೈಯಾರೆ ಬಿಡಿಸಿದ ಇವರ ತೈಲಚಿತ್ರಗಳು, ಪೆನ್ಸಿಲ್ ಚಿತ್ರಗಳು, ರೇಷ್ಮೆದಾರದಲ್ಲಿ ಹೆಣೆದ ಚಿತ್ರಗಳು, ಕಾರ್ಟೂನುಗಳು, ಕ್ರಿಸ್ಟಲ್ ಮೊಮೆಂಟೋಗಳು, ಪುಸ್ತಕಗಳು ಹೀಗೆ ಪ್ರಾಣೇಶ್ ಹಾಸ್ಯ ಜೀವನದ ಅನಾವರಣವೇ ಇಲ್ಲಾಗುತ್ತದೆ.

ಅವೆಲ್ಲವೂ ನನ್ನ ಮಕ್ಕಳಿದ್ದ ಹಾಗೆ

‘ಪ್ರಶಸ್ತಿಗಳು ನನ್ನ ಪಾಲಿಗೆ ಮಕ್ಕಳಿದ್ದ ಹಾಗೆ. ಜನರು ನಮ್ಮ ಕಲೆಯನ್ನು ಮೆಚ್ಚಿ ತುಂಬು ಪ್ರೀತಿಯಿಂದ ಅವುಗಳನ್ನು ಕೊಟ್ಟಿರುತ್ತಾರೆ. ಅವುಗಳಿಗೆ ಸೂಕ್ತಿ ಗೌರವ ನೀಡಿದರೆ ಕೊಟ್ಟವರ ಅಭಿಮಾನಕ್ಕೆ ನಾವು ಗೌರವ ಕೊಟ್ಟ ಹಾಗೆ. ಅದಕ್ಕಾಗಿಯೇ ನಾನು ಮೊದಲಿನಿಂದಲೂ ಬಂದ ಎಲ್ಲಾ ಪ್ರಶಸ್ತಿಗಳನ್ನೂ ಜೋಪಾನ ಮಾಡಿದ್ದೇನೆ.

ಅಲ್ಲದೇ ಅವೆಲ್ಲವನ್ನೂ ನನ್ನ ತಮ್ಮ ಸ್ವಾಮಿರಾಚಾರ್ಯನ ನೆನಪುಗಳೊಂದಿಗೆ ಬೆಸೆಯುವ ಕೆಲಸವನ್ನೂ ಮಾಡಿದ್ದೇನೆ. ಆ ಕುಟೀರಕ್ಕೆ ಹೋದರೆ, ಅಲ್ಲಿನ ಪ್ರಶಸ್ತಿಗಳನ್ನು ನೋಡಿದರೆ ನನಗೆ ನನ್ನ ತಮ್ಮ ನೆನಪಾಗುತ್ತಾನೆ. ನನ್ನ ಹಾಸ್ಯ ಪಯಣದ ದಾರಿ ನೆನಪಾಗುತ್ತದೆ’ ಎಂದು ಹೇಳಿಕೊಳ್ಳುತ್ತಾರೆ ಗಂಗಾವತಿ ಪ್ರಾಣೇಶ್.

-ಶ್ರೀಪಾದ್ ಕುಲಕರ್ಣಿ 

Follow Us:
Download App:
  • android
  • ios