ನವದೆಹಲಿ :  ರಾಣಿಬೆನ್ನೂರಿನಲ್ಲಿ ಎಪಿಎಂಸಿಯ ಮೆಗಾ ಮಾರ್ಕೆಟ್‌ ಯಾರ್ಡ್‌ ಸ್ಥಾಪನೆ ಸೇರಿದಂತೆ ತಮ್ಮ ಇಲಾಖೆಯ ವಿವಿಧ ಯೋಜನೆಗಳಿಗೆ ಸಹಾಯಧನ ಮತ್ತು ಅನುದಾನ ನೀಡಬೇಕು ಎಂದು ಸಹಕಾರ ಮತ್ತು ಎಪಿಎಂಸಿ ಸಚಿವ ಬಂಡೆಪ್ಪ ಕಾಶೆಂಪುರ ಅವರು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಅವರಲ್ಲಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೇಂದ್ರದ ಅನುದಾನಕ್ಕೆ ಸೂಕ್ತ ರೀತಿಯಲ್ಲಿ ಮನವಿ ಮಾಡಿಕೊಳ್ಳುತ್ತಿಲ್ಲ ಎಂದು ಕೇಂದ್ರ ಸಚಿವರು ಅಸಮಾಧಾನ ವ್ಯಕ್ತಪಡಿಸಿದ ವಿದ್ಯಮಾನವು ನಡೆದಿದೆ.

ಕಾಶೆಂಪುರ್‌ ಅವರು ಶುಕ್ರವಾರದಂದು ರಾಧಾಮೋಹನ್‌ ಸಿಂಗ್‌ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರು, ನಮ್ಮಲ್ಲಿ ವಿವಿಧ ಯೋಜನೆಗಳಿವೆಯಾದರೂ ಕರ್ನಾಟಕದ ಕಡೆಯಿಂದ ಸೂಕ್ತ ಪ್ರಸ್ತಾವನೆಗಳೇ ಬರುತ್ತಿಲ್ಲ. ನಾವು ನೆರವು ನೀಡಲು ಸಿದ್ಧರಿದ್ದೇವೆ, ಆದರೆ ನೀವು ಬಳಸಿಕೊಳ್ಳಲು ಸಿದ್ಧರಿಲ್ಲ. ಉದಾಹರಣೆಗೆ ತೆಲಂಗಾಣ ಸರ್ಕಾರ ಕುರಿ, ಮೇಕೆ, ಮೀನು ಸಾಕಾಣಿಕೆ ಯೋಜನೆಗಳಲ್ಲಿ .10,000 ಕೋಟಿಗಳಿಗೂ ಹೆಚ್ಚು ನೆರವು ಪಡೆದುಕೊಂಡಿದೆ. ನಿಮಗಿಂತ ಮುಂಚೆ ಸಹಕಾರ ಸಚಿವರಾಗಿದ್ದವರು ಯಾರು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಸಭೆಯಲ್ಲಿದ್ದ ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಕಾಶೆಂಪುರ ಸೇರಿದಂತೆ ರಾಜ್ಯದ ಅಧಿಕಾರಿಗಳು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವುದಾಗಿ ಕೇಂದ್ರ ಸಚಿವರಿಗೆ ಭರವಸೆ ನೀಡಿದ್ದಾರೆ.

ನೆರವಿನ ಭರವಸೆ:  ರಾಣಿಬೆನ್ನೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 4ಕ್ಕೆ ತಾಕಿಕೊಂಡೇ 220.24 ಎಕರೆ ಜಾಗವಿದ್ದು ಅಲ್ಲಿ ಅತ್ಯಾಧುನಿಕ ಮಾರುಕಟ್ಟೆಸ್ಥಾಪನೆಗೆ ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಈ ಯೋಜನೆಯ ವೆಚ್ಚ .200 ಕೋಟಿ ಎಂದು ವಿವರಿಸಿದರು. ಕೊಪ್ಪಳ ಜಿಲ್ಲೆಯ ಸುತ್ತಮುತ್ತ ವ್ಯಾಪಕವಾಗಿ ಭತ್ತ ಬೆಳೆಯಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಕಾರಟಗಿಯಲ್ಲಿ 315 ಎಕರೆ ಪ್ರದೇಶದಲ್ಲಿ .200 ಕೋಟಿ ವೆಚ್ಚದಲ್ಲಿ ಭತ್ತ ಸಂಸ್ಕರಣಾ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದೇವೇಳೆ ರಾಜ್ಯದ 107 ಎಪಿಎಂಸಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ .600 ಕೋಟಿ ವೆಚ್ಚದ ಕ್ರಿಯಾಯೊಜನೆ ಸಿದ್ಧಪಡಿಸಲಾಗಿದೆ. ಈ ಎಲ್ಲಾ ಯೋಜನೆಗಳಿಗೂ ಕೇಂದ್ರ ಸರ್ಕಾರ ನೆರವು ನೀಡಬೇಕು ಎಂಬ ಕಾಶೆಂಪುರ ಮನವಿಗೆ ಸ್ಪಂದಿಸಿರುವ ಕೃಷಿ ಸಚಿವರು ಶೇ.25ರಷ್ಟುಸಹಾಯಧನ ನೀಡುವ ಭರವಸೆ ನೀಡಿದ್ದಾರೆ.

ಭೇಟಿಯ ವೇಳೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ರಾಧಾಮೋಹನ್‌ ಸಿಂಗ್‌, ರಾಜ್ಯ ಸರ್ಕಾರ ಸಲ್ಲಿಸಿರುವ ಎಲ್ಲಾ ಯೋಜನೆಗಳಿಗೂ ಸ್ಪಂದಿಸುವ ಭರವಸೆ ನೀಡಿದ್ದಾರೆ.

ಭೇಟಿ ಫಲಪ್ರದ: ಭೇಟಿಯ ಬಳಿಕ ‘ಕನ್ನಡ ಪ್ರಭ’ದೊಂದಿಗೆ ಮಾತನಾಡಿದ ಸಚಿವ ಕಾಶೆಂಪುರ, ಭೇಟಿ ಫಲಪ್ರದವಾಗಿತ್ತು. ಸುಮಾರು 2 ಗಂಟೆಗಳ ಕಾಲ ನಮ್ಮ ಜೊತೆ ಮಾತನಾಡಿದರು. ನನ್ನ ಇಲಾಖೆ ಕೇಂದ್ರ ಕೃಷಿ ಸಚಿವಾಲಯದ ಜೊತೆ ಸಂಪರ್ಕವನ್ನು ಹೊಂದಿರಲಿಲ್ಲ. ಹಾಗಾಗಿ ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸುತ್ತಿರುವುದು ಇದೇ ಮೊದಲಿರಬೇಕು. ಸಹಕಾರ ಇಲಾಖೆಯು ಕೇಂದ್ರದ ಅನುದಾನಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಲಿದೆ. ಕೇಂದ್ರದ ಯೋಜನೆಗಳಿಗೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ, ಅವುಗಳನ್ನು ಫಾಲೋ ಅಪ್‌ ಮಾಡಿ ಯೋಜನೆ ಜಾರಿಗೆ ತರಲು ಶ್ರಮಿಸುವುದಾಗಿ ಹೇಳಿದರು.

ಕೃಷಿ ಮಾರಾಟ ಬೆಂಬಲ ಯೋಜನೆಯಡಿ ಶೂನ್ಯ ಬಡ್ಡಿ ದರದಲ್ಲಿ ರಾಜ್ಯಕ್ಕೆ .5000 ಕೋಟಿಗಳನ್ನು ನಬಾರ್ಡ್‌ ನೆರವು ನೀಡಬೇಕು, ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿ ಉಗ್ರಾಣ ನಿರ್ಮಾಣಕ್ಕೆ ಕಡಿಮೆ ಬಡ್ಡಿದರದಲ್ಲಿ ಆರ್ಥಿಕ ಸಹಾಯ ಒದಗಿಸಬೇಕು. ರಾಜ್ಯದ ರೈತರಿಗೆ ನಫೇಡ್‌ ವತಿಯಿಂದ .165 ಕೋಟಿ ಬಾಕಿ ಹಣ ಪಾವತಿಯಾಗಬೇಕಾಗಿದ್ದು ತಕ್ಷಣವೇ ಪಾವತಿಸಬೇಕು ಎಂದು ಕಾಶೇಂಪುರ ಕೇಂದ್ರ ಕೃಷಿ ಸಚಿರನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದ ಸಹಕಾರ ಇಲಾಖೆ, ಎಪಿಎಂಸಿ, ರಾಜ್ಯ ಉಗ್ರಾಣ ನಿಗಮ ಮತ್ತು ಅಪೆಕ್ಸ್‌ ಬ್ಯಾಂಕ್‌ ಕ್ಷೇತ್ರದ ವಿವಿಧ ಯೋಜನೆಗಳಿಗಾಗಿ ಒಟ್ಟು 4 ಸಾವಿರ ಕೋಟಿ ರುಪಾಯಿಗಳ ಸಹಾಯಧನ ಮತ್ತು ಅನುದಾನಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.