ಹೈದ್ರಾಬಾದ್‌[ಜು.15]: ಇದೇ ಜುಲೈ 21ರಿಂದ ಆರಂಭವಾಗಲಿರುವ ತೆಲುಗು ಆವೃತ್ತಿ ಬಿಗ್‌ಬಾಸ್‌ ಕಾರ್ಯಕ್ರಮದ ಆಯೋಜಕರ ಮೇಲೆ ಲೈಂಗಿಕ ಕಿರುಕುಳದಂಥ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಮಹಿಳಾ ಪತ್ರಕರ್ತೆ ಶ್ವೇತಾ ರೆಡ್ಡಿ ದೂರು ನೀಡಿರುವ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಹೈದ್ರಾಬಾದ್‌ನ ಬಂಜಾರಾ ಹಿಲ್ಸ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಕೆಲ ತಿಂಗಳ ನನಗೆ ಕರೆ ಮಾಡಿದ ಆಯೋಜಕರು, ಮೂರನೇ ಆವೃತ್ತಿಗೆ ನೀವು ಆಯ್ಕೆಯಾಗಿರುವುದಾಗಿ ತಿಳಿಸಿದ್ದರು. ಇದನ್ನು ಒಪ್ಪಿಕೊಂಡಿದ್ದ ನಾನು ಇತ್ತೀಚೆಗೆ ಕಾರ್ಯಕ್ರಮದ ನಾಲ್ವರು ಆಯೋಜಕರನ್ನು ಭೇಟಿ ಮಾಡಲು ಹೋಗಿದ್ದೆ. ಈ ವೇಳೆ ನಾಲ್ವರೂ ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡರು. ಜೊತೆಗೆ ನೀವು ಅಂತಿಮ ಹಂತಕ್ಕೆ ಆಯ್ಕೆಯಾಗಲು ನಮ್ಮ ಬಾಸ್‌ ಅನ್ನು ತೃಪ್ತಿಗೊಳಿಸಬೇಕು. ನೀವು ಯಾವ ರೀತಿಯಲ್ಲಿ ಅವರನ್ನು ತೃಪ್ತಿಗೊಳಿಸಲು ಸಿದ್ಧರಿದ್ದೀರಿ ಎಂದೆಲ್ಲಾ ಪ್ರಶ್ನಿಸಿದರು. ನಾನು ಈ ಬಗ್ಗೆ ಆಕ್ಷೇಪಿಸಿದ ಬಳಿಕ ನನ್ನ ದೇಹದ ಬಗ್ಗೆ ಕೀಳು ಮಾತುಗಳನ್ನು ಆಡಿದರು’ ಎಂದು ಪತ್ರಕರ್ತೆ ಮತ್ತು ಆ್ಯಂಕರ್‌ ಆಗಿರುವ ಶ್ವೇತಾ ರೆಡ್ಡಿ ಜುಲೈ 13ರಂದು ಸಲ್ಲಿಸಿದ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಪತ್ರಕರ್ತೆ ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ಅಭಿಷೇಕ್‌, ರಘು, ಶ್ಯಾಮ್‌ ಮತ್ತು ರವಿಕಾಂತ್‌ ಎಂಬ ನಾಲ್ವರು ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಾರಿಯ ತೆಲುಗು ಬಿಸ್‌ಬಾಸ್‌ ಕಾರ್ಯಕ್ರಮ ನಡೆಸಿಕೊಡುವ ಹೊಣೆಯನ್ನು ಖ್ಯಾತ ನಟ ನಾಗಾರ್ಜುನ ವಹಿಸಿಕೊಂಡಿದ್ದಾರೆ.