ಬೆಂಗಳೂರು (ಸೆ. 24): ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಡಿ ಬೀಟ್ಸ್‌ನ ಯೂಟ್ಯೂಬ್ ಚಾನಲ್‌ನಲ್ಲಿ ಸ್ವತಃ ದರ್ಶನ್ ಅವರೇ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತಮ್ಮ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ.

ಪಕ್ಕಾ ಮಾಸ್ ಲುಕ್‌ನಲ್ಲಿ ಚಿತ್ರದ ಮೊದಲ ಲುಕ್ ಅನಾವರಣಗೊಂಡಿದೆ. ಹೀಗಾಗಿ ಇಡೀ ಸಿನಿಮಾ ಹೀಗೆ ಕಮರ್ಷಿಯಲ್ಲಾಗಿರುತ್ತದೆ ಎಂಬುದು ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಮಾತು. ‘ದೊಡ್ಡ ಬಜೆಟ್ ಚಿತ್ರವಿದು. ಹೆಚ್ಚು ಕಮ್ಮಿ ನೂರು ದಿನ ಚಿತ್ರೀಕರಣ ಮಾಡಿದ್ದೇವೆ. ಇಬ್ಬರು ನಾಯಕಿಯರು. ಧನಂಜಯ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ಖಳನಟರು ಕೂಡ ಖಡಕ್ ಆಗಿದ್ದಾರೆ. ಇದು ಫ್ಯಾಮಿಲಿ ಮತ್ತು ಮಾಸ್ ಆ್ಯಕ್ಷನ್ ಪ್ರಿಯರಿಗೆ ಹೇಳಿ ಮಾಡಿಸಿರುವಂತಹ ಸಿನಿಮಾ ಎಂಬುದರಲ್ಲಿ ಅನುಮಾನವಿಲ್ಲ. ಸದ್ಯದಲ್ಲೇ ಟೀಸರ್ ಹಾಗೂ ಟ್ರೇಲರ್ ಬರಲಿದೆ. ಆ ನಂತರ ಆಡಿಯೋ ಕೂಡ ದೊಡ್ಡ ಈವೆಂಟ್ ಮೂಲಕ ಬಿಡುಗಡೆ ಮಾಡುವ ಯೋಚನೆ ಇದೆ’ ಎನ್ನುತ್ತಾರೆ ನಿರ್ಮಾಪಕಿ ಶೈಲಜಾ ನಾಗ್. ಚಿತ್ರದ ನಿರ್ದೇಶಕ ಪಿ. ಕುಮಾರ್ ಈ ಹಿಂದೆ ರಜನಿಕಾಂತ್ ಅವರ ಲಿಂಗ ಚಿತ್ರಕ್ಕೆ ಕತೆ ಕೊಟ್ಟವರು. ಸುದೀಪ್ ನಟನೆಯ ವಿಷ್ಣುವರ್ಧನ ಚಿತ್ರವನ್ನು ನಿರ್ದೇಶಿಸಿದವರು.

ಆಯಿಲ್ ಮಾಫಿಯಾ ಹಿನ್ನೆಲೆ

ಯಜಮಾನ ಚಿತ್ರದ ಕತೆ ಏನು? ಈ ಯಜಮಾನನಿಗೂ ಹಳೆಯ ಯಜಮಾನನಿಗೂ ಏನಾದರೂ ನಂಟು ಉಂಟೇ? ಎಂದರೆ ಖಂಡಿತ ಇಲ್ಲ ಎನ್ನುತ್ತಾರೆ ನಿರ್ಮಾಪಕರು. ಇದು ಆಯಿಲ್ ಮಾಫಿಯಾ ಹಿನ್ನೆಲೆಯಲ್ಲಿ ಮೂಡಿಬರುವ ಕತೆ. ಇಡೀ ಸಿನಿಮಾ ಆಯಿಲ್ ದಂಧೆಯನ್ನು ಹಿನ್ನೆಲೆಯಾಗಿಟ್ಟುಕೊಂಡಿದ್ದು, ಇದನ್ನು ತೆರೆ ಮೇಲೆ ತುಂಬಾ ಅದ್ದೂರಿ ಕಮರ್ಷಿಯಲ್ ನೆರಳಿನಲ್ಲಿ ತೋರಿಸಲಾಗಿದೆಯಂತೆ.

‘ನಮ್ಮ ಕತೆಯ ಮುಖ್ಯ ಪಿಲ್ಲರ್ ಆಯಿಲ್ ಮಾಫಿಯಾ. ಇದನ್ನು ಚಿತ್ರದ ನಾಯಕ ಹೇಗೆ ಮಟ್ಟ ಹಾಕುತ್ತಾನೆ? ನಾಯಕನಿಗೂ ಈ ಮಾಫಿಯಾಗೂ ನೇರ ಲಿಂಕು ಇರುತ್ತದೆಯೇ? ಎಂಬುದು ಚಿತ್ರದ ಉಳಿದ ಕುತೂಹಲಗಳು. ಅದನ್ನು ತೆರೆ ಮೇಲೆಯೇ ನೋಡಬೇಕು’ ಎಂಬುದು ಶೈಲಜಾ ನಾಗ್ ಅವರ ಮಾತು.

ಡಿಸೆಂಬರ್ ಕೊನೆಯ ವಾರ ಸಿನಿಮಾ!

ದರ್ಶನ್, ರಶ್ಮಿಕಾ ಮಂದಣ್ಣ ಹಾಗೂ ತಾನ್ಯಾ ಹೋಪ್ ಜೋಡಿಯಾಗಿ ನಟಿಸಿರುವ ‘ಯಜಮಾನ’ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಒಂದು ಮಾಹಿತಿಯ ಪ್ರಕಾರ ಸಿನಿಮಾ ಡಿಸೆಂಬರ್ 21 ಅಥವಾ 28 ರಂದು ತೆರೆಗೆ ಬರುವ ಸಾಧ್ಯತೆಗಳಿವೆ. ಆದರೆ, ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಹೇಳುತ್ತಿಲ್ಲ.