2014ರಲ್ಲಿ ನಟಿ ಸಂಜನಾ ಅವರಿಗೆ ಪ್ರಸಿದ್ಧಿ ಚೀಟ್ ಫಂಡ್ ಮುಖ್ಯಸ್ಥ ಮಹೇಶ್ ಹಾಗೂ ಅವರ ಪತ್ನಿ ನಿರೂಪ ಮಹೇಶ್ ಪರಿಚಯವಾಗಿತ್ತು. ಹಣ ಹೂಡಿದರೆ ಆರ್ಥಿಕವಾಗಿ ಲಾಭ ಗಳಿಸಬಹುದು ಎಂಬ ಮಹೇಶ್ ಮಾತಿಗೆ ಒಪ್ಪಿದ ಸಂಜನಾ ಮತ್ತು ಅವರ ತಾಯಿ, 2014 ಜೂನ್ 18 ರಂದು ಮೊದಲು 10 ಲಕ್ಷ ಮೊತ್ತದ ಚೀಟಿಗೆ ಮಾಸಿಕ 20 ಸಾವಿರ ನಂತೆ 30 ಕಂತು ಕಟ್ಟಿದ್ದರು.

ಬೆಂಗಳೂರು(ಅ.12): ಇತ್ತೀಚಿಗೆ ಚಿಟ್ ಹೆಸರಿನಲ್ಲಿ ನಟಿ ಸಂಜನಾ ಸೇರಿದಂತೆ ನೂರಾರು ಮಂದಿಗೆ ವಂಚಿಸಿದ್ದ ಮಲ್ಲೇಶ್ವರದ ಪ್ರಸಿದ್ಧಿ ಚಿಟ್ ಪಂಢ್ ವಿರುದ್ಧ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ.

10 ಲಕ್ಷದಿಂದ 1 ಕೋಟಿವರೆಗೆ ಚೀಟಿ ಹಣ ಸಂಗ್ರಹಿಸಿದ ಪ್ರಸಿದ್ಧಿ ಚೀಟ್ ಫಂಡ್, ಆನಂತರ ಗ್ರಾಹಕರಿಗೆ ಹಣ ಮರಳಿಸದೆ ಮೋಸಗೊಳಿಸಿದ್ದ ಬಗ್ಗೆ 2016 ಡಿಸೆಂಬರ್ ಹಾಗೂ 2017ರ ಆಗಸ್ಟ್‌ನಲ್ಲಿ ಪ್ರತ್ಯೇಕವಾಗಿ ದೂರು ದಾಖಲಾಗಿದ್ದವು. ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು, ಸಿಐಡಿ ತನಿಖೆ ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣ ಸಂಬಂಧ ಮಲ್ಲೇಶ್ವರ ಠಾಣೆ ಪೊಲೀಸರಿಂದ ದಾಖಲೆಗಳನ್ನು ಸಿಐಡಿ ವಶಕ್ಕೆ ಪಡೆದಿದ್ದು, ವಂಚನೆ ಆರೋಪ ಎದುರಿಸುತ್ತಿರುವ ಸಂಸ್ಥೆ ಮುಖ್ಯಸ್ಥ ಮಹೇಶ್, ವ್ಯವಸ್ಥಾಪಕ ನಿರ್ದೇಶಕಿ ಆಗಿರುವ ಅವರ ಪತ್ನಿ ನಿರೂಪ, ಏಜೆಂಟ್‌ಗಳಾದ ರಾಜೀವ್, ರಂಗಸ್ವಾಮಿ ಸೇರಿದಂತೆ ಇನ್ನಿತರಿಗೆ ಮತ್ತೊಂದು ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎನ್ನಲಾಗಿದೆ.

2014ರಲ್ಲಿ ನಟಿ ಸಂಜನಾ ಅವರಿಗೆ ಪ್ರಸಿದ್ಧಿ ಚೀಟ್ ಫಂಡ್ ಮುಖ್ಯಸ್ಥ ಮಹೇಶ್ ಹಾಗೂ ಅವರ ಪತ್ನಿ ನಿರೂಪ ಮಹೇಶ್ ಪರಿಚಯವಾಗಿತ್ತು. ಹಣ ಹೂಡಿದರೆ ಆರ್ಥಿಕವಾಗಿ ಲಾಭ ಗಳಿಸಬಹುದು ಎಂಬ ಮಹೇಶ್ ಮಾತಿಗೆ ಒಪ್ಪಿದ ಸಂಜನಾ ಮತ್ತು ಅವರ ತಾಯಿ, 2014 ಜೂನ್ 18 ರಂದು ಮೊದಲು 10 ಲಕ್ಷ ಮೊತ್ತದ ಚೀಟಿಗೆ ಮಾಸಿಕ 20 ಸಾವಿರ ನಂತೆ 30 ಕಂತು ಕಟ್ಟಿದ್ದರು. ಬಳಿಕ 2016ರ ಡಿಸೆಂಬರ್ 14 ರಿಂದ ಮತ್ತೊಂದು 10 ಲಕ್ಷ ವೊತ್ತದ ಚೀಟಿಗೆ ಮಾಸಿಕ 20 ಸಾವಿರದಂತೆ 26 ಕಂತು ಪಾವತಿಸಿದ್ದರು. ಅಲ್ಲದೆ 10 ಲಕ್ಷ ರು ಸಾಲ ರೂಪದಲ್ಲಿ ಗ್ರಾಹಕರಿಗೆ ಸಂಸ್ಥೆ ನೀಡಬೇಕಿತ್ತು. ಅದರಂತೆ ಒಟ್ಟು 28 ಲಕ್ಷಕ್ಕೆ ಬಿಡ್ ಮಾಡಲು ಅವಕಾಶ ನೀಡದೆ ಅಥವಾ ಕಟ್ಟಿದ ಹಣವನ್ನು ಮರಳಿಸದೆ ಚಿಟ್ ಫಂಡ್ ವಂಚಿಸಿದೆ ಎಂದು ಸಂಜನಾ ಆರೋಪಿಸಿದ್ದರು. ಅದೇ ಹಲವು ಮಂದಿಗೂ ಮಹೇಶ್ ದಂಪತಿ ಮೋಸ ಮಾಡಿದ್ದಾರೆ ಎಂಬ ಆರೋಪ ಬಂದಿತು.

ಮಲ್ಲೇಶ್ವರದ 3ನೇ ಮುಖ್ಯರಸ್ತೆಯಲ್ಲಿ 2006ರ ಆಗಸ್ಟ್‌ನಲ್ಲಿ ಪ್ರಸಿದ್ಧಿ ಚಿಟ್ ಫಂಡ್ ಸಂಸ್ಥೆಯನ್ನು ಮಹೇಶ್ ಪ್ರಾರಂಭಿಸಿದ್ದು, ಈ ಸಂಸ್ಥೆಯು ಸರ್ಕಾರದಲ್ಲಿ ನೊಂದಾಯಿತವಾಗಿದೆ. ವಾರ್ಷಿಕ ಕೋಟ್ಯಾಂತರ ರು ವಹಿವಾಟು ನಡೆಸುವುದಾಗಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಸ್ಥೆ ಘೋಷಿಕೊಂಡಿದೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.