ಚಿತ್ರ ಪ್ರದರ್ಶನ ಆಗುತ್ತಿದೆ, ಆಗುತ್ತಿಲ್ಲ ಅನ್ನೋ ಗೊಂದಲ ನಿರ್ಮಾಣ ಆಗಿತ್ತು. ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು ಹೌದು. ಆದರೆ ಪುನೀತ್ ಸಿನಿಮಾ ಎಲ್ಲಾ ಕಡೆ ಪ್ರದರ್ಶನವಾಗುತ್ತಿದೆ.ಹೇಗೆ?

ವಕೀಲರ ಸಮುದಾಯಕ್ಕೆ ಅವಮಾನ ಮಾಡಿದ್ದಾರೆಂದು ಅರೋಪಿಸಿ ‘ಅಂಜನಿಪುತ್ರ’ ಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಲಾಗಿತ್ತು. ವಕೀಲರೇ ಚಿತ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ದೂರು ಪರಿಶೀಲನೆ ಮಾಡಿದ ನ್ಯಾಯಾಲಯ ಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ಆದೇಶ ನೀಡಿದೆ ಎಂಬ ಸುದ್ದಿ ಶನಿವಾರ ಸಂಜೆ ಚಾಲ್ತಿಯಲ್ಲಿತ್ತು.

ಚಿತ್ರ ಪ್ರದರ್ಶನ ಆಗುತ್ತಿದೆ, ಆಗುತ್ತಿಲ್ಲ ಅನ್ನೋ ಗೊಂದಲ ನಿರ್ಮಾಣ ಆಗಿತ್ತು. ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು ಹೌದು. ಆದರೆ ಪುನೀತ್ ಸಿನಿಮಾ ಎಲ್ಲಾ ಕಡೆ ಪ್ರದರ್ಶನವಾಗುತ್ತಿದೆ.

ಹೇಗೆ?

ಈ ಚಿತ್ರದ ವಿತರಕ ಜ್ಯಾಕ್ ಮಂಜು ಬಳಿ ಈ ಬಗ್ಗೆ ಕೇಳಿದಾಗ ಗೊತ್ತಾದ ಸಂಗತಿ ಹೀಗಿದೆ:

1) ಕೋರ್ಟ್‌ನಲ್ಲಿ ವಕೀಲರ ತಂಡ ಚಿತ್ರ ಪ್ರದರ್ಶನದ ವಿರುದ್ಧ ತಡೆಯಾಜ್ಞೆ ತಂದಿರುವುದು ನಿಜ. ಆದರೆ, ಕೋರ್ಟ್‌ನ ಈ ಆದೇಶ ಚಿತ್ರತಂಡಕ್ಕೆ ಅಧಿಕೃತವಾಗಿ ಸಿಕ್ಕಿಲ್ಲ. ಕಾನೂನು ಬದ್ಧವಾಗಿ ಅದೇಶದ ಪ್ರತಿ ಚಿತ್ರದ ಸಂಬಂಧಪಟ್ಟವರಿಗೆ ಕೈ ಸೇರದ ಕಾರಣ ಸಿನಿಮಾ ಪ್ರದರ್ಶನ ಮುಂದುವರಿದಿದೆ.

2) ಈ ನಡುವೆ ಚಿತ್ರತಂಡವೇ ಸ್ವಯಂ ಪ್ರೇರಿತವಾಗಿ ಚಿತ್ರದ ಯಾವ ದೃಶ್ಯ ವಿವಾದಕ್ಕೆ ಕಾರಣವಾಗಿದೆಯೋ ಅದನ್ನು ಚಿತ್ರದಿಂದ ತೆಗೆಸುವುದಕ್ಕೆ ಮುಂದಾಗಿದ್ದಾರೆ. ‘ಅಂಜನಿಪುತ್ರ’ ಚಿತ್ರಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶ ಚಿತ್ರತಂಡದ ಕೈಗೆ ಸೇರದಿದ್ದರೂ ತಾವೇ ತಮ್ಮ ಚಿತ್ರದ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿದ್ದಾರೆ.

3) ಚಿತ್ರದಲ್ಲಿ ಲಾಯರ್ ಹಾಗೂ ಪೊಲೀಸ್ ಅಧಿಕಾರಿ ನಡುವೆ ಬರುವ ಸಂಭಾಷಣೆ ಯಿಂದ ವಕೀಲ ವೃತ್ತಿಗೆ ಅವಮಾನ ಆಗಿದ್ದರೆ ಹಾಗೂ ಅದರಿಂದ ವಕೀಲರು ಮುಜುಗರ ಅನುಭವಿಸಿ ನೋವಾಗಿದ್ದರೆ ಚಿತ್ರತಂಡ ಸ್ವಯಂ ಪ್ರೇರಣೆಯಿಂದ ಕ್ಷಮೆ ಕೇಳಿದೆ. ಅಲ್ಲದೆ ಯಾವ ದೃಶ್ಯದ ಬಗ್ಗೆ ವಕೀಲರು ಚಕಾರು ಎತ್ತಿದ್ದಾರೋ ಆ ದೃಶ್ಯದ ಸಂಭಾಷಣೆಯನ್ನು ಮಾನ್ಯುವೆಲ್ ಮ್ಯೂಟ್ ಮಾಡಲಾಗುತ್ತಿದೆ. ಅಂದರೆ ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನ ಮಾಡುವ ಪ್ರೊಜೆಕ್ಟರ್ ನೋಡಿಕೊಳ್ಳುವವರೇ ಆ ದೃಶ್ಯ ಬಂದಾಗ ಡೈಲಾಗ್ ಮ್ಯೂಟ್ ಮಾಡುತ್ತಿ ದ್ದಾರೆ. ಈಗಾಗಲೇ ಶೇ. 60 ಭಾಗ ಚಿತ್ರಮಂದಿರಗಳಲ್ಲಿ ಹೀಗೆ ಮಾನ್ಯುವೆಲ್ ಮ್ಯೂಟ್ ಮಾಡಲಾಗಿದೆ.

4) ಕೆಲವು ಚಿತ್ರಮಂದಿರಗಳಲ್ಲಿ ಇದು ಸಾಧ್ಯವಾಗದ ಕಾರಣ ಸೆನ್ಸಾರ್‌ಗೆ ಕಳುಹಿಸಿದ್ದಾರೆ. ದೃಶ್ಯವನ್ನೇ ಚಿತ್ರದಿಂದಲೇ ತೆಗೆದು ಹಾಕುವುದಕ್ಕೆ ಕ್ರಮ ಕೈಗೊಳ್ಳಲಾಗಿದೆ.

5) ಸದ್ಯ ವಕೀಲರ ಕೆಂಗಣ್ಣಿಗೆ ಗುರಿಯಾಗಿದೆ ಎನ್ನಲಾದ ದೃಶ್ಯ ಅಥವಾ ಡೈಲಾಗ್ ‘ಅಂಜನಿಪುತ್ರ’ ಚಿತ್ರದಲ್ಲಿ ನೋಡಲು ಸಾಧ್ಯವಿಲ್ಲ. ಇದರ ಜತೆಗೆ ಕೋರ್ಟ್ ಅದೇಶದ ಪ್ರತಿ ಕೈಗೆ ಸಿಕ್ಕ ಮೇಲೆ ಕಾನೂನು ಮೂಲಕ ಏನು ಆಗಬೇಕು ಅದನ್ನು ಮಾಡುವುದಕ್ಕೆ ಚಿತ್ರತಂಡ ಸಿದ್ಧವಿದೆ ಎಂಬುದು ಜ್ಯಾಕ್ ಮಂಜು ಹೇಳುವ ಮಾತು.