ನವದೆಹಲಿ[ಜು.12]: ಸಾಮಾಜಿಕ ಜಾಲತಾಣಗಳ ಮೂಲಕ, ಜನರ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರಭಾವ ಬೀರುತ್ತಿರುವವರ ಪಟ್ಟಿಯೊಂದನ್ನು ಅಮೆರಿಕ ಮೂಲದ ಫಿಟ್‌ನೆಸ್‌ ಸಂಸ್ಥೆಯಾದ ಗೋ ಕೀ ಬಿಡುಗಡೆ ಮಾಡಿದೆ.

ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ನಟ ಅಕ್ಷಯ್‌ ಕುಮಾರ್‌ ಮತ್ತು ಯೋಗ ಗುರು ಬಾಬಾ ರಾಮ್‌ದೇವ್‌ ಕ್ರಮವಾಗಿ ಟಾಪ್‌ 3 ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ಕ್ರಿಕೆಟಿಗ ವಿರಾಟ್‌ ಕೊಹ್ಲಿ, ಮಹೇಂದ್ರ ಸಿಂಗ್‌ ಧೋನಿ, ನಟರಾದ ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌, ಕರೀನಾ ಕಪೂರ್‌, ಟೈಗರ್‌ ಶ್ರಾಫ್‌, ಪ್ರಿಯಾಂಕಾ ಚೋಪ್ರಾ 4ರಿಂದ 10ರವರೆಗಿನ ಸ್ಥಾನ ಪಡೆದುಕೊಂಡಿದ್ದಾರೆ.

ಮೋದಿ ಯೋಗದ ಮೂಲಕ ಜನರ ಮೇಲೆ ಅಪಾರ ಪ್ರಭಾವ ಬೀರಿದ್ದಾರೆ. ಅಕ್ಷಯ್‌ ಕುಮಾರ್‌ ಟೆಕ್ವಾಂಡೋ ಪಟುವಾಗಿದ್ದಾರೆ. ರಾಮ್‌ದೇವ್‌ ಯೋಗದ ಮೂಲಕ ಜನರಿಗೆ ಆರೋಗ್ಯದ ಮಹತ್ವ ಸಾಗುತ್ತಿದ್ದಾರೆ ಎಂದು ವರದಿ ಹೇಳಿದೆ.

444 ಕೋಟಿ ಸಂಭಾವನೆ: ಅಕ್ಷಯ್‌ ವಿಶ್ವ ನಂ.35!

2019ನೇ ಸಾಲಿನಲ್ಲಿ ವಿಶ್ವದಲ್ಲೇ ಅತಿಹೆಚ್ಚು ಸಂಭಾವನೆ ಪಡೆದ ಕಲಾವಿದರ ಪಟ್ಟಿಯೊಂದನ್ನು ಅಮೆರಿಕ ಮೂಲದ ಫೋಬ್ಸ್‌ರ್‍ ಮ್ಯಾಗಜಿನ್‌ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ನಟ ಅಕ್ಷಯ್‌ ಕುಮಾರ್‌ ಸ್ಥಾನ ಪಡೆದ ಭಾರತದ ಏಕಮಾತ್ರ ಕಲಾವಿದರಾಗಿದ್ದಾರೆ.

ಸಿನಿಮಾವೊಂದಕ್ಕೆ 35-70 ಕೋಟಿ ರು. ಸಂಭಾವನೆ ಪಡೆಯುವ ಅಕ್ಷಯ್‌ ಕುಮಾರ್‌ ಅವರು ಅತಿಹೆಚ್ಚು ಸಂಭಾವನೆ ಪಡೆದವರ ಪಟ್ಟಿಯಲ್ಲಿ 35ನೇ ಸ್ಥಾನದಲ್ಲಿದ್ದಾರೆ. ಅಕ್ಷಯ್‌ ಕುಮಾರ್‌ ಅವರ ಕೈಯಲ್ಲಿ ಈಗಾಗಲೇ ಮಿಷನ್‌ ಮಂಗಳ, ಹೌಸ್‌ಫುಲ್‌-4, ಗುಡ್‌ನ್ಯೂಸ್‌, ಲಕ್ಷ್ಮಿ ಬಾಂಬ್‌ ಹಾಗೂ ಸೂರ್ಯವಂಶಿ ಚಿತ್ರಗಳಿವೆ. ಅಲ್ಲದೆ, ಟಾಪ್‌ 20 ಬ್ಯ್ರಾಂಡ್‌ಗಳ ರಾಯಭಾರಿಯಾಗಿರುವ ಅಕ್ಷಯ್‌ ಕುಮಾರ್‌ ಅವರು 2018ರ ಜೂನ್‌ನಿಂದ 2019ರ ಜೂನ್‌ವರೆಗೂ 444 ಕೋಟಿ ರು. ಆದಾಯ ಸಂಪಾದಿಸಿದ್ದಾರೆ.

ಇನ್ನು ವಾರ್ಷಿಕ 185 ಮಿಲಿಯನ್‌ ಡಾಲರ್‌(ಸುಮಾರು 1265 ಕೋಟಿ ರು.) ಸಂಭಾವನೆ ಪಡೆಯುವ ಅಮೆರಿಕದ ಗಾಯಕಿ ಹಾಗೂ ಗೀತೆ ರಚನೆಗಾರ್ತಿ ಟೇಲರ್‌ ಸ್ವಿಫ್ಟ್‌ ಅವರು ಫೋಬ್ಸ್‌ರ್‍ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿದ್ದಾರೆ.