ಇತ್ತೀಚೆಗೆ ಶ್ರದ್ಧಾ ಶ್ರೀನಾಥ್‌ ಅವರು ಸಮಂತಾ ಅಭಿನಯದ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ತಾವು ಹಾಗೆ ಹೇಳಿಲ್ಲ, ಸಮಂತಾ ನಟನೆಯ ಬಗ್ಗೆ ತಾವೆಲ್ಲೂ ಮಾತನಾಡಿಲ್ಲ, ಬದಲಿಗೆ ತೆಲುಗಿನ ‘ಯೂಟರ್ನ್‌’ ನೋಡಲು ಹೋಗಿದ್ದ ತಾವು 30 ನಿಮಿಷಗಳಲ್ಲೇ ಚಿತ್ರಮಂದಿರದಿಂದ ಎದ್ದು ಬಂದೆ ಎನ್ನುವುದು ಶ್ರದ್ಧಾ ಶ್ರೀನಾಥ್‌ ವಾದ.

‘ಯೂಟರ್ನ್‌ ನಾನು ಅಭಿನಯಿಸಿದ ನನ್ನ ಮೊದಲ ಚಿತ್ರ. ಮೊದಲ ಸಿನಿಮಾ ಎನ್ನುವ ಕಾರಣಕ್ಕೆ ಅಲ್ಲಿನ ರಚನಾ ಪಾತ್ರವನ್ನು ತುಂಬಾ ಫೀಲ್‌ ಮಾಡಿಕೊಳ್ಳುತ್ತೇನೆ. ನಾನು ಯಾವುದೇ ಸಿನಿಮಾ ಮಾಡುವಾಗಲೂ ಆ ಪಾತ್ರ ನನ್ನ ಕಣ್ಣ ಮುಂದೆ ಬರುತ್ತದೆ. ಸಹಜವಾಗಿಯೇ ಇನ್ನೊಬ್ಬರು ಆ ಪಾತ್ರದಲ್ಲಿ ಕಾಣಿಸಿಕೊಂಡರೆ ಪೊಸೆಸಿವ್‌ನೆಸ್‌ ಶುರುವಾಗುತ್ತೆ. ಅದ್ಯಾಕೆ ಹಾಗೆ ಅಂದ್ರೆ, ಅದು ನನ್ನ ಮೊದಲ ಪಾತ್ರ ಎನ್ನುವುದು ಕೂಡ ಕಾರಣ. ಆ ದೃಷ್ಟಿಯಿಂದಲೇ ನಾನು ತೆಲುಗಿನ ಯೂಟರ್ನ್‌ ನೋಡಲು ಕುಳಿತಾಗ ಸಿನಿಮಾ ಶುರುವಾದ 30 ನಿಮಿಷಗಳಲ್ಲೇ ಚಿತ್ರಮಂದಿರದಿಂದ ಎದ್ದು ಬಂದೆ. ಅದರರ್ಥ ನನಗೆ ಸಮಂತಾ ಅವರ ಪಾತ್ರ ಪೋಷಣೆ ಇಷ್ಟಆಗಲಿಲ್ಲ ಅಂತಲ್ಲ. ಆ ಪಾತ್ರದ ಬಗೆಗೆ ನನ್ನಲಿರುವ ಪೊಸೆಸಿವ್‌ನೆಸ್‌ ಕಾರಣ’ಎನ್ನುತ್ತಾರೆ ಶ್ರದ್ಧಾ ಶ್ರೀನಾಥ್‌.

ಶ್ರದ್ಧಾ ಶ್ರೀನಾಥ್‌​ ಲಿಪ್‌ಲಾಕ್‌ ವೈರಲ್‌

ಶ್ರದ್ಧಾ ಮತ್ತು ಸಮಂತಾ ನಡುವಿನ ಗೆಳೆತನ ಹೇಗಿದೆ ಅಂತ ಕೇಳಿದರೆ, ಜಸ್ಟ್‌ ಫ್ರೆಂಡ್ಸ್‌. ಇಂತಹ ಕಾಮೆಂಟ್ಸ್‌ಗೆಲ್ಲ ತಲೆ ಕೆಡಿಸಿಕೊಳ್ಳುವಷ್ಟುಸಮಯ ಅವರಿಗೆ ಇರಲಿಕ್ಕಿಲ್ಲ ಅಂತಾರೆ ಶ್ರದ್ಧಾ. ಸದ್ಯಕ್ಕೆ ಟಾಲಿವುಡ್‌ನಲ್ಲಿ ಬ್ಯಾಕ್‌ ಟು ಬ್ಯಾಕ್‌ ಅವಕಾಶಗಳೊಂದಿಗೆ ಬ್ಯುಸಿ ಆಗಿರುವ ಶ್ರದ್ಧಾ ಶ್ರೀನಾಥ್‌, ಅಲ್ಲಿನ ವೆಬ್‌ಸೈಟ್‌ ಒಂದಕ್ಕೆ ಸಂದರ್ಶನ ನೀಡಿದ್ದರಂತೆ. ಆ ಸಂದರ್ಶನದಲ್ಲಿ ತೆಲುಗಿನ ಯೂಟರ್ನ್‌ ಚಿತ್ರ ನೋಡಿದ ಅನುಭವ ಹೇಳಿ ಎಂದಾಗ, ಚಿತ್ರ ನೋಡಲು ಕುಳಿತ 30 ನಿಮಿಷಗಳಲ್ಲಿ ಚಿತ್ರಮಂದಿರದಿಂದ ಎದ್ದು ಬಂದೆ ಎನ್ನುವ ಹೇಳಿಕೆಯೇ ವಿವಾದ ಎಬ್ಬಿಸಿದೆ.