ಬಾಲಿವುಡ್‌ ಬೆಡಗಿ ರಾಧಿಕಾ ಆಪ್ಟೆ ಬ್ರಿಟನ್‌ ಸಂಗೀತಗಾರ ಬೆನಡಿಕ್ಟ್ ಟೇಲರ್‌ ಮದುವೆಯಾಗಿದ್ದು 2012ರಲ್ಲಿ. ಆಗಿನಿಂದಲೂ ಬೆನಡಿಕ್ಟ್ ಬ್ರಿಟನ್‌ನಲ್ಲಿಯೇ, ರಾಧಿಕಾ ಭಾರತದಲ್ಲಿಯೇ. ಹೀಗೆ ನಾನೊಂದು ತೀರ, ನೀನೊಂದು ತೀರ ಎನ್ನುವ ಕತೆ ಈ ಜೋಡಿಯದ್ದು ಎಂದು ತಿಳಿದಿದ್ದವರ ಕಲ್ಪನೆಯನ್ನು ಸುಳ್ಳಾಗಿಸಿದ್ದಾರೆ ರಾಧಿಕಾ ಆಪ್ಟೆ. ಅದು ಹೇಗೆಂದರೆ ತಮ್ಮ ಸಂಸಾರ, ಅದರೊಂದಿಗೆ ಅವರಿಗೆ ಇರುವ ಬೆಸುಗೆಯನ್ನು ಬಿಚ್ಚಿಡುವುದರ ಮೂಲಕ.

‘ನಾನು ಮತ್ತು ಬೆನಡಿಕ್ಟ್ ಟೇಲರ್‌ ದೈಹಿಕವಾಗಿ ದೂರ ಇರಬಹುದು. ಆದರೆ ನಮ್ಮ ಮನಸ್ಸು ಯಾವಾಗಲೂ ಹತ್ತಿರವೇ ಇವೆ. ಏನಿಲ್ಲವೆಂದರೂ ತಿಂಗಳಲ್ಲಿ ಐದು ದಿನ ಅವನು ನಾನು ಒಟ್ಟಿಗೆ ಸೇರುತ್ತೇವೆ. ಕೆಲವರು ನನ್ನನ್ನು ನೇರವಾಗಿಯೇ ನೀವಿಬ್ಬರೂ ಮದುವೆಯಾಗಿದ್ದರೂ ಹೀಗೆ ದೂರ ಇರುವುದು ಎಷ್ಟು ಸರಿ ಎಂದು ಕೇಳುತ್ತಾರೆ. ಅವರಿಗೆ ನಾನು ಹೇಳುವುದು ಮದುವೆಯಾಗಿ ಒಂದೇ ಮನೆಯಲ್ಲಿ ಇದ್ದರೆ ಅದು ಸುಂದರ ಸಂಸಾರವೇ? ದೂರದಲ್ಲಿ ಇದ್ದು ಪ್ರೀತಿಯನ್ನು ಹೊಂದಿದ್ದರೆ ಸಾಲದೇ ಎಂದು’ ಹೀಗೆ ತಾನೂ ಬೆನಡಿಕ್ಟ್ ದೂರವಿದ್ದರೂ ಅನ್ಯೋನ್ಯವಾಗಿ ಇದ್ದೇವೆ. ನನಗೆ ಯಾವ ಒಂಟಿತನವೂ ಕಾಡುವುದಿಲ್ಲ ಎಂದು ಹೇಳಿಕೊಂಡಿರುವ ರಾಧಿಕಾ ಕಾಯಕದ ಬಗ್ಗೆ ಹೇಳಿರುವ ಮತ್ತೊಂದು ಮಾತು ಸ್ವಾರಸ್ಯಕರವಾಗಿದೆ.

‘ಒಮ್ಮೆ ಬೆನಡಿಕ್ಟ್ ತನ್ನ ಕೆಲಸವನ್ನೇ ಬಿಟ್ಟು ಭಾರತಕ್ಕೆ ಬರುತ್ತೇನೆ, ಇಬ್ಬರೂ ಒಟ್ಟಿಗೆ ಇರುವ ಎಂದು ಹೇಳಿದ್ದರು. ಆದರೆ ನನಗೆ ಅದು ಇಷ್ಟವಿಲ್ಲ. ಯಾಕೆಂದರೆ ನಮ್ಮ ಮೊದಲ ಪ್ರಯಾರಿಟಿ ಏನಿದ್ದರೂ ನಮ್ಮ ನಮ್ಮ ಕೆಲಸವೇ ಆಗಿರಬೇಕು. ಕೆಲಸವೇ ನಮಗೆ ಖುಷಿ ನೀಡುವುದು. ನಾನು ಖುಷಿಯಿಂದ ಇದ್ದರೆ ಮಾತ್ರ ನಾನು ಮತ್ತೊಬ್ಬರಿಗೆ ಖುಷಿ ಹಂಚಲು ಸಾಧ್ಯ. ನಾನೇ ದುಃಖಿಯಾಗಿದ್ದರೆ ಮತ್ತೊಬ್ಬರಿಗೆ ಹೇಗೆ ಖುಷಿ ಹಂಚಲಿ? ಅದಕ್ಕಾಗಿ ನಾವು ಯಾವುದಕ್ಕೆ ಎಷ್ಟುಮಹತ್ವ ನೀಡಬೇಕು ಎನ್ನುವುದನ್ನು ಅರಿತಿದ್ದೇವೆ. ನನ್ನ ಒಂಟಿತನ, ಸಂಸಾರದ ಬಗ್ಗೆ ಉಚಿತ ಸಲಹೆ ನೀಡುವವರು ಸ್ವಲ್ಪ ಅಂತರ ಕಾಯ್ದುಕೊಳ್ಳಿ ಪ್ಲೀಸ್‌’ ಎಂದು ಹೇಳಿಕೊಂಡಿದ್ದಾರೆ ರಾಧಿಕಾ.