ಬೆಂಗಳೂರು(ಅ. 16): ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ನಿರ್ದೇಶನದ ‘ಕಾಫಿ ತೋಟ’ ಚಲನಚಿತ್ರ ಕತಾರ್ ದೇಶದಲ್ಲಿ ಭರ್ಜರಿಯಾಗಿ ಓಡುತ್ತಿದೆ. ಕತಾರ್ ಕನ್ನಡಿಗರು 'ಕಾಫಿ ತೋಟ' ನೋಡಿ ಖುಷಿಯಾಗಿದ್ದಾರೆ. ದೋಹಾ ನಗರದಲ್ಲಿ ಇದೇ ಅ. 13ರಂದು ಕಾಫಿ ತೋಟ ಬಿಡುಗಡೆಯಾದ ಚಿತ್ರಮಂದಿರ ಸಂಪೂರ್ಣ ತುಂಬಿ ಯಶಸ್ವಿ ಪ್ರದರ್ಶನಗೊಂಡಿದೆ.

ಇದೇ ಪ್ರಥಮ ಬಾರಿಗೆ ಚಿತ್ರದ ನಾಯಕ ರಘು ಮುಖರ್ಜಿ ಮತ್ತು ನಾಯಕಿಯರಾದ ರಾಧಿಕಾ ಚೇತನ್, ನವ ನಟಿ ಅಪೇಕ್ಷಾ ಪುರೋಹಿತ್ ಮತ್ತು ಚಿತ್ರದ ನಿರ್ಮಾಪಕ ಅವರುಗಳು ಆಗಮಿಸಿದ್ದರು. ಸಂಪೂರ್ಣ ಚಿತ್ರವನ್ನು ಪ್ರೇಕ್ಷಕರೊಂದಿಗೆ ಕುಳಿತು ವೀಕ್ಷಿಸಿದ ಇವರುಗಳು, ಕತಾರ್'ನಲ್ಲಿ ತಮ್ಮ ಚಿತ್ರ ಯಶಸ್ವಿ ಪ್ರದರ್ಶನಗೊಂಡ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಕತಾರ್ ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದರು. ಕೇವಲ ಒಂದು ವರ್ಷದ ಅವಧಿಯಲ್ಲಿ 8 ಕನ್ನಡ ಚಿತ್ರಗಳು ಯಶಸ್ವಿ ಪ್ರದರ್ಶನಗೊಂಡ ಬಗ್ಗೆ ಸಂತಸ ವ್ಯಕ್ತಪಡಿಸಿದ ಇವರುಗಳು, ಮುಂದೆಯೂ ಕನ್ನಡ ಚಿತ್ರಗಳಿಗೆ ಇದೇ ರೀತಿಯ ಸಹಕಾರ ತೋರುವಂತೆ ಮನವಿ ಮಾಡಿದರು. ಇದಕ್ಕೆ ಕಾರಣಕರ್ತರಾದ ಚಿತ್ರ ಪ್ರದರ್ಶನದ ಮುಖ್ಯ ಆಯೋಜಕರಾದ ಸುಬ್ರಮ್ಮಣ್ಯ ಹೆಬ್ಬಾಗಿಲು ಅವರನ್ನು ಬಹುವಾಗಿ ಪ್ರಶಂಸಿಸಿದರು.

ಇದೇ ಸಂದರ್ಭದಲ್ಲಿ ಸುಬ್ರಮ್ಮಣ್ಯ ಹೆಬ್ಬಾಗಿಲು ಹಾಗು ಗೆಳೆಯರ ಬಳಗವು ಅವರೆಲ್ಲರನ್ನೂ ಆತ್ಮೀಯವಾಗಿ ಸನ್ಮಾನಿಸಿದರು. ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ ಅರವಿಂದ ಪಾಟೀಲ್, ಐ.ಸಿ.ಬಿ.ಎಫ಼್'ನ ಕಾರ್ಯದರ್ಶಿ ಮಹೇಶ್ ಗೌಡ, ಐ.ಸಿ.ಸಿ ಯ( ಭಾರತೀಯ ಸಾಂಸ್ಕೃತಿಕ ಕೇಂದ್ರ) ಪದಾಧಿಕಾರಿ ನಿಯಾಜ಼್ ಅಹಮದ್ ಮತ್ತು ಕರ್ನಾಟಕ ಸಂಘ ಹಾಗು ಸೋದರ ಸಂಸ್ಥೆಗಳ ಮುಖ್ಯಸ್ಥರುಗಳೆಲ್ಲರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.