ವ್ಯಾಲಂಟೈನ್ಸ್ ಡೇ ಗೆ ಅಮೂಲ್ಯ ತಮ್ಮ ಪತಿಯನ್ನು ನೆನೆಸಿಕೊಳ್ಳೋದು ಹೀಗೆ

First Published 14, Feb 2018, 12:05 PM IST
Amulya Jagadesh Valentines Day Wishes
Highlights

ಪ್ರೀತಿಸಿ ಮದುವೆ ಆದವರಲ್ಲ ನಾವು. ಮದುವೆ ಆದ್ಮೇಲೆ ಪ್ರೀತಿಸುತ್ತಿರುವವರು. ಪ್ರೀತಿಸಿ  ಮದುವೆ ಆದವರಿಗೂ, ನಮಗೂ ಇರುವ ವ್ಯತ್ಯಾಸ ಇದು. ಇದ್ರಲ್ಲೂ ಒಂಥರ ಥ್ರಿಲ್ ಇದೆ. ಮದುವೆಯಾದ್ರೂ ನಾವಿಬ್ಬರೂ ಈಗ ಪ್ರೇಮಿಗಳೇ ಅಂತ ಹೇಳಿಕೊಳ್ಳುವುದಕ್ಕೆ ಖುಷಿ ಆಗುತ್ತೆ ಅಂತಾರೆ ಅಮೂಲ್ಯ ಜಗದೀಶ್. 

ಬೆಂಗಳೂರು (ಫೆ.14): ಪ್ರೀತಿಸಿ ಮದುವೆ ಆದವರಲ್ಲ ನಾವು. ಮದುವೆ ಆದ್ಮೇಲೆ ಪ್ರೀತಿಸುತ್ತಿರುವವರು. ಪ್ರೀತಿಸಿ  ಮದುವೆ ಆದವರಿಗೂ, ನಮಗೂ ಇರುವ ವ್ಯತ್ಯಾಸ ಇದು. ಇದ್ರಲ್ಲೂ ಒಂಥರ ಥ್ರಿಲ್ ಇದೆ. ಮದುವೆಯಾದ್ರೂ ನಾವಿಬ್ಬರೂ ಈಗ ಪ್ರೇಮಿಗಳೇ ಅಂತ ಹೇಳಿಕೊಳ್ಳುವುದಕ್ಕೆ ಖುಷಿ ಆಗುತ್ತೆ ಅಂತಾರೆ ಅಮೂಲ್ಯ ಜಗದೀಶ್. 
ಜಗದೀಶ್ ನನಗೆ ಪರಿಚಯವಾಗಿದ್ದು ಎರಡು ವರ್ಷಗಳ ಹಿಂದೆ. ಒಮ್ಮೆ ಒಂದು ಫಂಕ್ಷನ್‌ನಲ್ಲಿ ಅವರನ್ನು ನೋಡಿದ್ದೆ. ಆನಂತರ ಶಿಲ್ಪಾ ಮೇಡಂ ಮನೆಗೆ ಅವರು ಬಂದಿದ್ದರು. ನಾನು ಕೂಡ ಅವತ್ತು ಅಲ್ಲಿಗೆ ಹೋಗಿದ್ದೆ. ಶಿಲ್ಪಾ ಮೇಡಂ ಅವರೇ ಅಲ್ಲಿ ನನಗೆ ಜಗದೀಶ್ ಅವರನ್ನು ಪರಿಚಯಿಸಿಕೊಟ್ಟರು. ಅಲ್ಲಿಂದ ನಾವಿಬ್ಬರು ಫ್ರೆಂಡ್ಸ್ ಆದೆವು. ಸಭೆ, ಸಮಾರಂಭಗಳಲ್ಲಿ ಮುಖಾಮುಖಿ ಆದಾಗ, ಜಸ್ಟ್ ‘ಹಾಯ್..ಬಾಯ್’ ಅನ್ನೋದಷ್ಟೇ ನಮ್ಮಿಬ್ಬರ ನಡುವಿದ್ದ ಒಡನಾಟ. ಪ್ರೀತಿ-ಪ್ರೇಮ ಅಥವಾ ಮದುವೆ ಅಂತೆಲ್ಲ ಯೋಚನೆಯೂ ಇರಲಿಲ್ಲ. ಆ ನಂತರ ಗಣೇಶ್ ಸರ್ ಮತ್ತೆ ಶಿಲ್ಪಾ ಮೇಡಂ ಅವರೇ ಮದುವೆಯ ಪ್ರಸ್ತಾಪ ಮಾಡಿದ್ದು. 

ಒಮ್ಮೆ ಮನೆಗೆ ಕರೆದ್ರು, ಹೋದೆ. ‘ಜಗದೀಶ್ ಒಳ್ಳೆಯ ಹುಡುಗ, ಒಳ್ಳೆಯ ಫ್ಯಾಮಿಲಿ, ಯಾಕೆ ಮದುವೆ ಆಗಬಾರ್ದು’ ಅಂತ ಸಲಹೆ ಕೊಟ್ಟರು. ಒಂದಷ್ಟು ಟೈಮ್ ಕೊಟ್ಟರೆ ಖಂಡಿತಾ ನನ್ನ ಅಭಿಪ್ರಾಯ ಹೇಳ್ತೀನಿ ಅಂದೆ. ಅದಕ್ಕಿಂತ ಮುಖ್ಯವಾಗಿ ಗಣೇಶ್ ಸರ್ ಮತ್ತು ಶಿಲ್ಪಾ ಮೇಡಂ ಮೇಲೆ ನನಗೆ ಅಪಾರವಾದ  ನಂಬಿಕೆ. ಅವರು ಏನೇ ಮಾಡಿದ್ರೂ  ಒಳ್ಳೆಯದ್ದಕ್ಕಾಗಿಯೇ ಮಾಡಿರುತ್ತಾರೆ ಅಂತ ಹೆಚ್ಚು ಚರ್ಚೆ ಮಾಡಲಿಲ್ಲ. ಹೆಚ್ಚು ಕಡಿಮೆ ವಾರ ಕಳೆಯಿತು. ತೆಗೆದುಕೊಂಡ ಟೈಮ್ ಪ್ರಕಾರ ಮನೆಯಲ್ಲಿ ಅಮ್ಮ, ಅಣ್ಣ ಅವರ ಜತೆಗೆ ಚರ್ಚೆ ಮಾಡಿದೆ. ಅವರ ಅಭಿಪ್ರಾಯ ಏನು ಅಂತ ಕೇಳಿದೆ. ಅದನ್ನೇ ಗಣೇಶ್ ಸರ್ ಮತ್ತು ಶಿಲ್ಪಾ ಮೇಡಂಗೆ ಹೇಳಿದೆ. ಅಲ್ಲಿಂದ ಎಂಗೇಜ್‌ಮೆಂಟ್ ಆಯಿತು. ತದನಂತರ ಮದುವೆ ದಿನಾಂಕವೂ ಫಿಕ್ಸ್  ಆಯಿತು. ಇಂಟೆರೆಸ್ಟಿಂಗ್ ಸಂಗತಿ ಅಂದ್ರೆ ಮ್ಯಾರೇಜ್ ನಂತರವೇ ನಾವಿಬ್ಬರು ಪ್ರೇಮಿಗಳಾದೆವು.


ಒಂಥರ ನಾನು ಲಕ್ಕಿ. ನಮ್ಮಿಬ್ಬರ ನಡುವೆ ಒಳ್ಳೆಯ ಅಂಡರ್‌’ಸ್ಟ್ಯಾಂಡಿಗ್ ಇದೆ. ನನ್ನ ನಿರೀಕ್ಷೆಗಳೇನು ಅನ್ನೋದು ಅವರಿಗೆ ಗೊತ್ತಿದೆ. ಅವರ ನಿರೀಕ್ಷೆಗಳೇನು  ಅನ್ನೋದು ನನಗೆ ಗೊತ್ತಿದೆ. ನಿಲುಕದ ಕನಸುಗಳು
ಇಬ್ಬರಲ್ಲೂ ಇಲ್ಲ. ಜಗದೀಶ್ ಮನೆಯಲ್ಲೂ ಕೂಡ ಅಷ್ಟೆ, ಯಾವತ್ತಿಗೂ ನಾನು ಹೊರಗಿನಿಂದ ಬಂದವಳು ಅನ್ನೋ ಫೀಲೀಂಗ್ ಹುಟ್ಟಿಲ್ಲ. ಅದಕ್ಕೆ ಕಾರಣ ಅವರ ಇಡೀ ಕುಟುಂಬ ನನ್ನನ್ನು ನೋಡಿಕೊಂಡ ರೀತಿ.  ನಾನೊಬ್ಬಳು ನಟಿ. ಸಿನಿಮಾ ಮಂದಿ ಹಾಗಂತೆ, ಹೀಗಂತೆ ಅನ್ನೋ ಮಾತುಗಳು ಇದ್ದೇ ಇವೆ. ಆ ಬಗ್ಗೆ ಜಗದೀಶ್ ಅಥವಾ ಅವರ ಮನೆಯವರು ಎಂದಿಗೂ ತಲೆಕೆಡಿಸಿಕೊಂಡಿಲ್ಲ. ನನ್ನ ಮೇಲೆ ಅವರಿಗೆ ನಂಬಿಕೆಯಿದೆ. ಅವರ ಮೇಲೆ ನನಗೆ ನಂಬಿಕೆಯಿದೆ. ಪರಸ್ಪರ ನಂಬಿಕೆಯಿಂದ
ಬದುಕೋದಕ್ಕೆ ಇಷ್ಟು ಸಾಕು ಎನಿಸುತ್ತೆ. ಕಲಾವಿದರ ಬಗ್ಗೆ ಜಗದೀಶ್ ಮತ್ತು ಅವರ ಮನೆಯವರಿಗೂ ವಿಶೇಷವಾದ ಗೌರವವಿದೆ.

ಜಗದೀಶ್ ಕೂಡ ಅಷ್ಟೆ,  ಮದುವೆ ನಂತರವೂ ಸಿನಿಮಾ ಮಾಡ್ಬೇಕೆ ಅಥವಾ  ಬೇಡವೇ ಅನ್ನೋದರ ಬಗ್ಗೆ ಈ ತನಕ ಚರ್ಚೆ ಮಾಡಿಲ್ಲ. ‘ಅದು ನಿನ್ನ ಸ್ವಾತಂತ್ರ್ಯ’ ಅನ್ನೋದು ಅವರ ಮಾತು. ಅದು ಅವರ ದೊಡ್ಡ ಗುಣ. ಸದ್ಯಕ್ಕೆ ನನಗೆ ಫ್ಯಾಮಿಲಿ ಮುಖ್ಯ. ಹಾಗಾಗಿ ಸಿನಿಮಾದತ್ತ ಇನ್ನು ಯೋಚಿಸಿಲ್ಲ. ಉಳಿದಂತೆ ಇಬ್ಬರೂ ಬ್ಯುಸಿ ಆಗ್ಬೇಕು ಅನ್ನೋದು ಇದ್ದೇ ಇದೆ. ನಾನೀಗ ಒಂದಷ್ಟು ಮಹಿಳಾ ಸಬಲೀಕರಣದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅತ್ತ ಜಗದೀಶ್ ಕೂಡ ಅವರದೇ ಕೆಲಸಗಳಲ್ಲಿ ಬ್ಯುಸಿ  ಆಗಿದ್ದಾರೆ. ಫ್ರೀ ಇದ್ದಾಗ ಔಟಿಂಗ್ ಹೋಗುತ್ತೇವೆ. ಸಭೆ- ಸಮಾರಂಭಗಳಿಗೆ ಒಟ್ಟಿಗೆ ಹೋಗೋದ್ರಲ್ಲೂ  ಒಂಥರ ಖುಷಿ ಎನಿಸುತ್ತೆ. ಮನಸ್ಸಲ್ಲಿ ಅನಿಸಿದ್ದನ್ನು ಹಂಚಿಕೊಳ್ಳುತ್ತೇವೆ. ಹೀಗಲ್ಲ ಹಾಗೆ ಅಂತ ನಮ್ಮಮ್ಮ ಕೆಲಸಗಳಿಗೆ ಸಲಹೆ-ಸೂಚನೆ ಇದ್ದೇ ಇರುತ್ತೆ. 

loader