ನಟಿ ಅಮೂಲ್ಯ ಈಗ ಏನು ಮಾಡುತ್ತಿದ್ದಾರೆ ಗೊತ್ತಾ..?

First Published 13, Jan 2018, 12:59 PM IST
Amulya New Work
Highlights

ಮದುವೆಯಾದ ಮೇಲೆ ಅಮೂಲ್ಯ ಏನು ಮಾಡುತ್ತಿದ್ದಾರೆ? ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಮದುವೆ ನಂತರ ನಾಟ್ ರೀಚಬಲ್ ಆಗಿದ್ದ ಅಮೂಲ್ಯ ಮಾತಿಗೆ ಸಿಕ್ಕಿದ್ದಾರೆ.

ಬೆಂಗಳೂರು(ಜ.13) : ಮದುವೆಯಾದ ಮೇಲೆ ಅಮೂಲ್ಯ ಏನು ಮಾಡುತ್ತಿದ್ದಾರೆ? ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಮದುವೆ ನಂತರ ನಾಟ್ ರೀಚಬಲ್ ಆಗಿದ್ದ ಅಮೂಲ್ಯ ಮಾತಿಗೆ ಸಿಕ್ಕಿದ್ದಾರೆ.

ಇತ್ತೀಚೆಗೆ ಅವರು ಸೋಷಲ್ ಮೀಡಿಯಾದಲ್ಲಿ ಒಂದು ಸ್ಟೇಟಸ್ ಹಾಕಿದ್ದರು. ಜನವರಿ 12ಕ್ಕೆ ನಿಮಗೊಂದು ಖುಷಿ ಸಮಾಚಾರ ನೀಡುತ್ತೇನೆ ಅನ್ನೋದು ಆ ಸಂದೇಶ. ಅದನ್ನು ನೋಡಿ ಅಮೂಲ್ಯ ಮತ್ತೆ ನಟಿಸುತ್ತಾರಾ ಅನ್ನುವ ಕುತೂಹಲ ಹುಟ್ಟಿಕೊಂಡಿತ್ತು. ಹಾಗಾಗಿ ಈ ಸುದ್ದಿಯ ಬೆನ್ನು ಹತ್ತಿ ಹೋದರೆ ಅಚ್ಚರಿ ಕಾದಿತ್ತು.

ಅವರು ಹೇಳಿದ್ದು ಇಷ್ಟು: 

*ಸಿನಿಮಾ ಮಾಡುವುದು ಖಚಿತ, ಆದ್ರೆ ಸದ್ಯಕ್ಕಂತೂ ಇಲ್ಲ.

*ನನಗೆ ಮನೆಯಲ್ಲಿ ಸುಮ್ಮನೆ ಕೂರುವುದಕ್ಕೆ ಮನಸ್ಸಿಲ್ಲ. ಏನಾದ್ರೂ ಮಾಡ್ಬೇಕು ಅನ್ನೋದು ತಲೆಯಲ್ಲಿತ್ತು. ಹಾಗಾಗಿ ತಕ್ಷಣಕ್ಕೆ ನನಗೆ ಹೊಳೆದಿದ್ದು ಮಹಿಳಾ ಸಬಲೀಕರಣ.

*  ದುಡಿಯುವ ಮಹಿಳೆಯರಿಗೆ ಕ್ರಿಯೇಟಿವ್ ಆಗಿ ಏನಾದ್ರೂ ಮಾಡ್ಬೇಕು, ಆದಷ್ಟು ಸಂಪಾದಿಸಬೇಕು ಅನ್ನೋ ಆಸೆ ಇರುತ್ತೆ. ಆದ್ರೆ ಸರಿಯಾದ ತರಬೇತಿ, ಸಹಾಯ, ಮಾರ್ಕೆಟ್ ಸೌಲಭ್ಯ ಇಲ್ಲದ ಕಾರಣಕ್ಕೆ ಅವರು ಅಸಹಾಯಕರಾಗಿ ಕುಳಿತಿದ್ದಾರೆ. ಅಂತಹವರನ್ನು ಗುರುತಿಸಿ, ಸರಿಯಾದ ತರಬೇತಿ ನೀಡಿದ್ರೆ ಅವರಿಗೂ ಉದ್ಯೋಗ ಸಿಗುತ್ತೆ, ಪ್ರಾಮಾಣಿಕವಾದ ಸಾಮಾಜಿಕ ಕೆಲಸವೂ ಆಗುತ್ತೆ. ಹಾಗಾಗಿ ನಾನು ಮಹಿಳಾ ಸಬಲೀಕರಣ ಮಾಡಬೇಕು ಅಂತ ಆಸೆ ಪಟ್ಟಿದ್ದೇನೆ.

*  ವನಿತಾ ವಿಕಾಸ್ ಸಂಸ್ಥೆಯ ಜೊತೆಗೆ ನಾನು ಒಳ್ಳೆಯ ಕೆಲಸ ಮಾಡಲು ಹೊರಟಿದ್ದೇನೆ. ಒಟ್ಟು 10 ಸಾವಿರ ಜನಕ್ಕೆ ತರಬೇತಿ ನೀಡಬೇಕು ಎನ್ನುವ ಆಲೋಚನೆ ನನ್ನದು. ಅಮೂಲ್ಯ ಸಮಾಜಸೇವೆ ಅಮೂಲ್ಯ ಸದ್ಯ ‘ವನಿತಾ ವಿಕಾಸ್’ ಎನ್ನುವ ಒಂದು ಸಂಸ್ಥೆ ಜತೆ ಕೈ ಜೋಡಿಸಿದ್ದಾರೆ. ಆ ಮೂಲಕ ಒಂದಷ್ಟು ದಿನ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ಟೈಲರಿಂಗ್, ಬುಕ್ ಬೈಂಡಿಂಗ್ ತರಬೇತಿಯಂತಹ ಕಾರ್ಯಕ್ರಮಗಳಿಗೆ ಈಗಾಗಲೇ ಚಾಲನೆ ಸಿಕ್ಕಿದೆ.

ಈ ಕಾರ್ಯಕ್ಕೆ ಪತಿ ಜಗದೀಶ್ ಚಂದ್ರ ಹಾಗೂ ಅವರ ಮಾವ ರಾಮಚಂದ್ರ ಅವರ ಸಂಪೂರ್ಣ ಬೆಂಬಲ ಸಿಕ್ಕಿದೆ. ರಾಜಕೀಯ ಉದ್ದೇಶ ಇದೆಯಾ ಎಂದು ಕೇಳಿದರೆ ಇಲ್ಲ ಎನ್ನುತ್ತಾರೆ. ರಾಜಕೀಯ ಕಾರಣಕ್ಕಾಗಲಿ, ಪ್ರಚಾರಕ್ಕಾಗಲೀ ಇದನ್ನು ಮಾಡುತ್ತಿಲ್ಲ ಎನ್ನುತ್ತಾರೆ. ಸದ್ಯಕ್ಕೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಆಲೋಚನೆಯೇ ಇಲ್ಲ. ಹಾಗಾಗಿ ಅಭಿಮಾನಿಗಳು ಮತ್ತೊಂದಷ್ಟು ವರ್ಷ ಕಾಯಬೇಕಷ್ಟೇ. 

*ಈಗಾಗಲೇ 8 ಬ್ಯಾಚ್‌ನಲ್ಲಿ ಸಾಕಷ್ಟು ಮಹಿಳೆಯರು ತರಬೇತಿ ಪಡೆದಿದ್ದಾರೆ. ಇನ್ನೆರಡು ಬ್ಯಾಚ್ ಬಾಕಿ ಇವೆ.

loader