ಬೆಂಗಳೂರು (ಜ.03): ‘ವಿವಿಧ ದೇಶಗಳ, ವಿವಿಧ ವಯೋಮಾನದ ಹೆಣ್ಣುಮಕ್ಕಳು ಅಲ್ಲಿದ್ದರು. ಅವರ ಜೊತೆಗೆ ಬೆರೆಯುವುದು ಸವಾಲಿನ ವಿಷಯ. ನಮ್ಮ ಪ್ರತೀ ಚಲನೆಯ ಮೇಲೂ ಕಣ್ಣಿಡುತ್ತಿದ್ದರು, ಸಣ್ಣಪುಟ್ಟದ್ದಕ್ಕೂ ಕಮೆಂಟ್ ಮಾಡುತ್ತಿದ್ದರು, ನಾವು ರೊಚ್ಚಿಗೇಳುವ ಹಾಗೆ ಮಾಡುತ್ತಿದ್ದರು. ಆ ಹೊತ್ತಿಗೆ ಆ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಬಹಳ ಕಷ್ಟವಾಗಿತ್ತು. ಈ ಸ್ಪರ್ಧೆಯಲ್ಲಿ ನಮ್ಮ ಚೆಲುವು ಅಷ್ಟೇ ಮಾನದಂಡವಾಗುತ್ತದೆ ಅಂದುಕೊಂಡಿದ್ದೆವು. ನಮ್ಮ ಊಹೆ ಸುಳ್ಳಾಗಿತ್ತು.’

ಸಿಮ್ರನ್ ಗೋಧ್ವಾನಿ ಎಂಬ ಬಟ್ಟಲುಗಣ್ಣಿನ ಚೆಲುವೆ ಕೂದಲು ಹಿಂದೆ ಸರಿಸುತ್ತ ಮಿಸೆಸ್ ಯುನಿವರ್ಸ್ ಸ್ಪರ್ಧೆಯ ಚಿತ್ರಣ ತೆರೆದಿಡುತ್ತಿದ್ದರು. ಅವರು ಈ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದವರು. ಉತ್ತರ ಭಾರತದ ಈ ಚೆಲುವೆ ಓದಿದ್ದು ಕಂಪ್ಯೂಟರ್ ಸೈನ್ಸ್. ಇಷ್ಟಪಟ್ಟಿದ್ದು ಕಥಕ್ ಡ್ಯಾನ್ಸ್. ಹಾಗಾಗಿ ಐಟಿ ಕ್ಷೇತ್ರದ ಕೆಲಸವನ್ನು ಅರ್ಧಕ್ಕೇ ಬಿಟ್ಟು ಕಥಕ್‌ನಲ್ಲೇ ತೊಡಗಿಸಿಕೊಂಡರು.

ಮುರಾರಿ ಶರಣ್ ಗುಪ್ತಾ ಬಳಿ ಆರಂಭಿಕ ಹಂತದಲ್ಲಿ ಕಲಿತು ಮುಂದೆ ಮಹಾನ್ ನಾಟ್ಯಗುರು ಬಿರ್ಜು ಮಹಾರಾಜ್ ಅವರ ಶಿಷ್ಯೆಯಾದರು. ಅವರ ಜೊತೆಗೆ ನೃತ್ಯ ಪ್ರದರ್ಶನ ನೀಡುತ್ತಲೇ, ಬೆಂಗಳೂರಿನಲ್ಲಿ ಕೃಷಾಲ ಕಥಕ್ ಡ್ಯಾನ್ಸ್ ಸ್ಕೂಲ್‌ಅನ್ನೂ ಆರಂಭಿಸಿದರು. ಅಲ್ಲೀಗ ಹಲವು ಮಂದಿ ನೃತ್ಯಾಸಕ್ತರು ಇವರ ಮಾರ್ಗದರ್ಶನದಲ್ಲಿ ಕಥಕ್ ಕಲಿಯುತ್ತಿದ್ದಾರೆ. ಆ ಹೊತ್ತಿಗೇ ಸೆಳೆದದ್ದು ಮಿಸೆಸ್ ಯೂನಿವರ್ಸ್ ಸ್ಪರ್ಧೆ. ಮನಸ್ಸಿಗೆ ಹತ್ತಿರವಾದದ್ದನ್ನು ಮಾಡಿಯೇ ತೀರುವ ಈಕೆ ಆ ಮಟ್ಟಕ್ಕೇರುವ ಕನಸು ಕಂಡರು. ಅಷ್ಟೇ ಅಲ್ಲ. ಅಪರಿಚಿತವಾಗಿದ್ದ ಆ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.

ದೇಶಮಟ್ಟದ ಮಿಸೆಸ್  ಇಂಡಿಯಾ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಅದರಲ್ಲಿ ವಿಜೇತರಾಗಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದಾಗ ಸ್ವರ್ಗಕ್ಕೆ ಮೂರೇ ಗೇಣು. ಮುಂದೆ ಪೋರ್ಚುಗಲ್‌ನಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆ. ಬ್ಯೂಟಿ ಕಾಂಟೆಸ್ಟ್‌ನಲ್ಲಿ ಚೆಲುವನ್ನಷ್ಟೇ ನೋಡುತ್ತಾರೆ, ಬ್ಯೂಟಿಯೇ ಮಾನದಂಡವಾಗುತ್ತೆ ಅಂದುಕೊಂಡು ಅದಕ್ಕೇ ರೆಡಿಯಾಗಿ ಹೋದವರಿಗೆ ಸಣ್ಣ ಶಾಕ್. ಏಕೆಂದರೆ ಅಲ್ಲಿ ಕೇವಲ ಬ್ಯೂಟಿಗೆ ಮಾತ್ರ ಬೆಲೆ ಇರಲಿಲ್ಲ.

ಬ್ಯೂಟಿಗಿಂತ ನಡವಳಿಕೆಗೆ ಹೆಚ್ಚಿನ ಮಹತ್ವ ಇತ್ತು. ಸಣ್ಣ ಪುಟ್ಟ ಊಟ, ತಿಂಡಿಯ ವಿಷಯಗಳಿಂದ ಹಿಡಿದು ನಡವಳಿಕೆಯವರೆಗೂ ಜಡ್ಜ್‌ಗಳಿಂದ ಸಹನೆ ಪರೀಕ್ಷಿಸುವಂಥಾ ಮಾತುಗಳು, ಕಮೆಂಟ್‌ಗಳು. ಕೆಲವು ಸ್ಪರ್ಧಿಗಳು ಅತ್ತು, ಬೇಸತ್ತು ಸ್ಪರ್ಧೆಯಿಂದ ಹೊರನಡೆದರು. ಗಟ್ಟಿಗಿತ್ತಿಯರು ಮಾತ್ರ ಉಳಿದುಕೊಂಡರು. ಅವರಲ್ಲಿ ಸಿಮ್ರನ್ ಸಹ ಒಬ್ಬರು. ಸ್ವಿಮ್ ಸೂಟ್‌ನಿಂದ, ಶಾಸ್ತ್ರೀಯ ಉಡುಗೆಯವರೆಗಿನ
ರ‌್ಯಾಂಪ್ ವಾಕ್‌ಗಳು, ಬುದ್ಧಿಮತ್ತೆ ಪರೀಕ್ಷಿಸುವ ಪ್ರಶ್ನೆಗಳಿದ್ದವು. ಎಲ್ಲವೂ ಕೇವಲ ಚೆಲುವಿಗಷ್ಟೇ ಫೋಕಸ್ ಆಗಿರಲಿಲ್ಲ.

ಮಾನಸಿಕ ಗಟ್ಟಿತನವನ್ನು ಪ್ರತೀ ಹಂತದಲ್ಲೂ ಪರೀಕ್ಷಿಸುತ್ತಿದ್ದರು. ಏಕೆಂದರೆ ಅಲ್ಲಿದ್ದ ಸ್ಪರ್ಧಿಗಳು ಮಿಸ್. ಯುನಿವರ್ಸ್‌ನಂತೆ ಎಳೆಯ ಹುಡುಗಿಯರಲ್ಲ. ಸಂಸಾರದ ಜವಾಬ್ದಾರಿ ಹೊತ್ತ ಮಹಿಳೆಯರು. ಹಾಗಾಗಿ ಅವರು ಎಷ್ಟರಮಟ್ಟಿಗೆ ಸಂವೇದನಾಶೀಲರು, ಸಹನಾಮೂರ್ತಿಗಳು ಎಂಬುದೂ ತೀರ್ಮಾನವಾಗಬೇಕಿತ್ತು. ಈ ಸ್ಪರ್ಧೆಗಳಲ್ಲಿ ಕೊನೆಯ ಹಂತದವರೆಗೂ ಹೋಗಿ ‘ಲೇಡಿ ಸ್ಟಾರ್ ಯೂನಿವರ್ಸ್’ ಕಿರೀಟ ಮುಡಿಗೇರಿಸಿಕೊಂಡದ್ದು ಸಿಮ್ರನ್ ಹೆಚ್ಚುಗಾರಿಕೆ.

-ಪ್ರಿಯಾ ಕೇರ್ವಾಶೆ