ಬೆಳಗಾವಿ (ಆ. 13): ಜಿಲ್ಲೆಯ ಜನ ಪ್ರವಾಹಕ್ಕೆ ಸಿಲುಕಿ ಸಂಕಷ್ಟದಲ್ಲಿರುವುದು ತೀವ್ರ ನೋವು ತಂದಿದೆ. ಅವರ ನೆರವಿಗೆ ನಾವೆಲ್ಲ ನಿಲ್ಲಬೇಕಿದೆ. ಯಾಕಂದ್ರೆ ಅದು ನನ್ನೂರು...!

- ಇದು ಕನ್ನಡದವರೇ ಆದ ಬಾಲಿವುಡ್‌ನ ಜನಪ್ರಿಯ ನಟಿ ಲಕ್ಷ್ಮೇ ರೈ ಆತಂಕ. ಹಾಗೆಯೇ ಕಳಕಳಿ. ಜತೆಗೆ ಮನವಿ.

‘ಮಳೆ ರೌದ್ರವತಾರ ಭೀಕರವಾಗಿದೆ. ಬೆಳಗಾವಿ ಜಿಲ್ಲೆ ಅತೀ ಹೆಚ್ಚು ಅತೀ ಹೆಚ್ಚು ನಷ್ಟಕಂಡಿದೆ. ನನ್ನೂರಿನ ಜನ ನೋವಿನಲ್ಲಿದ್ದಾರೆ. ಈಗಾಗಲೇ ನೆರೆ ಸಂತ್ರಸ್ತರಿಗೆ ನನ್ನಿಂದಾದ ಸಹಾಯ ಮಾಡಿದ್ದೇನೆ. ನೀವು ಕೂಡ ನಿಮ್ಮಿಂದಾದ ಸಹಾಯ ಮಾಡಿದರೆ ಆ ಜನ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ’ ಅಂತ ಲಕ್ಷ್ಮೇ ರೈ ವಿನಂತಿಸಿಕೊಂಡಿದ್ದು ಅವರದೇ ಅಭಿನಯದ ‘ಝಾನ್ಸಿ’ ಚಿತ್ರದ ಆಡಿಯೋ ಬಿಡುಗಡೆ ಸಂದರ್ಭ.

ಗುರುಪ್ರಸಾದ್‌ ನಿರ್ದೇಶನ ಹಾಗೂ ರಾಜೇಶ್‌ ಕುಮಾರ್‌ ನಿರ್ಮಾಣದ ‘ಝಾನ್ಸಿ’ ಚಿತ್ರದ ಆಡಿಯೋ ಲಾಂಚ್‌ ಕಾರ್ಯಕ್ರಮ ಭಾನುವಾರ ನಡೆಯಿತು. ಅಲ್ಲಿ ಲಕ್ಷ್ಮೇ ರೈ ಮಾತನಾಡಿದರು.

‘ರಾಜ್ಯದ ಜನರು ಪ್ರವಾಹದಿಂದ ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ನಾವು ಹೋಗಬೇಕಿದೆ. ಇಂತಹ ಸಂದರ್ಭದಲ್ಲೂ ಆಡಿಯೋ ಲಾಂಚ್‌ ಕಾರ್ಯಕ್ರಮ ಆಯೋಜಿಸುವುದು ಚಿತ್ರತಂಡಕ್ಕೆ ಅನಿವಾರ್ಯವಾಗಿತ್ತು. ಯಾಕಂದ್ರೆ, ಖಾಸಗಿ ಕಾರ್ಯಕ್ರಮದ ನಿಮಿತ್ತ ನಾನು ವಿದೇಶಕ್ಕೆ ಹೊರಟಿದ್ದೇನೆ. ವಾಪಸ್‌ ಬರುವುದಕ್ಕೆ ತಡವಾಗುತ್ತಿದೆ. ಹಾಗಾಗಿ ಆಡಿಯೋ ಲಾಂಚ್‌ ಮುಗಿಸಿಬಿಡೋಣ ಅಂತ ಚಿತ್ರತಂಡ ಈ ಕಾರ್ಯಕ್ರಮ ಆಯೋಸಿದೆ. ಆದರೂ ನನಗೆ ಉತ್ತರ ಕರ್ನಾಟಕದ ಜನರ ಪರಿಸ್ಥಿತಿ ನೋವು ತರಿಸಿದೆ. ಬೆಳಗಾವಿಗೆ ಹೋಗೋಣ ಅಂತ ಮೂರು ದಿನಗಳ ಹಿಂದೆಯೇ ಪ್ಲ್ಯಾನ್‌ ಮಾಡಿಕೊಂಡಿದ್ದೆ. ಆದರೆ ನನ್ನ ಪೋಷಕರು ಇಲ್ಲಿಗೆ ಬರುವುದು ಕಷ್ಟ, ರಸ್ತೆಗಳೆಲ್ಲ ಹಾಳಾಗಿವೆ ಅಂತೆಲ್ಲ ಹೇಳಿದ್ದರಿಂದ ಅಲ್ಲಿಗೆ ಪ್ರಯಾಣಿಸುವ ಪ್ರಯತ್ನ ಮಾಡಿಲ್ಲ. ಆದರೂ, ಪರಿಚಯಸ್ಥರ ಮೂಲಕ ಅಲ್ಲಿನ ನೆರೆ ಸಂತ್ರಸ್ಥರ ಪರಿಹಾರಕ್ಕೆ ನನ್ನಿಂದಾದ ಸಹಾಯ ಮಾಡಿದ್ದೇನೆ’ ಎಂದರು.