ನಟಿ ಸ್ನೇಹ ಅವರು ಅದ್ಧೂರಿಯಾಗಿ ವರಮಹಾಲಕ್ಷ್ಮಿ ವ್ರತ ಆಚರಿಸಿದ್ದಾರೆ. ಈ ವಿಶೇಷ ದಿನದಂದು ಸಾಂಪ್ರದಾಯಿಕ ಸೀರೆಯಲ್ಲಿ ಕಾಣಿಸಿಕೊಂಡಿರುವ ನಟಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ಪವಿತ್ರ ಮಾಸದಲ್ಲಿ ವಿಶೇಷ ಪೂಜೆ, ವ್ರತ ಹಾಗೂ ನಾಮಗಳನ್ನು ಆಚರಿಸುವುದು ಸಾಮಾನ್ಯ. ಸಾಮಾನ್ಯ ಜನರಂತೆ ಸೆಲೆಬ್ರಿಟಿಗಳೂ ಕೂಡ ಶ್ರಾವಣದ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿ ಸ್ನೇಹ ಅವರು ಅದ್ಧೂರಿಯಾಗಿ ವರಮಹಾಲಕ್ಷ್ಮಿ ವ್ರತ ಆಚರಿಸಿದ್ದಾರೆ. ಈ ವಿಶೇಷ ದಿನದಂದು ಸಾಂಪ್ರದಾಯಿಕ ಸೀರೆಯಲ್ಲಿ ಕಾಣಿಸಿಕೊಂಡಿರುವ ನಟಿಯ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸೀರೆಯಲ್ಲಿ ಮಿಂಚಿದ ಸ್ನೇಹ!

ವರಲಕ್ಷ್ಮೀ ವ್ರತದ ಹಿನ್ನೆಲೆಯಲ್ಲಿ ಸ್ನೇಹ ಸುಂದರವಾದ ಸೀರೆಯುಟ್ಟು, ಸಾಂಪ್ರದಾಯಿಕ ಆಭರಣಗಳನ್ನು ಧರಿಸಿ ಮಿಂಚಿದ್ದಾರೆ. ಸೀರೆಯ ಜೊತೆಗೆ ಮೈತುಂಬಾ ಧರಿಸಿರುವ ಆಭರಣಗಳು ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ. ಸರಳವಾದರೂ ಅಷ್ಟೇ ಆಕರ್ಷಕವಾಗಿರುವ ಈ ಲುಕ್‌ನಲ್ಲಿ ಸ್ನೇಹ ಅವರನ್ನು ನೋಡಿದ ಅಭಿಮಾನಿಗಳು ‘ಬೊಂಬೆ’ಯಂತೆ ಕಾಣುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವ್ರತದ ಅಂಗವಾಗಿ ತಮ್ಮ ಮನೆಯನ್ನೂ ಬಣ್ಣಬಣ್ಣದ ಹೂವುಗಳಿಂದ ಸುಂದರವಾಗಿ ಅಲಂಕರಿಸಿರುವ ಸ್ನೇಹ, ಪೂಜೆಯ ಕೆಲವು ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳಿಗೆ ಭರ್ಜರಿ ಮೆಚ್ಚುಗೆ

ಸ್ನೇಹ ಹಂಚಿಕೊಂಡಿರುವ ವರಮಹಾಲಕ್ಷ್ಮಿ ವ್ರತದ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸಾಂಪ್ರದಾಯಿಕ ಉಡುಗೆಯಲ್ಲಿ ನಟಿಯ ಸೌಂದರ್ಯ ಕಂಡು ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ‘ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತಿದ್ದೀರಿ’, ‘ನಿಜಕ್ಕೂ ಬೊಂಬೆ’ ಎಂದು ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮತ್ತೆ ಬ್ಯುಸಿಯಾಗಿರುವ ನಟಿ ಸ್ನೇಹ

ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚಿದ್ದ ಸ್ನೇಹ, ಇದೀಗ ವಿಭಿನ್ನ ರೀತಿಯ ಪಾತ್ರಗಳ ಮೂಲಕವೂ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ದಳಪತಿ ವಿಜಯ್ ನಟನೆಯ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ (GOAT) ಸಿನಿಮಾದಲ್ಲಿ ವಿಜಯ್ ಅವರ ಪತ್ನಿಯ ಪಾತ್ರದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದರು. ಈ ಪಾತ್ರವೂ ಪ್ರೇಕ್ಷಕರ ಗಮನ ಸೆಳೆದಿತ್ತು. ಇದರ ಜೊತೆಗೆ ಪ್ರದೀಪ್ ರಂಗನಾಥನ್ ನಾಯಕನಾಗಿ ನಟಿಸಿದ್ದ ‘ಡ್ರ್ಯಾಗನ್’ ಸಿನಿಮಾದಲ್ಲೂ ಸ್ನೇಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

‘ಅಮ್ಮೋರು ತಲ್ಲಿ 2’ನಲ್ಲಿ ಸ್ನೇಹ

ಸದ್ಯ ಸ್ನೇಹ ಅವರ ಕೈಯಲ್ಲಿ ಮತ್ತೊಂದು ಕುತೂಹಲಕಾರಿ ಸಿನಿಮಾ ಇದೆ. ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ‘ಮೂಕ್ಕುತಿ ಅಮ್ಮನ್’ ಚಿತ್ರದ ಸೀಕ್ವೆಲ್ ಆಗಿರುವ ‘ಮೂಕ್ಕುತಿ ಅಮ್ಮನ್ 2’ ಸಿನಿಮಾದಲ್ಲಿ ಸ್ನೇಹ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಈ ಸಿನಿಮಾ ‘ಅಮ್ಮೋರು ತಲ್ಲಿ 2’ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ನಯನತಾರಾ, ಸ್ನೇಹ ಅವರೊಂದಿಗೆ ರೆಜಿನಾ ಕ್ಯಾಸಾಂಡ್ರಾ, ಯೋಗಿ ಬಾಬು, ದುನಿಯಾ ವಿಜಯ್, ಅಭಿನಯ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ, ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಬ್ಯುಸಿಯಾಗಿರುವ ಸ್ನೇಹ, ಇದೀಗ ವರಲಕ್ಷ್ಮೀ ವ್ರತದ ಸಾಂಪ್ರದಾಯಿಕ ಲುಕ್‌ನಿಂದಲೂ ಅಭಿಮಾನಿಗಳ ಗಮನ ಸೆಳೆದಿದ್ದಾರೆ.