ಪ್ರತಿ ವರ್ಷ ಅವರು ಅನಾಥಾಶ್ರಮ ಅಥವಾ ವಿಕಲಚೇತನ ಶಾಲೆಯ ಮಕ್ಕಳೊಂದಿಗೆ ಕೇಕ್‌ ಕತ್ತರಿಸಿ, ಸಿಹಿ ಹಂಚಿ ಹುಟ್ಟುಹಬ್ಬ ಆಚರಿಸಿಕೊಂಡು ಬರುತ್ತಾರೆ. ಈ ಬಾರಿ ಅವರು ಬೆಂಗಳೂರಿನ ಮಗ್ರಾತ್‌ ರಸ್ತೆಯಲ್ಲಿರುವ ‘ನೋ ಲಿಮಿಟ್ಸ್‌ ಲಾಂಚ್‌ ಕ್ಲಬ್‌’ನಲ್ಲಿ ಸಮರ್ಥನಂ ವಿಕಲಚೇತನ ಶಾಲೆಯ ಸರಿ ಸುಮಾರು 85ಕ್ಕೂ ಹೆಚ್ಚು ಮಕ್ಕಳೊಂದಿಗೆ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಕುಟುಂಬದವರು ಸೇರಿ, ಚಿತ್ರರಂಗದ ಹಲವರು ಇದಕ್ಕೆ ಸಾಥ್‌ ನೀಡಿ, ಹರ್ಷಿಕಾ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.

‘ಪ್ರತಿ ವರ್ಷ ವಿಕಲಚೇತನ ಮಕ್ಕಳ ಶಾಲೆಗಳಿಗೆ ಹೋಗಿ, ಇಲ್ಲವೇ ಮನೆಯಲ್ಲೇ ಆ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಮಾಮೂಲು ಆಗಿತ್ತು. ಈ ಬಾರಿ ಕೊಂಚ ವಿಭಿನ್ನವಾಗಿರಲಿ ಎನ್ನುವುದರ ಜತೆಗೆ ಮಕ್ಕಳಿಗೂ ಹೊಸದೊಂದು ವಾತಾವರಣ ಅನುಭವ ಆಗಲಿ ಅಂತ ನೋ ಮಿಲಿಟ್ಸ್‌ ಲಾಂಚ್‌ ಕ್ಲಬ್‌ನಲ್ಲಿ ಬರ್ತಡೇ ಸೆಲೆಬ್ರೆಷನ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಲ್ಲಿಗೆ 85ಕ್ಕೂ ಹೆಚ್ಚು ಮಕ್ಕಳು ಬಂದಿದ್ದರು. ಅಂಧರು, ವಿಕಲಚೇತನರು, ಬುದ್ಧಿಮಾಂಧ್ಯ ಮಕ್ಕಳು ಕೂಡ ಅದರಲ್ಲಿದ್ದರು. ಹೆಚ್ಚು ಕಡಿಮೆ ಅರ್ಧ ದಿನ ಅವರೊಂದಿಗೆ ಅಲ್ಲಿದ್ದು, ಬತ್‌ಡೇ ಸೆಲೆಬ್ರೇಷನ್‌ ಮಾಡಿ ಬಂದೆ. ಒಂಥರ ನೆಮ್ಮದಿ ಸಿಕ್ಕಂತಾಯಿತು. ಅಷ್ಟುಮಕ್ಕಳು ಖುಷಿ, ಖುಷಿಯಾಗಿ ಕಳೆದರು. ಸಿಹಿ ತಿಂದು, ಊಟ ಮಾಡಿ ಸಂತೋಷ ಪಟ್ಟರು. ಆ ರೀತಿ ಅನುಭವ ಮರೆಯಲಾಗದ್ದು’ ಎಂದು ನಟಿ ಹರ್ಷಿಕಾ ಹುಟ್ಟುಹಬ್ಬದ ಆಚರಣೆಯ ಅನುಭವ ಹಂಚಿಕೊಂಡರು.

ಹರ್ಷಿಕಾ ಹೊಸ ಬಾಂಬ್ : ನನಗೂ #MeToo ಅನುಭವ

ಹರ್ಷಿಕಾ ಪೂಣಚ್ಚ ಚಿತ್ರರಂಗಕ್ಕೆ ಬಂದು ಹತ್ತು ವರ್ಷ ಆಗಿದೆ. ಹಲವಾರು ಸಿನಿಮಾ, ಹತ್ತಾರು ಬಗೆಯ ಪಾತ್ರಗಳ ಮೂಲಕ ಮನೋಜ್ಞ ಅಭಿನಯ ನೀಡಿ ಮನೆ ಮಾತಾಗಿದ್ದಾರೆ. ನಟನೆಯ ಜತೆಗೆಯೇ ಸಾಮಾಜಿಕ ಕಾಳಜಿ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡು ಸಮಾಜದ ಗಮನ ಸೆಳೆದಿದ್ದಾರೆ. ಈ ಜರ್ನಿಯ ಬಗೆಗೆ ಹರ್ಷಿಕಾ ತೃಪ್ತ ಭಾವದಲ್ಲಿ ಮಾತನಾಡುತ್ತಾರೆ.

ಹಾಗೆಯೇ ಮೊನ್ನೆ ಅವರು ದುಬೈಗೆ ಹೋಗಿ ಬಂದಿದ್ದರ ಕಾರಣವೂ ಈಗ ಗೊತ್ತಾಗಿದೆ. ಅಲ್ಲಿನ ಕನ್ನಡ ಮಿತ್ರ ಕೂಟ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹರ್ಷಿಕಾ ಮುಖ್ಯ ಅತಿಥಿ ಆಗಿದ್ದರು. ಅಲ್ಲಿ ಹರ್ಷಿಕಾ ಅವರಿಗೆ ಸ್ಯಾಂಡಲ್‌ವುಡ್‌ ಸ್ಮೈಲಿಂಗ್‌ ಕ್ವೀನ್‌ ಬಿರುದು ನೀಡಿ ಗೌರವಿಸಲಾಗಿದೆ. ಮಿಲ್ಕಿ ಬ್ಯೂಟಿ ಹರ್ಷಿಕಾ ಈಗ ಸ್ಯಾಂಡಲ್‌ವುಡ್‌ ಸ್ಮೈಲಿಂಗ್‌ ಕ್ವೀನ್‌.

ಹರ್ಷಿಕಾ ಪೂಣಚ್ಚ ಹೇಳಿದ್ದು

1. ಚಿತ್ರರಂಗಕ್ಕೆ ಬಂದು ಹತ್ತು ವರ್ಷವಾಯಿತು ಅಂದಾಗ ಎಲ್ಲರೂ ನೀವು ಗಳಿಸಿದ್ದೆಷ್ಟು, ಕಳೆದು ಕೊಂಡಿದ್ದೆಷ್ಟುಅಂತ ಕೇಳುತ್ತಾರೆ. ನನ್ನ ಪ್ರಕಾರ ನಾನು ಇಲ್ಲಿ ಕಳೆದು ಕೊಂಡಿದ್ದಕ್ಕಿಂತ ಪಡೆದುಕೊಂಡಿದ್ದೇ ಹೆಚ್ಚು. ಹೆಸರು, ಸಂಪಾದನೆ ಎಲ್ಲವೂ ಇಲ್ಲಿಂದಲೇ ಸಿಕ್ಕಿದೆ. ಎಲ್ಲಿಗೆ ಹೋದರು ಜನ ನನ್ನನ್ನು ಗುರುತಿಸುತ್ತಾರೆ. ಇಂತಹ ಸಿನಿಮಾದ ನಟಿ ಎನ್ನುವುದಕ್ಕಿಂತ ಹರ್ಷಿಕಾ ಪೂಣಚ್ಚ ಎಂದು ಗುರುತಿಸುತ್ತಾರೆ. ಇಂತಹ ಸೌಭಾಗ್ಯಕ್ಕಿಂತ ನನಗೆ ಇನ್ನೇನು ಬೇಕು.

2. ರಾಜಕುಮಾರ್‌ ಅವರ ಸಿನಿಮಾಗಳಲ್ಲಿನ ನಾಯಕಿ ಥರದ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಆಸೆಯಿದೆ. ಆ ಸಮಯ ಯಾವಾಗ ಕೂಡಿ ಬರುತ್ತದೆಯೋ ಗೊತ್ತಿಲ್ಲ. ಆ ಘಳಿಗೆಗಾಗಿ ಕಾಯುತ್ತಿದ್ದೇನೆ.