ಎಲ್ಲಿ ನೋಡಿದರೂ ಕೆಜಿಎಫ್‌ದ್ದೇ ಹವಾ. ಅದೂ ಯಶ್ ಬಂದ ಮೇಲೆ ಕೇಳಬೇಕಾ? ಅವರದ್ದು ಬಿಟ್ಟು ಬೇರೆ ಯಾರ ಹವಾ ಇರುತ್ತೆ ಹೇಳಿ? ದಕ್ಷಿಣ ಭಾರತೀಯ ಚಿತ್ರೋದ್ಯಮವಲ್ಲದೇ, ಬಾಲಿವುಡ್‌ನಿಂದಲೂ ಯಶ್‌ಗೆ ಪ್ರಶಂಸೆಗಳ ಸುರಿ ಮಳೆಯೇ ಹರಿದು ಬರುತ್ತಿದೆ. ಫರಾ ಅಖ್ತರ್‌ಗೆ ಯಶ್ ಥರ ಗಡ್ಡ ಬಿಡಬೇಕೆಂದು ಆಸೆಯಾಗಿದೆಯಂತೆ. ಪ್ರತಿಭಾನ್ವಿತ ನಿರ್ದೇಶಕ ರಾಜಮೌಳಿ ಕಣ್ಣೂ ಯಶ್ ಮೇಲೆ ಬಿದ್ದಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದ ಸಿನಿ ರಂಗದಲ್ಲಿಯೇ ಹೆಸರು ಮಾಡಿದ ಸಿನಿಮಾ 'ಬಾಹುಬಲಿ'. ಈ ಚಿತ್ರದ ಕೆಲ ದಾಖಲೆಯನ್ನೂ ಈಗಾಗಲೇ ಯಶ್‌ನ ಕೆಜಿಎಫ್‌ ಉಡೀಸ್ ಮಾಡಿದೆ. ನೋಡು ನೋಡುತ್ತಿದ್ದಂತೆ ಯೂಟ್ಯೂಬ್‌ನಲ್ಲಿ ಈ ಚಿತ್ರದ ಟ್ರೈಲರ್ ಹಾಗೂ ಹಾಡನ್ನು ಲಕ್ಷಗಟ್ಟಲೆ ಮಂದಿ ವೀಕ್ಷಿಸಿದ್ದೇ ಒಂದು ದಾಖಲೆ.

ಹಲವು ದಾಖಲೆಗಳನ್ನು ಸೃಷ್ಟಿಸಿರುವ ಬಾಹುಬಲಿ ಚಿತ್ರದ ಹೀರೋ ಪ್ರಭಾಸ್ ಸಹ ಯಶ್ ಅವರನ್ನು ಭೇಟಿಯಾಗಿ, ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಒಂದೇ ಒಂದು ಚಿತ್ರದ ಮೂಲಕ ಪ್ರಭಾಸ್ ಇಡೀ ಭಾರತದ ಚಿತ್ರ ರಸಿಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಈ ಚಿತ್ರ ಅವರಿಗೆ ತಂದಕೊಟ್ಟ ಕೀರ್ತಿ ಅಷ್ಟಿಷ್ಟಲ್ಲ. ಇದೀಗ ಅದೇ ದಾರಿಯಲ್ಲಿ ಯಶ್ ಸಹ ಸಾಗುತ್ತಿದ್ದು, ಕೆಜಿಎಫ್ ಈ ಸ್ಯಾಂಡಲ್‌ವುಡ್‌ ನಟನಿಗೆ ಪ್ರಭಾಸ್‌ರಂತೆ ಕೀರ್ತಿ ತಂದು ಕೊಡುವ ನಿರೀಕ್ಷೆ ಇದೆ.

 

ಚಿತ್ರದ ಪ್ರಮೋಷನ್‌ಗೆ ಮುಂಬೈಗೆ ತೆರಳಿದ್ದ ಯಶ್‌ರನ್ನು ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಭೇಟಿಯಾಗಿದ್ದಾರೆ. ಜತೆಯಲ್ಲಿಯೇ ಊಟ ಮಾಡಿದ ಈ ನಟರು, ಕೆಲವು ಸಮಯವನ್ನು ಒಟ್ಟಿಗೇ ಕಳೆದಿದ್ದಾರೆ. ಕೆಜಿಎಫ್ ಯಶಸ್ಸಿಗೆ ವಿಶ್ ಮಾಡಿರುವ ಫೋಟೋವನ್ನು ಪ್ರಭಾಸ್ ತಮ್ಮ ಟ್ವೀಟರ್ ಪೇಜಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಹೈದರಾಬಾದ್‌ನಲ್ಲಿ ರಿಲೀಸ್‌ಗೂ ಮುನ್ನ ನಡೆಯುವ ಕಾರ್ಯಕ್ರಮಕ್ಕೆ ಯಶ್, ಪ್ರಭಾಸ್ ಅವರನ್ನು ಆಹ್ವಾನಿಸಿದ್ದಾರೆ. ಕಾರ್ಯಕ್ರಮದ ಮೆರಗು ಹೆಚ್ಚಿಸಲು ನಿರ್ದೇಶಕ ರಾಜಮೌಳಿ ಅವರನ್ನೂ ಆಹ್ವಾನಿಸಿರುವುದು ಮತ್ತೊಂದು ವಿಶೇಷ.

ಏನೇ ಆಗಲಿ, ಸ್ಯಾಂಡಲ್‌ವುಡ್ ನಟ, ಅದೂ ಅಪ್ಪಟ ಕನ್ನಡಿಗನ್ನೊಬ್ಬ ಹೀಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ರ್ನಾಟಕಕ್ಕೊಂದು ಹೆಮ್ಮೆ ಅಲ್ಲವೇ?

"