Asianet Suvarna News Asianet Suvarna News

ವೈದೇಹಿ ಕಥೆಗಳನ್ನಾಧರಿಸಿದ ಸಿನಿಮಾ ತೆರೆಗೆ

ಲೇಖಕಿ  ವೈದೇಹಿ ಕಥೆಗಳನ್ನಾಧರಿಸಿದ ಸಿನಿಮಾ ತೆರೆ ಮೇಲೆ | ಚಂಪಾ ಶೆಟ್ಟಿ ನಿರ್ದೇಶನದಲ್ಲಿ ಬರಲಿದೆ ’ಅಮ್ಮಚ್ಚಿಯೆಂಬ ನೆನಪು’ ಚಿತ್ರ | ಚಂಪಾಶೆಟ್ಟಿಯವರ ಚೊಚ್ಚಲ ನಿರ್ದೇಶನದ ಚಿತ್ರವಿದು | 

Author Vaidehi stories become cinema soon
Author
Bengaluru, First Published Sep 21, 2018, 11:20 AM IST

ಬೆಂಗಳೂರು (ಸೆ. 21): ‘ನನ್ನ ಧ್ವನಿಯಷ್ಟು ಮುಖ ಪರಿಚಿತವಲ್ಲ’ ಅಂದರು ಚಂಪಾ ಶೆಟ್ಟಿ.

ಅದು ವೈದೇಹಿ ಅವರ ಕಥೆಗಳನ್ನಾಧರಿಸಿದ, ಚಂಪಾಶೆಟ್ಟಿ ಚೊಚ್ಚಲ ನಿರ್ದೇಶನದ, ‘ಒಂದು ಮೊಟ್ಟೆಯ ಕಥೆ’ ಖ್ಯಾತಿಯ ರಾಜ್ ಬಿ ಶೆಟ್ಟಿ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾದ ಪತ್ರಿಕಾಗೋಷ್ಠಿ. ರಂಗಭೂಮಿಯ ದೊಡ್ಡ ಗಡಣವೇ ಅಲ್ಲಿ ನೆರೆದಿತ್ತು. ರಾಜ್ ಬಿ. ಶೆಟ್ಟಿ ಅವರನ್ನು ಹೊರತುಪಡಿಸಿದರೆ ಚಿತ್ರದಲ್ಲಿರುವ ನಿರ್ಮಾಪಕ, ನಿರ್ದೇಶಕಿಯೂ ಸೇರಿ ಅಷ್ಟೂ ಜನ ರಂಗಭೂಮಿ ಹಿನ್ನೆಲೆಯಿಂದ ಬಂದವರು.

ಇದಕ್ಕೊಂದು ಕಾರಣವಿದೆ. ಈ ಸಿನಿಮಾ, ಮೊದಲು ಚಂಪಾಶೆಟ್ಟಿ ನಿರ್ದೇಶನದಲ್ಲಿ ‘ಅಕ್ಕು’ ಎಂಬ ನಾಟಕವಾಗಿತ್ತು. ರಾಷ್ಟ್ರಾದ್ಯಂತ ಯಶಸ್ವಿ 49 ಪ್ರದರ್ಶನಗಳನ್ನು ಕಂಡಿತ್ತು. ಆ ನಾಟಕದ ಕಲಾವಿದರೇ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ನಿರ್ದೇಶಕಿ ಚಂಪಾ ಅವರ ಮುಖದಲ್ಲಿ ಖುಷಿಯ ನಡುವೆ ಸಣ್ಣ ಸಂಕೋಚ, ಕೊಂಚ ಆತಂಕದ ಛಾಯೆ.

ಕಳೆದ 20 ವರ್ಷಗಳಿಂದ ಡಬ್ಬಿಂಗ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡ ಚಂಪಾ ಅವರು, ಸುಮಲತಾ, ವಿಜಯಲಕ್ಷ್ಮಿ, ರಮ್ಯಾ ಸೇರಿದಂತೆ ಕನ್ನಡದ ಹೆಸರಾಂತ ನಾಯಕಿಯರಿಗೆ ಕಂಠದಾನ ಮಾಡಿದವರು. ಪ್ರತಿಸಲ ನಾಯಕಿಗೆ ಕಂಠದಾನ ಮಾಡುವಾಗಲೂ ತಾನು ನಿರ್ದೇಶಕಿಯಾಗಿದ್ದರೆ ಈ ಪಾತ್ರ  ಹೇಗಿರುತ್ತಿತ್ತು ಅಂತ ಚಿಂತಿಸಿ, ಅರೆಗಳಿಗೆ ತಾನೇ ನಿರ್ದೇಶಕಿಯ ಸ್ಥಾನದಲ್ಲಿ ನಿಂತು ಬಿಡುತ್ತಿದ್ದರು.

ಅಂದಿನಿಂದಲೇ ಇವರಿಗೆ ತಾನು ನಿರ್ದೇಶಕಿಯಾಗುವ ಕನಸು. ಇಷ್ಟು ಬೇಗ ಆ ಕನಸು ನನಸಾಗಿದ್ದು, ತನ್ನಿಷ್ಟದ ವಿಷಯದಲ್ಲೇ ಸಂಪೂರ್ಣ ಸ್ವಾತಂತ್ರ್ಯತೆಗೆದುಕೊಂಡು ಚಿತ್ರ ನಿರ್ದೇಶಿಸಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾದ ಪ್ರಿವ್ಯೆ ನೋಡದವರು ಚಿತ್ರ ಅದ್ಭುತವಾಗಿ ಬಂದಿದೆ ಅನ್ನುವುದು ಅವರ ಖುಷಿಗೆ ಕಾರಣ.

ಮೊದಲ ಚಿತ್ರವಾದ ಕಾರಣ ಸಂಕೋಚ, ಚಿತ್ರವನ್ನು ಪ್ರೇಕ್ಷಕ ಹೇಗೆ ಸ್ವೀಕರಿಸಬಹುದು ಎಂಬ ಆತಂಕ. ‘ಇದು 70-80 ರ ದಶಕದ ಕತೆ. ಕುಂದಾಪುರ ಸೀಮೆಯ ಸಂಪ್ರದಾಯಸ್ಥ ಕುಟುಂಬದ ಕೆಳ ಮಧ್ಯಮ ವರ್ಗದಲ್ಲಿ ಹೆಣ್ಣಿನ ಮೇಲೆ ನಡೆಯುವ ಶೋಷಣೆಯ ಕಥೆ. ಇದನ್ನು ಬಹಳ ಸೂಕ್ಷ್ಮವಾಗಿ ಕಲಾತ್ಮಕವಾಗಿ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದೇವೆ. ಸ್ತ್ರೀ ಮೇಲಿನ ಶೋಷಣೆಯ ರೂಪಗಳಷ್ಟೇ ಬದಲಾಗುತ್ತವೆ, ಶೋಷಣೆ ಹಾಗೇ ಇರುತ್ತೆ ಅಂತಾರೆ ವೈದೇಹಿ. ಹಾಗಾಗಿ ಅಂದಿನ ಶೋಷಣೆ ಭಿನ್ನ ರೂಪದಲ್ಲಿ ಇಂದೂ ನಡೆಯುವ ಕಾರಣ ಇದು ಇವತ್ತಿಗೆ ಪ್ರಸ್ತುತ ಅಂದುಕೊಂಡಿದ್ದೇನೆ’ ಎಂದು ಸಿನಿಮಾ ಬಗ್ಗೆ ಚಂಪಾಶೆಟ್ಟಿ ವಿವರಿಸಿದರು.

ಇಡೀ ಪತ್ರಿಕಾಗೋಷ್ಠಿಯಲ್ಲಿ ಲವಲವಿಕೆಯಿಂದ ಭಾಗವಹಿಸಿದವರು ರಾಜ್ ಬಿ ಶೆಟ್ಟಿ. ‘ಒಂದು ಮೊಟ್ಟೆಯ ಕಥೆ’ಯ ಮೂಲಕ ನಾಯಕನಾಗಿ ಜನಪ್ರಿಯವಾಗಿರುವ ಅವರಿಗೆ ಇದರಲ್ಲಿ ನೆಗೆಟಿವ್ ಶೇಡ್‌ನ ಕ್ಯಾರೆಕ್ಟರ್. ಬಹಳ ವಿಕ್ಷಿಪ್ತವಾಗಿರುವ, ಈವರೆಗೆ ಅಭಿನಯಿಸಿರುವ ಪಾತ್ರಗಳಿಗಿಂತ ಭಿನ್ನವಾಗಿರುವ ವೆಂಕಪ್ಪಯ್ಯನ ಪಾತ್ರವದು.

‘ಕನ್ನಡದ ಬ್ಯೂಟಿಫುಲ್ ಚಿತ್ರಗಳಲ್ಲಿ ಇದೂ ಒಂದು. ನಾನಿದರಲ್ಲಿ ಅಭಿನಯಿಸಿದ್ದೇನೆ ಎಂಬ ಕಾರಣಕ್ಕೆ ಹೀಗೆ ಹೇಳುತ್ತಿಲ್ಲ. ಚಿತ್ರ ನೋಡಿ ನಿಜಕ್ಕೂ ಹಾಗನಿಸಿತು’ ಎಂದು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು ರಾಜ್.

 ತಮ್ಮ ಪಾತ್ರದ ಬಗ್ಗೆ ವಿಶ್ಲೇಷಿಸುತ್ತಾ, ‘ನೆಗೆಟಿವ್ ಶೇಡ್‌ನ ಪಾತ್ರಗಳನ್ನು ಒಪ್ಪಿಕೊಳ್ಳುವ ಮೊದಲು ನಿರ್ದೇಶಕರಲ್ಲಿ ಒಬ್ಬ ಲಾಯರ್‌ನಂತೆ ಪ್ರಶ್ನೆ ಮಾಡುತ್ತೇನೆ. ಇಲ್ಲೂ ಪಾತ್ರದ ಬಗ್ಗೆ ಚಂಪಾ ಅವರಲ್ಲಿ ಬಹಳ ಚರ್ಚಿಸಿದ್ದೆ. ವೆಂಕಪ್ಪಯ್ಯತನ್ನದೇ ನಂಬಿಕೆಗಳ ಮೂಲಕ ಬದುಕುವ ವ್ಯಕ್ತಿ. ಅದಕ್ಕೆ ಆತನ ಬಳಿ ಸಮರ್ಥನೆಗಳೂ ಇವೆ. ಹೀಗಾಗಿ ಹೊರಜಗತ್ತಿಗೆ ಆತನದು ನೆಗೆಟಿವ್ ಶೇಡ್ ಪಾತ್ರವೇ ಆದರೂ ಆತನಿಗೆ ಆತ ವಿಲನ್ ಅಲ್ಲ’ ಅಂದರು.

ಸಿನಿಮಾದ ನಿರ್ಮಾಪಕರಲ್ಲೊಬ್ಬರಾದ ಪ್ರಕಾಶ್ ಪಿ.ಶೆಟ್ಟಿ ಸಿನಿಮಾ ಚಿತ್ರೀಕರಣದ ಬಗ್ಗೆ ವಿವರಿಸಿದರು. ‘ಉಡುಪಿ ಜಿಲ್ಲೆ ಪಡುಬಿದ್ರೆಯ ಕರ್ನಿರೆ ಗ್ರಾಮದ ಸುತ್ತಮುತ್ತ ಇಡೀ ಕೇವಲ 23 ದಿನಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕುಂದಾಪುರದ ಪ್ರಾದೇಶಿಕ ಸೊಗಡು ಇಡೀ ಚಿತ್ರದಲ್ಲಿದೆ. ಮಫ್ತಿ ಚಿತ್ರದ ಛಾಯಾಗ್ರಾಹಕ ನವೀನ್ ಕುಮಾರ್ ಛಾಯಾಗ್ರಹಣ, ಶಶಿಧರ ಭಾರಿಘಾಟ್, ಕೃಷ್ಣ ರಾಯಚೂರು ಸೇರಿದಂತೆ ನಾಲ್ವರ ಕಲಾ ನಿರ್ದೇಶನವಿದೆ. ಪಂ.ಕಾಶಿನಾಥ್ ಪತ್ತಾರ್ ಅವರ ಸಂಗೀತ ಚಿತ್ರಕ್ಕಿದೆ’ ಎಂದರು.

ಈ ಸಿನಿಮಾ ನವೆಂಬರ್ 1 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸ್ಟಾರ್ ಅಬ್ಬರದ ಚಿತ್ರಗಳಿಂದ, ಸಹಜತೆಯ ಪ್ರಾದೇಶಿಕ ಚಿತ್ರಗಳು ಸದ್ದು ಮಾಡುತ್ತಿರುವ ಹೊತ್ತಲೇ ಅಮ್ಮಚ್ಚಿಯೂ ತೆರೆಗೆ ಬರುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ. 

Follow Us:
Download App:
  • android
  • ios