ಸಾವಿರಾರು ಅಡುಗೆ ರುಚಿ ನೋಡುವ 'ಒಗ್ಗರಣೆ ಡಬ್ಬಿ' ಮುರಳಿ ಒಂದು ಇಂಟೆರೆಸ್ಟಿಂಗ್ ವಿಷಯವನ್ನು ಬಿಗ್ ಬಾಸ್ ಮನೆಯಲ್ಲಿ ಬಾಯಿ ಬಿಟ್ಟಿದ್ದಾರೆ. ರುಚಿ ರುಚಿಯಾದ ಅಡುಗೆ ಸವಿಯೋದು ಮಾತ್ರ ಇವರಿಗೆ ಗೊತ್ತಂತೆ. ಅಡುಗೆ ಮಾಡೋದು ಗೊತ್ತೇ ಇಲ್ವಂತೆ!

ಹೌದು, ಮುರುಳಿಗೆ ಅಡುಗೆ ಮಾಡ್ಲಿಕ್ಕೇ ಬರಲ್ಲವೆಂದು ಖುದ್ದು ಬಿಗ್ ಬಾಸ್ ಮನೆಯಲ್ಲಿ ಅವರೇ ಒಪ್ಪಿಕೊಂಡಿದ್ದಾರೆ. ಇದುವರೆಗೂ 1500 ಶೋಗಳಲ್ಲಿ ಸುಮಾರು 6 ಸಾವಿರ ಬಗೆ ಬಗೆ ತಿಂಡಿಗಳನ್ನು ಸವಿದಿದ್ದಾರೆ. ಆದರೆ, ಪಾಕ ಪ್ರವೀಣರಂತೂ ಅಲ್ವಂತೆ. ಕೆಲವೊಮ್ಮೆ ಅವರ ಕಾರ್ಯಕ್ರಮದಲ್ಲಿ ಅವರ ಹೆಂಡತಿಯೂ ಅಡುಗೆ ಮಾಡಿರುವುದನ್ನು ನೋಡಿದ್ದೀವಿ. ಮುರುಳಿಯವರು ಮನೆಯಲ್ಲೂ ಹಾಗೆಯಂತೆ! ಮಾಡಿರುವುದನ್ನು ತಿಂದು ಅದಕ್ಕೆ ಏನು ಕಡಿಮೆ ಎಂದು ಹೇಳುತ್ತಾರೆ ವಿನಾಃ ಅಡುಗೆ ಮಾಡುವುದಿಲ್ಲವಂತೆ.

ಇವರು ಬಿಗ್ ಬಾಸ್ ಮನೆಗೆ ಹೋಗುವುದು ಅವರ ಹೆಂಡತಿಗೆ ಒಂದು ಚೂರು ಇಷ್ಟವಿರಲಿಲ್ಲವಂತೆ. ಆದರೆ ಅವರಿಗೋಸ್ಕರ ಒಪ್ಪಿಕೊಂಡಿದ್ದಾರೆ. ತಾನು ಬಿಗ್ ಬಾಸ್ ಮನೆಯಲ್ಲಿ ಬಹುಶಃ 'ಎದ್ದೇಳು ಮಂಜುನಾಥ' ಹಾಡು ಹೆಚ್ಚಾಗಿ ಹಾಕಿಸಿಕೊಳ್ಳಬಹುದು ಎಂದು ತಮ್ಮ ಬಗ್ಗೆ ತಾವೇ ಹಾಸ್ಯ ಮಾಡಿಕೊಂಡು ಮನೆಗೆ ಕಾಲಿಟ್ಟಿದ್ದಾರೆ. ಎಷ್ಟು ದಿನ ಉಳಿಯುತ್ತಾರೋ ಗೊತ್ತಿಲ್ಲ. ಬಿಗ್ ಬಾಸ್ ಸೀಸನ್ 6ರಲ್ಲಿ ಬಹಳಷ್ಟು ಪಾಕ ಪಂಡಿತರು ಇರುವುದರಿಂದ ಅಡುಗೆ ವಿಷಯಕ್ಕೆ ಕಡಿಮೆ ಜಗಳವಾಗುತ್ತಿದೆ. ಕೆಲವರು ಅಡುಗೆ ಮಾಡುವವರಾದರೆ, ಮತ್ತೆ ಕೆಲವರು ರುಚಿ ನೋಡುವುದರಲ್ಲಿ ಪ್ರವೀಣರು. ಇಂಥ ರುಚಿ ನೋಡೋ ಕಲಾವಿದರಲ್ಲಿ ಪ್ರಮುಖರು ಈ ಮುರಳಿ.