ಬೆಂಗಳೂರು :  ಬುಧವಾರ ಬೆಂಗಳೂರಿನ ವಾರ್ತಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿನಿಮೋತ್ಸವದ ಕಲಾ ನಿರ್ದೇಶಕ ವಿದ್ಯಾಶಂಕರ್‌ ಅವರು, ಫೆ.21ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸಿನಿಮೋತ್ಸವ ಉದ್ಘಾಟನೆ ನಡೆಯಲಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಫೆ.28ರಂದು ಸಂಜೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲೇ ಸಮಾರೋಪ ಸಮಾರಂಭ ನಡೆಯಲಿದೆ. 7 ದಿನಗಳ ಕಾಲ 11 ಪರದೆಗಳಲ್ಲಿ, 60 ದೇಶಗಳ, 200 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಮೂರು ಸ್ಪರ್ಧಾ ವಿಭಾಗದಲ್ಲಿ ಹತ್ತಾರು ಚಿತ್ರಗಳು ಸ್ಪರ್ಧಿಸಲಿವೆ ಎಂದು ವಿವರಿಸಿದರು.

ಬೆಂಗಳೂರಿನ ಒರಾಯನ್‌ ಮಾಲ್‌ನ ಪಿವಿಆರ್‌ ಸಿನಿಮಾಸ್‌ನಲ್ಲಿ ಫೆ.22ರಿಂದ ಸಿನಿಮಾ ಪ್ರದರ್ಶನ ಶುರುವಾಗಲಿದೆ. 7 ದಿನಗಳ ಸಿನಿಮಾ ವೀಕ್ಷಣೆಗೆ ಸಾರ್ವಜನಿಕರಿಗೆ .800 ಹಾಗೂ ಚಿತ್ರೋದ್ಯಮದ ಸದಸ್ಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಚಿತ್ರ ಸಮಾಜಗಳ ಸದಸ್ಯರಿಗೆ .400 ನೋಂದಣಿ ಶುಲ್ಕ ನಿಗದಿ ಮಾಡಲಾಗಿದೆ. ಈಗಾಗಲೇ ನೋಂದಣಿ ಆರಂಭವಾಗಿದ್ದು, ಇಲ್ಲಿಯವರೆಗೂ 800 ಮಂದಿ ಚಿತ್ರೋತ್ಸವಕ್ಕೆ ಹೆಸರು ನೋಂದಾಯಿಸಿ ಕೊಂಡಿದ್ದಾರೆ. ಎಂದಿನಂತೆ ಕನ್ನಡ ಚಲನಚಿತ್ರ ಅಕಾಡೆಮಿ, ವಾರ್ತಾ ಇಲಾಖೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ನೋಂದಾಯಿಸಿಕೊಂಡು ಪಾಸ್‌ ಪಡೆಯುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿದ್ಯಾಶಂಕರ್‌ ಹೇಳಿದರು.

ವಾರ್ತಾ ಇಲಾಖೆ ಕಾರ್ಯದರ್ಶಿ ಪಂಕಜ್‌ಕುಮಾರ್‌ ಪಾಂಡೆ ಮಾತನಾಡಿ, ರಾಜ್ಯ ಸರ್ಕಾರದ ವತಿಯಿಂದ ಬೆಂಗಳೂರಿನಲ್ಲಿ ನಡೆಯಲಿರುವ ಸಿನಿಮೋತ್ಸವಕ್ಕೆ ಎಲ್ಲಾ ರೀತಿಯಲ್ಲೂ ನೆರವು ನೀಡಿದೆ. ಬೆಂಗಳೂರು ಸಿನಿಮೋತ್ಸವಕ್ಕೆ ಜಾಗತಿಕ ಮನ್ನಣೆ ಸಿಕ್ಕಿರುವುದು ಹೆಮ್ಮೆ ವಿಚಾರ. ಏಳು ದಿನಗಳ ಕಾಲ ಸಿನಿಮಾ ಜಗತ್ತು ಬೆಂಗಳೂರಿನಲ್ಲಿ ನೆಲೆಸಲಿದೆ ಎಂಬುದು ಎಲ್ಲ ಸಿನಿಮಾ ಪ್ರೇಮಿಗಳ ಸಂಭ್ರಮ ಎಂದರು.

ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ಸರ್ಕಾರದ ವತಿಯಿಂದ ಕೆಲವೇ ರಾಜ್ಯಗಳಲ್ಲಿ ಚಿತ್ರೋತ್ಸವಗಳು ನಡೆಯುತ್ತಿವೆ. ಇವುಗಳಲ್ಲಿ ಕರ್ನಾಟಕವೂ ಒಂದು ಎಂಬುದು ಸಿನಿಮಾ ಮೇಕರ್‌ಗಳ ಖುಷಿಯ ವಿಚಾರ. ಈ ಬಾರಿ ಕಂಡರಿಯದ, ಕೇಳಿರದ ದೇಶಗಳ, ಭಾಷೆಗಳ ಸಿನಿಮಾ ಪ್ರದರ್ಶನ ಮಾಡುತ್ತಿರುವುದು ವಿಶೇಷ ಎಂದು ಹೇಳಿದರು. ಅಕಾಡೆಮಿಯ ರಿಜಿಸ್ಟ್ರಾರ್‌ ಎಚ್‌.ಬಿ.ದಿನೇಶ್‌ ಉಪಸ್ಥಿತರಿದ್ದರು.