ಬೆಂಗಳೂರು (ಆ. 08): ತೆರೆಗೆ ಬರುತ್ತಿರುವ ಹೊತ್ತಿನಲ್ಲಿ ಪಾದರಸ ಸಿನಿಮಾ ವಿವಾದದ ಕೇಂದ್ರಬಿಂದುವಾಗಿದೆ. ಅದು ಕೂಡ ಚಿತ್ರದ ನಾಯಕಿ ಹಾಗೂ ಚಿತ್ರದ ನಿರ್ದೇಶಕ ಹೃಷಿಕೇಶ್ ಜಂಬಗಿ ನಡುವೆ ಎಂಬುದು ವಿಶೇಷ. ಸದ್ಯಕ್ಕೆ ಚಿತ್ರತಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಚಿತ್ರದ ನಾಯಕಿ ವಿರುದ್ಧ ದೂರು ನೀಡಿದೆ.

ಇಷ್ಟಕ್ಕೂ ನಡೆದಿರುವುದೇನು?
ಚಿತ್ರತಂಡ ಹೇಳಿದ್ದು ಆ.10 ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಒಂದು ಸಿನಿಮಾ ಬಿಡುಗಡೆಯಾಗುತ್ತಿದೆ ಎಂದರೆ ಅದರ ಸುತ್ತ ಸಾಕಷ್ಟು ಪ್ರಚಾರದ ಕಾರ್ಯಕ್ರಮಗಳನ್ನು ರೂಪಿಸಿರುತ್ತೇವೆ. ಚಿತ್ರದ ಎಲ್ಲ ಕಲಾವಿದರನ್ನು ಒಳಗೊಂಡಂತೆ ಈ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ಆದರೆ, ಇದ್ದಕ್ಕಿದ್ದಂತೆ ಚಿತ್ರದ ನಾಯಕಿ ವೈಷ್ಣವಿ ಮೆನನ್ ನಮ್ಮ ಚಿತ್ರದ ಪ್ರಚಾರಕ್ಕೆ ಬರುತ್ತಿಲ್ಲ. ಈ ಬಗ್ಗೆ ಕೇಳಿದರೂ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಕನ್ನಡ ಸಿನಿಮಾ ಪ್ರಚಾರಕ್ಕೆ ಬರುವ ಬದಲು ತಮಿಳು ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಬೇರೊಂದು ಚಿತ್ರೀಕರಣ ಇರುತ್ತದೆಂದು ಚಿತ್ರತಂಡದ ಯಾರೊಬ್ಬರಿಗೂ ವೈಷ್ಣವಿ ಮೆನನ್ ಅವರು ತಿಳಿಸಿಲ್ಲ.  ಏಕಾಏಕ ಪ್ರಚಾರಕ್ಕೆ ಕೈ ಕೊಟ್ಟಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ದೂರು ನೀಡಿದ್ದಾರೆ.

ಈ ಬಗ್ಗೆ ನಾಯಕಿ ಕಡೆಯಿಂದ ಕೇಳಿ ಬರುವುದೇನು? 

ಇಡೀ ಪ್ರಕರಣದ ಕುರಿತು ಏನೆಂದು ಹೇಳದೆ ಸೋಷಲ್ ಮೀಡಿಯಾಗಳಲ್ಲಿ ‘ಪಾದರಸ’ ಚಿತ್ರದ ನಿರ್ದೇಶಕರ ಮೇಲೆ ಕಾಸ್ಟಿಂಗ್ ಕೌಚ್ ಅರೋಪ ಮಾಡುತ್ತಿದ್ದಾರೆ. ಈ ಕುರಿತು ಹೆಚ್ಚಿನ ವಿವರ ಕೇಳಲು ಹೋದರೆ ಸಂಪರ್ಕಕ್ಕೆ ಸಿಗುತ್ತಿಲ್ಲ. ವಾಣಿಜ್ಯ ಮಂಡಳಿಗೆ ನೀಡಿರುವ ದೂರಿನ ಬಗ್ಗೆಯೂ ವೈಷ್ಣವಿ ಕಡೆಯಿಂದ ನೋ ರೆಸ್ಪಾನ್ಸ್. ಇಷ್ಟೆಲ್ಲ ತಾಪತ್ರೆಯಗಳ ನಡುವೆಯೂ ಸಂಚಾರಿ ವಿಜಯ್ ನಾಯಕನಾಗಿ ಕಾಣಿಸಿಕೊಂಡಿರುವ ‘ಪಾದರಸ’ ಸಿನಿಮಾ ಇದೇ ಶುಕ್ರವಾರ (ಆ.10) ತೆರೆ ಕಾಣುತ್ತಿದೆ.

ಸಾಕಷ್ಟು ನಿರೀಕ್ಷೆ ಇಟ್ಟುಕೊಂಡೇ ಈ ಚಿತ್ರದ ಮೂಲಕ ಸಂಚಾರಿ ವಿಜಯ್ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಸಂಚಾರಿ ವಿಜಯ್ ಈ ಚಿತ್ರದಲ್ಲಿ ಪ್ಲೇಬಾಯ್ ಪಾತ್ರ ಮಾಡಿದ್ದಾರೆ. ಹಿಂದಿಯ ಇಮ್ರಾನ್ ಹಶ್ಮಿಯನ್ನೂ ಮೀರಿಸುವಷ್ಟು ಪ್ಲೇ ಬಾಯ್ ಪಾತ್ರವಂತೆ. ಯಾಕೆಂದರೆ ಚಿತ್ರದಲ್ಲಿ ಇಬ್ಬರು ನಾಯಕಿಯರ ಜತೆ ಬರೋಬ್ಬರಿ 12 ಮಂದಿ ಹುಡುಗಿಯರ ಜತೆ ರೊಮ್ಯಾನ್ಸ್  ಮಾಡುತ್ತಾರಂತೆ.

‘ನಿಜ ಜೀವನದಲ್ಲಿ ನಾನು ಇಷ್ಟೊಂದು ಮಂದಿ ಹುಡುಗಿಯರ ಜತೆ ಮಾತು ಆಡಿಲ್ಲ. ಆದರೆ, ತೆರೆ ಮೇಲೆ ಒಂದು ಡಜನ್ ಹುಡುಗಿಯರ ಜತೆ ರೊಮ್ಯಾನ್ಸ್ ಮಾಡಿದ್ದೇನೆ ಎಂಬುದೇ ಈ ಚಿತ್ರದಲ್ಲಿನ ನನ್ನ ಪಾತ್ರದ ಹೈಲೈಟ್’ ಎನ್ನುತ್ತಾರೆ ಸಂಚಾರಿ ವಿಜಯ್.