ಸಿಎಂ ಸಿದ್ದರಾಮಯ್ಯ ಒಂದು ತಿಂಗಳ ಸಾಧನಾ ಯಾತ್ರೆ ಅಂತ್ಯ

entertainment | Saturday, January 13th, 2018
Suvarna Web Desk
Highlights

ಸತತ ಒಂದು ತಿಂಗಳ ಕಾಲ ರಾಜ್ಯದ 90ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಾಧನಾ ಸಮಾವೇಶ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ವಿಧಾನಸಭಾ ಚುನಾವಣೆಗೆ ಒಂದು ಹಂತದ ಪ್ರವಾಸ ಮುಗಿಸಿದ್ದಾರೆ.

ಬೆಂಗಳೂರು(ಜ.13): ಸತತ ಒಂದು ತಿಂಗಳ ಕಾಲ ರಾಜ್ಯದ 90ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಾಧನಾ ಸಮಾವೇಶ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ವಿಧಾನಸಭಾ ಚುನಾವಣೆಗೆ ಒಂದು ಹಂತದ ಪ್ರವಾಸ ಮುಗಿಸಿದ್ದಾರೆ.

ಇದೀಗ ತಮ್ಮ ಸರ್ಕಾರದ ಅವಧಿಯ ಕೊನೆಯ ಬಜೆಟ್‌ಗೆ ಅಣಿಯಾಗಲಿದ್ದಾರೆ. ಕಳೆದ ಡಿಸೆಂಬರ್ 13ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದಿಂದ ಸರ್ಕಾರದ ಸಾಧನಾ ಸಮಾವೇಶ ಆರಂಭಿಸಿ, ಹೈದರಾಬಾದ್-ಕರ್ನಾಟಕ, ಮುಂಬೈ-ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಹಳೆ ಮೈಸೂರು ಜಿಲ್ಲೆಗಳು ಸೇರಿದಂತೆ ಸುಮಾರು 100 ವಿಧಾನಸಭಾ ಕ್ಷೇತ್ರಗಳಲ್ಲಿ ಶುಕ್ರವಾರದವರೆಗೆ ಸಂಚರಿಸಿರುವ ಸಿಎಂ ಸಿದ್ದರಾಮಯ್ಯ, ಜ.13ರಂದು ಬೆಂಗಳೂರಿಗೆ ವಾಪಸಾಗುವರು. ನಂತರ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳುವರು. ರಾಹುಲ್ ರಾಜ್ಯ ಪ್ರವಾಸದ ವೇಳಾಪಟ್ಟಿ ಸಿದ್ಧಪಡಿಸುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಅದಾದ ಬಳಿಕ ಜ.14ರಂದು ನ್ಯಾ.ಸದಾಶಿವ ಆಯೋಗದ ಶಿಫಾರಸಿನ ಅನ್ವಯ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ನೀಡುವ ವಿಚಾರದ ಸಂಬಂಧ ದಲಿತ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸುವರು. ನಂತರ ಸಂಕ್ರಾಂತಿ ಹಬ್ಬದ ರಜೆ ನಿಮಿತ್ತ ಒಂದೆರಡು ದಿನಗಳ ವಿಶ್ರಾಂತಿ ಬಳಿಕ ಜನವರಿ 18ರಿಂದ ಫೆಬ್ರವರಿ 1ರವರೆಗೆ ಬಜೆಟ್ ಪೂರ್ವಭಾವಿ ಸಭೆಗಳನ್ನು ನಡೆಸುವರು.

ಜ.18ರಿಂದ ಫೆ.1ರವರೆಗೆ ರಜಾ ದಿನಗಳನ್ನು ಹೊರತುಪಡಿಸಿ ಸತತ 11 ದಿನಗಳ ಕಾಲ ರಾಜ್ಯದ ಪ್ರಮುಖ ಇಲಾಖೆಗಳ ಮುಖ್ಯಸ್ಥರು, ರೈತ ಮುಖಂಡರು, ಕೈಗಾರಿಕೋದ್ಯಮಿಗಳು, ವಿವಿಧ ವಲಯಗಳ ಮುಖಂಡರು, ಗಣ್ಯರು ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರಗಳ ಮುಖಂಡರೊಂದಿಗೆ ಮುಂಬರುವ ಬಜೆಟ್‌ನಲ್ಲಿ ಅಳವಡಿಸಬಹುದಾದ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸುವರು.

ಜನವರಿ 27ರಿಂದ ರಾಹುಲ್ ರಾಜ್ಯ ಪ್ರವಾಸ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಸಿದ್ಧತೆ ಹಾಗೂ ರಣತಂತ್ರದ ರೂಪರೇಷೆ ಸಿದ್ಧಪಡಿಸುವುದು, ಜ. 27ರಿಂದ ರಾಹುಲ್‌ಗಾಂಧಿಯವರ ಕರ್ನಾಟಕ ಪ್ರವಾಸ ಮತ್ತಿತರ ವಿಷಯಗಳ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯಸೇರಿದಂತೆ ರಾಜ್ಯ ಮುಖಂಡರು ಶನಿವಾರ ಬೆಳಗ್ಗೆ ದೆಹಲಿಗೆ ತೆರಳಲಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಲ್ಲಿ ಆಯೋಜಿಸಿರುವ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷರಾದ ಎಸ್.ಆರ್. ಪಾಟೀಲ್, ದಿನೇಶ್ ಗುಂಡೂರಾವ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್, ಆಸ್ಕರ್ ಫರ್ನಾಂಡೀಸ್ ಅವರು ಆಹ್ವಾನಿತರಾಗಿದ್ದಾರೆ.

ಈ ಸಭೆಯಲ್ಲಿ ಮುಖ್ಯವಾಗಿ ರಾಜ್ಯದ ರಾಜಕೀಯ ಪರಿಸ್ಥಿತಿ, ಮಹಾದಾಯಿ, ಲಿಂಗಾಯತ ಪ್ರತ್ಯೇಕ ಧರ್ಮ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಕಾಂಗ್ರೆಸ್ ತಳೆದಿರುವ ನಿಲುವಿನ ಬಗ್ಗೆ ಚರ್ಚೆ ನಡೆಯಲಿದೆ. ಅಲ್ಲದೆ, ರಾಜ್ಯದಲ್ಲಿ ಹಾಲಿ ಕಾಂಗ್ರೆಸ್ ಪಕ್ಷದ ಸ್ಥಿತಿ, ಹಾಲಿ ಶಾಸಕರು ಕ್ಷೇತ್ರದಲ್ಲಿ ಹೊಂದಿರುವ ವರ್ಚಸ್ಸು ಮತ್ತು ಗೆಲ್ಲಬಲ್ಲವರು, ಸೋಲುವ ಸಾಧ್ಯತೆಯಿರುವ ಶಾಸಕರ ಬಗ್ಗೆ ಕೈಗೊಳ್ಳಬೇಕಾದ ನಿಲುವು ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಸಾದ್ಯಂತವಾಗಿ ಚರ್ಚೆ ನಡೆಯಲಿದೆ.

ರಾಜ್ಯಕ್ಕೆ ರಾಹುಲ್ ಗಾಂಧಿ ಅವರ ಪ್ರವಾಸದ ವೇಳಾಪಟ್ಟಿಯೂ ಇದೇ ವೇಳೆ ಅಖೈರು ಗೊಳ್ಳಲಿದೆ. ಕೆಪಿಸಿಸಿ ನೀಡಿರುವ ಪ್ರವಾಸದ ಪ್ರಸ್ತಾಪಿತ ವೇಳಾಪಟ್ಟಿ ಪ್ರಕಾರ ರಾಹುಲ್ ಗಾಂಧಿ ಅವರು ಜ. 27ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಪಕ್ಷದ ಪರಿಶಿಷ್ಟ ಪಂಗಡ ವಿಭಾಗವು ಆಯೋಜಿಸುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಜ. 28ರಂದು ಕೋಲಾರದ ವಿಧುರಾಶ್ವತ್ಥದಲ್ಲಿ ರೈತ ಸಮಾವೇಶ ಮತ್ತು ಅದೇ ದಿನ ಮಧ್ಯಾಹ್ನ ಮೈಸೂರಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಮಾವೇಶ ಯೋಜಿಸಲಾಗಿದೆ. ಜ. 29ರಂದು ಬೆಂಗಳೂರಿನಲ್ಲಿ (ಅರಮನೆ ಮೈದಾನ) ಬೃಹತ್ ಸಮಾವೇಶ ಆಯೋಜಿಸಲಾಗಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk