ಬೆಂಗಳೂರು (ಜ. 03): ಹೊಸ ವರ್ಷ ಎಲ್ಲರಿಗೂ ಹೊಸತನ ನೀಡಿದರೆ ಆ್ಯಮಿ ಜಾಕ್ಸನ್‌ಗೆ ತುಸು ಹೆಚ್ಚಿನ ಹೊಸತನ ನೀಡಿದೆ. ಅದು ತನ್ನ ಬಾಯ್ ಫ್ರೆಂಡ್, ಬ್ರಿಟನ್‌ನ ಆಗರ್ಭ ಶ್ರೀಮಂತ ಜಾರ್ಜ್ ಪನಯೌಟು ಜೊತೆಗೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ.

ಕನ್ನಡದ ‘ದಿ ವಿಲನ್’, ಬಹುಭಾಷೆಯಲ್ಲಿ ತೆರೆ ಕಂಡ ‘2.0’ ಚಿತ್ರದಲ್ಲಿ ನಟಿಸಿ ಸುದ್ದಿಯಲ್ಲಿದ್ದ ಆ್ಯಮಿ ಈಗ ಸಂಸಾರಿಯಾಗಲು ಹೊರಟು ಸುದ್ದಿಯಲ್ಲಿದ್ದಾರೆ. ಆ್ಯಮಿಯ ಬಾವಿ ಪತಿ ಜಾರ್ಜ್ ಪನಯೌಟು ಬ್ರಿಟನ್‌ನ ರಿಯಲ್ ಎಸ್ಟೇಟ್ ಉದ್ಯಮಿ. ಎಬಿಲಿಟಿ ಗ್ರೂಪ್‌ನ ಸಂಸ್ಥಾಪಕರಾದ ಇವರು ಡಬ್ಬಲ್ ಟ್ರೀ, ಪಾರ್ಕ್ ಪ್ಲಾಜಾ, ಹಿಲ್ಟನ್ ಮೊದಲಾದ ಪ್ರತಿಷ್ಟಿತ ಹೋಟೆಲ್‌ಗಳ ಮಾಲೀಕ ಮತ್ತು ಸುಮಾರು 3,600 ಕೋಟಿ ರುಪಾಯಿಗಳ ಆಸ್ತಿಯ ಒಡೆಯ.

ಕೆಲ ಕಾಲದಿಂದ ಒಟ್ಟಿಗೆ ಓಡಾಡಿಕೊಂಡಿದ್ದ ಈ ಜೋಡಿ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಅಲ್ಲಲ್ಲಿ ಓಡಾಡುತ್ತಲೇ ಇತ್ತು. ಈಗ ಆ್ಯಮಿ ಅದೆಲ್ಲಕ್ಕೂ ತನ್ನ ಇನ್ ಸ್ಟಾಗ್ರಾಂನಲ್ಲಿ ಜಾರ್ಜ್ ಜೊತೆಗಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತೆರೆ ಎಳೆದಿದ್ದಾರೆ. ಸದ್ಯ ಜಾಂಬಿಯಾದಲ್ಲಿ ಹೊಸ ವರ್ಷದ ಸಂಭ್ರಮ ಹಾಗೂ ನಿಶ್ಚಿತಾರ್ಥದ ಸಡಗರದಲ್ಲಿ ಈ ಜೋಡಿ ತೇಲಾಡುತ್ತಿದೆ.