ಅಲ್ಲು ಅರ್ಜುನ್ ಭಾರತದ ದೊಡ್ಡ ಸೂಪರ್‌ಸ್ಟಾರ್. ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಆದರೆ, ಸ್ವಂತ ಮಗನ ಮನಸ್ಸು ಗೆಲ್ಲಲು ಅವರಿಂದ ಸಾಧ್ಯವಾಗಿಲ್ಲ. ಅಲ್ಲು ಅಯಾನ್‌ಗೆ ಅವರಪ್ಪ ಬನ್ನಿ ಫೇವರಿಟ್ ಹೀರೋ ಅಲ್ವಂತೆ.

ಅಲ್ಲು ಅರ್ಜುನ್ ಸದ್ಯ 'ಐಕಾನ್ ಸ್ಟಾರ್' ಆಗಿ ಮಿಂಚುತ್ತಿದ್ದಾರೆ. ಈಗ 'ರಾಕ' ಚಿತ್ರದ ಮೂಲಕ ಗ್ಲೋಬಲ್ ಸ್ಟಾರ್ ಆಗುವತ್ತ ಕಣ್ಣಿಟ್ಟಿದ್ದಾರೆ. ಜಗತ್ತಿನಾದ್ಯಂತ ತಮ್ಮ ಸಾಮರ್ಥ್ಯ ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಇಂಥ ದೊಡ್ಡ ಸ್ಟಾರ್ ಆಗಿದ್ದರೂ, ಸ್ವಂತ ಮಗನ ವಿಷಯದಲ್ಲಿ ಅವರಿಗೆ ಶಾಕ್ ಆಗಿದೆ. ಬನ್ನಿ, ತನ್ನ ಮಗನ ಮೆಚ್ಚಿನ ಹೀರೋ ಆಗದಿರುವುದು ಗಮನಾರ್ಹ. ಹಾಗಾದರೆ ಅಲ್ಲು ಅಯಾನ್‌ಗೆ ಇಷ್ಟವಾದ ನಟ ಯಾರು? ಆತ ಇಷ್ಟಪಟ್ಟ ಸಿನಿಮಾ ಯಾವುದು ನೋಡೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲು ಅರ್ಜುನ್ ಮತ್ತು ಸ್ನೇಹಾ ರೆಡ್ಡಿ ದಂಪತಿಗೆ ಅಲ್ಲು ಅಯಾನ್ ಎಂಬ ಮಗ ಹಾಗೂ ಅಲ್ಲು ಅರ್ಹಾ ಎಂಬ ಮಗಳಿದ್ದಾಳೆ. ಅಯಾನ್, ತನ್ನ ತಾತ ರಾಮಲಿಂಗಯ್ಯ ಮತ್ತು ಅಲ್ಲು ಅರವಿಂದ್ ಅವರಂತೆ ತುಂಬಾ ಚೂಟಿಯಾಗಿರುತ್ತಾನಂತೆ. ಅಪ್ಪನ ಮಾತನ್ನೂ ಕೇಳದೆ ತನಗನಿಸಿದ್ದನ್ನು ಮಾಡುತ್ತಾನಂತೆ. ಈ ವಿಚಾರವನ್ನು ಬನ್ನಿಯೇ ಹಲವು ಬಾರಿ ಹೇಳಿದ್ದಾರೆ. ಒಮ್ಮೆ ಶೂಟಿಂಗ್‌ಗೆ ಬರುತ್ತೇನೆ ಎಂದಾಗ ಅಲ್ಲು ಅರ್ಜುನ್ ಬೇಡ ಎಂದರಂತೆ. 'ನನಗೆ ಬೇಡ ಅನ್ನೋಕೆ ನೀವ್ಯಾರು' ಎಂದು ಸೆಟ್‌ಗೆ ಬಂದು ಕೂತಿದ್ದನಂತೆ.

ಆ ಚಿತ್ರದ ನಿರ್ಮಾಪಕ ಅಲ್ಲು ಅರವಿಂದ್. 'ಇದು ನಮ್ಮ ತಾತನ ಸಿನಿಮಾ' ಎಂದು ನಿರ್ಮಾಪಕರ ಕುರ್ಚಿಯಲ್ಲಿ ಕುಳಿತು ಶಾಕ್ ಕೊಟ್ಟಿದ್ದನಂತೆ. ಇಂಥ ಅಯಾನ್, ತನ್ನ ಫೇವರಿಟ್ ಹೀರೋ ವಿಷಯದಲ್ಲಿ ಅಪ್ಪನಿಗೆ ಮತ್ತು ಚಿರಂಜೀವಿ ತಾತನಿಗೂ ಶಾಕ್ ನೀಡಿದ್ದಾನೆ. ಅಲ್ಲು ಅಯಾನ್‌ಗೆ ಇಷ್ಟವಾದ ಹೀರೋ ಪ್ರಭಾಸ್ ಅಂತೆ. ಅವರು ನಟಿಸಿದ 'ಬಾಹುಬಲಿ' ಸಿನಿಮಾ ಎಂದರೆ ಬಹಳ ಇಷ್ಟವಂತೆ. ಅವರ ಆ್ಯಕ್ಷನ್ ಚೆನ್ನಾಗಿರುತ್ತದೆ ಎಂದು ಹೇಳಿದ್ದಾನೆ. ಚಿರಂಜೀವಿ ತಾತನ ಡ್ಯಾನ್ಸ್ ಕೂಡ ಇಷ್ಟ, ಆದರೆ ಒಟ್ಟಾರೆಯಾಗಿ ನೋಡಿದರೆ ಪ್ರಭಾಸ್ ಅವರೇ ಫೇವರಿಟ್ ಹೀರೋ ಎಂದು ಅಯಾನ್ ತಿಳಿಸಿದ್ದಾನೆ.

ಅಲ್ಲು ಅರ್ಜುನ್ ಮುಂದೆಯೇ ಬಾಲಕೃಷ್ಣ ಜೊತೆ ಈ ವಿಷಯವನ್ನು ಅಯಾನ್ ಹಂಚಿಕೊಂಡಿದ್ದ. ಬಾಲಕೃಷ್ಣ ಹೋಸ್ಟ್ ಮಾಡಿದ 'ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ' ಟಾಕ್ ಶೋಗೆ ಅಲ್ಲು ಅರ್ಜುನ್ ಬಂದಿದ್ದರು. ಈ ವೇಳೆ ತಮ್ಮ ಇಬ್ಬರು ಮಕ್ಕಳಾದ ಅಯಾನ್ ಮತ್ತು ಅರ್ಹಾರನ್ನು ಕರೆತಂದಿದ್ದರು. ಆಗ 'ನಿನಗೆ ಇಷ್ಟವಾದ ಹೀರೋ ಯಾರು?' ಎಂದು ಕೇಳಿದಾಗ, ಅಯಾನ್ 'ಪ್ರಭಾಸ್' ಎಂದು ಹೇಳಿದ್ದ. ಇದಕ್ಕೆ ಬನ್ನಿ ನಕ್ಕಿದ್ದು ವಿಶೇಷ. ಹೀಗೆ ಎಲ್ಲರ ಮುಂದೆ ಅಪ್ಪನಿಗೆ ಅಯಾನ್ ಶಾಕ್ ಕೊಟ್ಟಿದ್ದ.

ಮೈ ಜುಮ್ಮೆನಿಸುವಂತಿದೆ ಫಸ್ಟ್ ಲುಕ್

ಸದ್ಯ ಅಲ್ಲು ಅರ್ಜುನ್ 'ರಾಕ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಟ್ಲಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಸೈನ್ಸ್ ಫಿಕ್ಷನ್ ಅಂಶಗಳೊಂದಿಗೆ ಈ ಸಿನಿಮಾ ತಯಾರಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಬನ್ನಿಯ ಫಸ್ಟ್ ಲುಕ್ ಮೈ ಜುಮ್ಮೆನಿಸುವಂತಿದೆ. ಇದರಲ್ಲಿ ತೋಳವನ್ನು ಹೋಲುವಂತೆ ಬನ್ನಿ ಲುಕ್ ಇದೆ. ಅವರು ಇದರಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅವರದ್ದು ಇನ್ನೊಂದು ಪಾತ್ರವೂ ಇದ್ದು, ಅದರಲ್ಲಿ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿದ್ದಾರೆ. ಇದು ಮುಂದಿನ ವರ್ಷ ಪ್ರೇಕ್ಷಕರ ಮುಂದೆ ಬರಲಿದೆ.