ಶಿವಣ್ಣ ಬರ್ತಡೆ ನಂತರ ತಲೆಗೆ ಬಂದ ಕಾಡುಹರಟೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 13, Jul 2018, 6:09 PM IST
Birthday celebration facts and features small roundup
Highlights

ಈ ಜನ್ಮದಿನ ಅನ್ನೋದೆ ಹಾಗೆ, ಒಂದು ಕಡೆ ಸಂಭ್ರಮ ಇನ್ನೊಂದು ಕಡೆ ಒಂದು ವರ್ಷ ಹಾಗೆ ಕಳೆದುಹೋಯಿತಲ್ಲಾ ಎಂಬ ಆತಂಕ. ಇನ್ನು ಸೆಲೆಬ್ರಿಟಿಗಳ ಜನ್ಮದಿನ ಅಂದರೆ ಅಷ್ಟೆ ಕತೆ. ರಾಜಕಾರಣಿಗಳು ಸಿನಿಮಾ  ನಟರ ಜನ್ಮದಿನ ಅಂದರೆ ಅಲ್ಲಿಗೆ ಪೊಲೀಸ್ ಇಲಾಖೆಗೂ ತಲೆಬಿಸಿ ಶುರುವಾದಂತೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೊನ್ನೆ ತಮ್ಮ 56ನೇ ಜನ್ಮದಿನ ಆಚರಿಸಿಕೊಂಡರು. ಆಚರಿಸಿಕೊಂಡರು ಎನ್ನುವುದಕ್ಕಿಂತ ಅಭಿಮಾನಿಗಳೆಲ್ಲ ಸೇರಿ ಆಚರಿಸಿದರು ಎನ್ನಬಹುದು. ಒಮ್ಮೊಮ್ಮೆ ಅಭಿಮಾನಿಗಳ ಅಭಿಮಾನದ ಪರಾಕಾಷ್ಠೆ ಯಾವ ಹಂತ ತಲುಪುತ್ತದೆ ಎಂದು ಹೇಳಲಾಗುವುದಿಲ್ಲ. ಇದೀಗ ಎಲ್ಲರ ಕೈಗೂ ಸ್ಮಾರ್ಟ್ ಫೋನ್ ಗಳು ಬಂದ ಮೇಲೆ ಸೆಲ್ಫಿ ಕಿತ್ತಾಟಕ್ಕೂ ಬರವಿಲ್ಲ.

ಎಷ್ಟೋ ಸಾರಿ ಈ ಜನ್ಮದಿನವನ್ನು ಯಾವ ಪುರುಷಾರ್ಥಕ್ಕೆ ಆಚರಣೆ ಮಾಡುಕೊಳ್ಳುತ್ತಾರೋ?  ಎಂದು ಕೇಳಬೇಕಾಗುತ್ತದೆ. ಅನಾಥ ಆಶ್ರಮಕ್ಕೆ ತೆರಳಿ ಹಣ್ಣು ನೀಡುವುದು, ಅಥವಾ ರೋಗಿಗಳ ಯೋಗಕ್ಷೇಮ ವಿಚಾರಿಸುವುದು ಅಥವಾ  ಬಡ ಮಕ್ಕಳಿಗೆ ಒಂದೊತ್ತಿನ ಊಟ ಹಾಕುವುದು ಎಲ್ಲವನ್ನು ಒಪ್ಪಿಕೊಳ್ಳಬಹುದು. ಆದರೆ ಸಾವಿರಾರು ರೂಪಾಯಿ ತೆತ್ತು ಮುದ್ದೆಯಂತಹ ಕೇಕ್ ತಂದು ಮಧ್ಯರಾತ್ರಿ ಮಲಗಿದ್ದವರನ್ನು ಎಬ್ಬಿಸಿ ಬಾಯಿ ಸಿಹಿ ಮಾಡಿಕೊಂಡಿದ್ದರೆ ಒಂದು ಲೆಕ್ಕ.. ಆದರೆ ಮುಖಕ್ಕೆಲ್ಲ ಮೆತ್ತಿಕೊಳ್ಳುವರನ್ನು ನೋಡಿದರೆ ನಿಜಕ್ಕೂ ಇದೇನಾ ಜನ್ಮದಿನ ಎಂದು ಅನ್ನಿಸಿಬಿಡುತ್ತೆ.

ಇನ್ನು ಈ ಮೆತ್ತಿಕೊಂಡ ಕೇಕ್ ತೊಳೆಯಲು ನೀರು ವ್ಯರ್ಥ. ಬಿಸಿ ನೀರು ಮಾಡಿಕೊಳ್ಳದಿದ್ದರೆ ಅದು ಎಲ್ಲಿ ಹೋಗುತ್ತದೆ ಹಾಗಾಗಿ ಇಂಧನವೂ ವ್ಯರ್ಥ. ಓ ... ಇವರೇನು ಇಷ್ಟು ದೊಡ್ಡ ದೊಡ್ಡ ಮಾತಾಡುತ್ತಾರೆ? ನೀವೇನು ಉಳಿಸುತ್ತಿದ್ದೀರಾ? ಎಂದು ಮರು ಪ್ರಶ್ನೆ ನಿಮ್ಮ ಕಡೆಯಿಂದ ಬರಬಹುದು. ಆದರೆ ನಷ್ಟ ನಷ್ಟವೇ ತಾನೆ?

ಬರ್ತಡೆ ಆಚರಿಸಿಕೊಳ್ಳುವನ್ನು ಅಥವಾ ಅವಳನ್ನು ಹಿಡಿದು ಹಿಂಬದಿಯಿಂದ ಬಾರಿಸುವ ವಿಚಿತ್ರ ಮನೋಭಾವಕ್ಕೆ ‘ಬರ್ತಡೆ ಬಂಪ್’ ಎಂದು ಕರೆಯಲಾಗುತ್ತದೆ. ಪುಕ್ಕಟೆ ಏಟು ತಿಂದವರಿಗೂ ಉರಿ, ಏಟು ಕೊಡುವಾಗ ಎಡವಟ್ಟು ಮಾಡಿಕೊಳ್ಳುವವರಿಗೂ ನೋವು...

ಎಲ್ಲೋ ಶುರುವಾದ ಮಾತುಕತೆ ಇನ್ನೆಲ್ಲಿಗೋ ಹೋಗುತ್ತಿದೆ. ಅಭಿಮಾನಿಗಳು ಸೆಲ್ಫಿಗೆ ಮುಗಿ ಬೀಳುತ್ತಾರೆ. ಗೊಂದಲ ಉಂಟಾಗುತ್ತದೆ ಎಂದು ಅದೆಷ್ಟೋ ನಟರು ಜನ್ಮದಿನ ಆಚರಣೆ ಸಹವಾಸವೇ ಬೇಡ ಎಂದು ಸುಮ್ಮನಾಗಿದ್ದಾರೆ. ಆದರೆ ಅಭಿಮಾನಿಗಳು ಸುಮ್ಮನಿರಬೇಕಲ್ಲ. ಶಿವರಾಜ್ ಕುಮಾರ್ ಗೂ ಹೀಗೆ ಮಾಡಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಬಂದಿದ್ದ ಅಭಿಮಾನಿಯೊಬ್ಬನನ್ನು ಫೋಟೋ ತೆಗೆಸಿಕೊಂಡ ನಂತರ ಶಿವಣ್ಣ ಬದಿಗೆ ಸರಿಸಿದ್ದು ಇದೀಗ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ಪರ-ವಿರೋಧದ ವಿಚಾರಗಳು ಏನೇ ಇರಲಿ.  ಜನ್ಮದಿನದ ಸಂಭ್ರಮ ಒಂದು ನಿಯಂತ್ರಣದಲ್ಲಿದ್ದರೆ ಚೆನ್ನ. ಸುಮ್ಮನೆ ಹಾಲಿನ ಅಭಿಷೇಕ ಮಾಡುವುದು, ಸೆಲ್ಫಿಗಾಗಿ ಕಿತ್ತಾಟ ಮಾಡಿಕೊಂಡು ನೂಕು ನುಗ್ಗಲು ಮಾಡಿ ನಟರಿಗೂ ಕಿರಿಕಿರಿ ತರುವುದು, ಬಾಯಿ ಸಿಹಿ ಮಾಡಿಕೊಳ್ಳುವ ಬದಲು ಕೆಜಿ ಗಟ್ಟಲೆ ಕೇಕ್ ತಂದು ಹಾಳು ಮಾಡುವುದು.. ಇದೆಲ್ಲಾ ಸರಿಯೆ ಎಂದು ಒಂದು ಕ್ಷಣ ಯೋಚನೆ ಮಾಡಬೇಕಾಗುತ್ತದೆ.

"

ನಟ ಅಥವಾ ನಟಿಯ ಮೇಲೆ ನಿಮಗೆ ಅಷ್ಟೊಂದು ಅಭಿಮಾನ ಇದ್ದರೆ ಸಾಮಾಜಿಕ ತಾಣಗಳಿವೆ.  ನಿಮ್ಮ ನೆಚ್ಚಿನ ನಟರು ಅಲ್ಲಿರುತ್ತಾರೆ. ಸುಮ್ಮನೆ ಒಂದು ಶುಭಾಶಯ ಹೇಳಿ ಟ್ಯಾಗ್ ಮಾಡಿ ಅದನ್ನು ಬಿಟ್ಟು ಸೆಲ್ಫಿಗೆಂದು ಅಡ್ಡಬಿದ್ದು ನಟರಿಗೂ ಕಿರಿಕಿರಿ ನೀಡಿ ಪೊಲೀಸರಿಂದಲೂ ಏಟು ತಿನ್ನಬೇಡಿ...

loader