ಬೆಂಗಳೂರು : ಇತ್ತೀಚೆಗೆ ಮಹಾರಾಷ್ಟ್ರದ ಕಾಸ್‌ಮಾಸ್ ಬ್ಯಾಂಕ್ ಮೇಲಿನ ಅಂತಾರಾಷ್ಟ್ರೀಯ ಸೈಬರ್ ವಂಚಕರ ಜಾಲದ ದಾಳಿ ಉದ್ಯಾನ ನಗರದ ಮೇಲೂ ಪರಿಣಾಮ ಬೀರಿದ್ದು, ನಗರದ ವಿವಿಧ ಬ್ಯಾಂಕ್‌ಗಳ 15ಎಟಿಎಂ ಘಟಕಗಳಲ್ಲಿ ಕೋಟ್ಯಂತರ ಹಣವು ಕೆಲವೇ ತಾಸಿನಲ್ಲಿ ಖದೀಮರ ಜೇಬು ಸೇರಿರುವ ಆತಂಕಕಾರಿ ಮಾಹಿತಿ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 

ಒಂಭತ್ತು ತಿಂಗಳ ಅವಧಿಯಲ್ಲಿ ದೇಶದ ಬ್ಯಾಂಕಿಂಗ್ ವ್ಯವಸ್ಥೆಯೇ ಗಾಬರಿ ಹುಟ್ಟಿಸುವಂತೆ ಅಂತಾರಾಷ್ಟ್ರೀಯ ಸೈಬರ್ ದಂಧೆಕೋರರ ಎರಡನೇ ದಾಳಿ ಇದಾಗಿದೆ. ಈ ದಾಳಿಗೆ ತುತ್ತಾದ ಚೆನ್ನೈನ ಯೂನಿಯನ್ ಹಾಗೂ ಪುಣೆಯ ಕಾಸ್‌ಮಾಸ್ ಬ್ಯಾಂಕ್‌ಗಳು ಸುಮಾರು 127 ಕೋಟಿ ಕಳೆದುಕೊಂಡಿವೆ. 

ಅದರಂತೆ ಆ. 11 ರಂದು ಕಾಸ್‌ಮಾಸ್‌ನ  ಬ್ಯಾಂಕ್‌ನ ಗ್ರಾಹಕರ ನಕಲಿ ಎಟಿಎಂ ಕಾಡ್ ಗರ್ಳನ್ನು ಬಳಸಿ ಆರೋಪಿಗಳು, ಬೆಂಗಳೂರಿ ನಲ್ಲಿ ಸಹ ಅದೇ ದಿನ ಕೋಟ್ಯಂತರ ಮೊತ್ತವನ್ನು ಡ್ರಾ ಮಾಡಿದ್ದಾರೆ ಎಂದು ಸಿಐಡಿ ಸೈಬರ್ ಕ್ರೈಂ ಅಧಿಕಾರಿಗಳು ತಿಳಿಸಿದ್ದಾರೆ. ನಗರದಲ್ಲಿ ಎಷ್ಟು ಹಣ ಡ್ರಾ ಮಾಡಲಾಗಿದೆ ಎಂಬ ಕುರಿತು ಆ ಬ್ಯಾಂಕ್‌ನಿಂದ ಮಾಹಿತಿ ಕೋರಿದ್ದೇವೆ. ಈಗಾಗಲೇ ಈ ವಂಚನೆ ಸಂಬಂಧ ಪರ್ಯಾ ಯವಾಗಿ ನಾವು ಸಹ ತನಿಖೆ ನಡೆಸುತ್ತಿದ್ದು, ಆರೋಪಿಗಳು ಹಣ ಡ್ರಾ ಮಾಡಿರುವ ಎಟಿಎಂಗಳ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ೨೦೧೭ರ ಡಿಸೆಂಬರ್ ನಲ್ಲಿ ಚೆನ್ನೈನ ಸಿಟಿ ಯೂನಿಯನ್ ಬ್ಯಾಂಕ್ (ಸಿಯುಬಿ)ನ ಗ್ರಾಹಕರ ಖಾತೆಗೆ ಕನ್ನ ಹಾಕಿದ ಸೈಬರ್ ಕಳ್ಳರು, ಆ ಗ್ರಾಹಕರ ಕಾರ್ಡ್ ಬಳಸಿ ಬೆಂಗಳೂರಿನ ೧೦ ಕಡೆ ಹಣ ಡ್ರಾ ಮಾಡಿದ್ದರು. 

ಅದೇ ರೀತಿ ಪುಣೆಯ ಕಾಸ್‌ಮಾಸ್ ಬ್ಯಾಂಕ್‌ಗೆ 90 ಕೋಟಿ ಕನ್ನ ಹಾಕಿದ ದುಷ್ಕರ್ಮಿಗಳು, ನಗರದ 15 ಎಟಿಎಂಗಳಲ್ಲಿ ಹಣ ಪಡೆದಿದ್ದಾರೆ. ಈ ಎರಡು ಕೃತ್ಯಗಳಲ್ಲಿ ಸಾಮ್ಯತೆ ಇದ್ದು, ಒಂದೇ ಜಾಲವು ವಂಚನೆ ಕೃತ್ಯವನ್ನು ಎಸಗಿರುವ ಸಾಧ್ಯತೆಗಳಿವೆ ಎಂದು ಸೈಬರ್ ಕ್ರೈಂ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಪರ‌್ಯಾಯ ಸರ್ವರ್ ಸೃಷ್ಟಿ: ಆಗಸ್ಟ್ 11 ರಂದು ಕೊಸ್‌ಮಾಸ್‌ನ ಬ್ಯಾಂಕ್‌ನ ಮಾಸ್ಟರ್ ಸರ್ವರ್ ಗೆ ಪರ್ಯಾಯವಾಗಿ ವರ್ಚ್ಯುಲ್ ಸರ್ವರ್ ಸೃಷ್ಟಿಸಿದ ಸೈಬರ್ ಕ್ರೈಂ ವಂಚರ ಜಾಲವು, ಒಂದೇ ದಿನ ಆ ಬ್ಯಾಂಕ್‌ಗೆ 90 ಕೋಟಿ ಕನ್ನ  ಹಾಕಿತ್ತು. ಈ ಬ್ಯಾಂಕ್ ಗ್ರಾಹಕರ ಎಟಿಎಂ ಕಾರ್ಡ್ ಬಳಸಿ ಬೆಂಗಳೂರು ಮಾತ್ರವಲ್ಲದೆ ವಿವಿಧ ದೇಶಗಳಲ್ಲಿ ಹಣ ಪಡೆಯಲಾಗಿದೆ. ಇದೇ ರೀತಿ ಕೃತ್ಯವು 2017 ರ ಡಿಸೆಂಬರ್ 30 ರಂದು ತಮಿಳುನಾಡಿನ ಚೆನ್ನೈ ನಗರದ ಸಿಟಿ ಯೂನಿಯನ್ ಬ್ಯಾಂಕ್ ಪ್ರಧಾನ ಕಚೇರಿಯ ಸರ್ವರ್‌ಗೆ ಹ್ಯಾಕ್ ಮಾಡಿ 37 ಕೋಟಿ ಲಪಟಾಯಿಸಿದ್ದರು. 

ವೈರಸ್ ಬಿಟ್ಟು ಮಾಹಿತಿ ಕದ್ದ ಕಳ್ಳರು: ಮೊದಲು ಬ್ಯಾಂಕ್ ಪ್ರಧಾನ ಕಚೇರಿ ಹಾಗೂ ಆ ಬ್ಯಾಂಕ್‌ನ ಎಟಿಎಂ ಘಟಕಗಳ ನಡುವೆ ಮಾಸ್ಟರ್ ಸರ್ವರ್‌ಗೆ ಸಂಪರ್ಕಿಸುವ ಕೊಂಡಿಗೆ ವೈರಸ್ ಬಿಡುವ ಖದೀಮರು, ಆ ವೈರಸ್‌ನಿಂದ ಹಣ ವಹಿವಾಟು ಹಾಗೂ ಗ್ರಾಹಕರ ಖಾತೆಗಳ ವಿವರವನ್ನು ಕದಿಯುತ್ತಾರೆ. ಎರಡನೇ ಹಂತದಲ್ಲಿ ಮಾಸ್ಟರ್ ಸರ್ವರ್‌ಗೆ ಪರ್ಯಾ ಯವಾಗಿ ವರ್ಚ್ಯುಲ್ ಸರ್ವರ್ ಸೃಷ್ಟಿಸುತ್ತಾರೆ. ಇದರಿಂದ ಎಟಿಎಂಗಳಲ್ಲಿ ಹಣ ಪಡೆದರೆ ಆ ಮಾಹಿತಿಯು ವರ್ಚ್ಯುಲ್ ಸರ್ವರ್‌ಗೆ ರವಾನೆಯಾಗುತ್ತದೆ. ತಕ್ಷಣವೇ ಹಣದ ವಹಿವಾಟಿನ ಮಾಹಿತಿಯು ಬ್ಯಾಂಕ್‌ಗಳಿಗೆ ಗೊತ್ತಾಗುವುದಿಲ್ಲ. ಗ್ರಾಹಕರ ಖಾತೆಗೆ ಕನ್ನ ಹಾಕಿರುವ ಸಂಗತಿ ಬ್ಯಾಂಕ್‌ಗಳಿಗೆ ತಿಳಿಯುವ ವೇಳೆಗೆ ಕೋಟ್ಯಂತರ ಮೊತ್ತದ ಹಣವು ಸೈಬರ್ ಕಳ್ಳರ ಜೇಬು ಸೇರಿರುತ್ತದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.

ಎಟಿಎಂ ಕಾರ್ಡ್ ಕ್ಲೋನಿಂಗ್: ಹೀಗೆ ಗ್ರಾಹಕರ ಎಟಿಎಂ ಕಾರ್ಡ್‌ಗಳನ್ನು ‘ಕ್ಲೋನಿಂಗ್’ ಮಾಡುವ ದುಷ್ಕರ್ಮಿಗಳು, ಆ ಮಾಹಿತಿ ಬಳಸಿ ನಕಲಿ ಕಾರ್ಡ್ ಸೃಷ್ಟಿಸಿ ಹಣ ದೋಚಿ ದ್ದರು. ಆ ಕಾರ್ಡ್ ಬಳಸಿ ಒಂದೇ ಸಮಯಕ್ಕೆ ಹಣ ಪಡೆಯುತ್ತಾರೆ. ಈ ಜಾಲವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿದ್ದು, ಅದರ ಸಂಪರ್ಕ ಜಾಲವು ಸ್ಥಳೀಯವಾಗಿ ವ್ಯಾಪ್ತಿಸಿದೆ. ಮೊದಲು ಬಾಂಗ್ಲಾ ದೇಶದ ಬ್ಯಾಂಕ್‌ಗಳ ಮೇಲೆ ದಾಳಿ ನಡೆಸಿದ ದಂಧೆಕೋರರು, ನಂತರ ಭಾರತವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. 


 ಗಿರೀಶ್ ಮಾದೇನಹಳ್ಳಿ