ಮುಂಬೈ[ಜ.10]: ಬಾಲಿವುಡ್‌ನ ‘ಸಂಸ್ಕಾರಿ ನಟ’ ಅಲೋಕ್‌ ನಾಥ್‌ ವಿರುದ್ಧ ಚಿತ್ರಕತೆಗಾರ್ತಿ ವಿನೀತಾ ನಂದಾ ಅವರು ಅತ್ಯಾಚಾರ ಪ್ರಕರಣ ದಾಖಲಿಸಿರುವುದಕ್ಕೆ ವೈಯಕ್ತಿಕ ದ್ವೇಷವೇ ಕಾರಣ. ಮಾನಹಾನಿ ಉದ್ದೇಶ ಹಾಗೂ ಸುಳ್ಳು ವರದಿಯ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದೆ ಎಂದು ಮುಂಬೈನ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಎಸ್‌.ಎಸ್‌. ಓಝಾ ಅವರು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ವಾರ ಅಲೋಕ್‌ ನಾಥ್‌ ಅವರಿಗೆ ಓಝಾ ಅವರು 5 ಲಕ್ಷ ರು. ಬಾಂಡ್‌ ಮೇಲೆ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದರು. ಆ ಆದೇಶ ಪ್ರತಿ ಇದೀಗ ಲಭ್ಯವಾಗಿದೆ. ಅಲೋಕ್‌ನಾಥ್‌ ಮೇಲೆ ಇದ್ದ ಪ್ರತಿಫಲರಹಿತ ಪ್ರೀತಿಯಿಂದಾಗಿ ವಿನೀತಾ ಅವರು ಪ್ರಕರಣ ದಾಖಲಿಸಿರಬಹುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.

1998ರಲ್ಲಿ ಪಾನೀಯದಲ್ಲಿ ಮತ್ತು ಬರಿಸುವ ಔಷಧಿ ಸೇರಿಸಿ, ಮುಂಬೈನಲ್ಲಿ ತಮ್ಮ ಮೇಲೆ ಅಲೋಕ್‌ ಅತ್ಯಾಚಾರ ಮಾಡಿದ್ದರು ಎಂದು ಅ.8ರಂದು ಮೀಟೂ ಅಭಿಯಾನದಡಿ ಆರೋಪ ಮಾಡಿದ್ದ ವಿನೀತಾ, ನಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಾಧೀಶರು, ಇಡೀ ಘಟನೆ ಬಗ್ಗೆ ದೂರುದಾರರಿಗೆ ನೆನಪಿದೆ. ಆದರೆ ಘಟನೆ ನಡೆದ ದಿನಾಂಕ ಮತ್ತು ತಿಂಗಳು ಮಾತ್ತ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಅಲೋಕ್‌ನಾಥ್‌ ಪತ್ನಿ ಆಶು ಹಾಗೂ ವಿನೀತಾ ಅವರು 1980ರಲ್ಲಿ ಚಂಡೀಗಢದಲ್ಲಿ ಕಾಲೇಜು ಸ್ನೇಹಿತರಾಗಿದ್ದರು. ಇಬ್ಬರೂ ಜತೆಯಾಗಿ ಮುಂಬೈನಲ್ಲಿ ಧಾರಾವಾಹಿ ನಿರ್ಮಾಣ ತಂಡದಲ್ಲಿ ಕೆಲಸ ಮಾಡುತ್ತಿದ್ದರು. 80ರ ಮಧ್ಯಭಾಗದಲ್ಲಿ ಅಲೋಕ್‌ನಾಥ್‌ ಅವರನ್ನು ಭೇಟಿಯಾದರು. ಮೂವರ ನಡುವೆ ದಿಢೀರ್‌ ಸ್ನೇಹ ಸೃಷ್ಟಿಯಾಯಿತು. 1987ರಲ್ಲಿ ಅಲೋಕ್‌ನಾಥ್‌ ಅವರು ಆಶು ಅವರಲ್ಲಿ ಪ್ರೀತಿ ನಿವೇದಿಸಿಕೊಂಡು ವಿವಾಹವಾದರು. ಆನಂತರ ತನ್ನ ಸ್ನೇಹಿತನನ್ನು ಕಳೆದುಕೊಂಡ ಏಕಾಂಗಿ ಭಾವ ವಿನೀತಾ ಅವರನ್ನು ಕಾಡಲು ಆರಂಭಿಸಿತು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.