ಒಳ್ಳೆಯ ಪಾತ್ರಗಳೇ ನನ್ನ ಆದ್ಯತೆ ಎಂದ ಆವಂತಿಕಾ ಶೆಟ್ಟಿ

First Published 12, Jan 2018, 10:57 AM IST
Actress Avantika Shetty talk with Kannada Prabha
Highlights

ಕರಾವಳಿ ಚೆಲುವೆ ನಟಿ ಆವಂತಿಕಾ ಶೆಟ್ಟಿ ಕನ್ನಡಕ್ಕೆ ಪರಿಚಯವಾಗಿದ್ದು ‘ರಂಗಿತರಂಗ ’ಚಿತ್ರದ ಮೂಲಕ. ಆದಾದ ನಂತರ  ‘ಕಲ್ಪನಾ 2’ ಬಂದು ಹೋಯಿತು. ಈಗ ‘ರಾಜು ಕನ್ನಡ ಮೀಡಿಯಂ’ ರಿಲೀಸ್‌ಗೆ ರೆಡಿಯಾಗಿದೆ. ಮತ್ತೊಂದೆಡೆ ‘ರಾಜರಥ’ ದೊಡ್ಡ ಹವಾ ಸೃಷ್ಟಿಸಿದೆ. ಈ ಜರ್ನಿಯ ಕುರಿತು ಅವರಿಲ್ಲಿ ಮಾತನಾಡಿದ್ದಾರೆ.

ಕರಾವಳಿ ಚೆಲುವೆ ನಟಿ ಆವಂತಿಕಾ ಶೆಟ್ಟಿ ಕನ್ನಡಕ್ಕೆ ಪರಿಚಯವಾಗಿದ್ದು ‘ರಂಗಿತರಂಗ ’ಚಿತ್ರದ ಮೂಲಕ. ಆದಾದ ನಂತರ  ‘ಕಲ್ಪನಾ 2’ ಬಂದು ಹೋಯಿತು. ಈಗ ‘ರಾಜು ಕನ್ನಡ ಮೀಡಿಯಂ’ ರಿಲೀಸ್‌ಗೆ ರೆಡಿಯಾಗಿದೆ. ಮತ್ತೊಂದೆಡೆ ‘ರಾಜರಥ’ ದೊಡ್ಡ ಹವಾ ಸೃಷ್ಟಿಸಿದೆ. ಈ ಜರ್ನಿಯ ಕುರಿತು ಅವರಿಲ್ಲಿ ಮಾತನಾಡಿದ್ದಾರೆ.

ಆವಂತಿಕಾ ಶೆಟ್ಟಿ ಕನ್ನಡದವ್ರಾ?

(ನಗು) ನೋ ಡೌಟ್. ಆದ್ರೂ ಈ ಪ್ರಶ್ನೆ ಯಾಕೆ ಅಂತ. ಬಹುಶಃ ನಾನಿರೋದು ಮುಂಬೈ ಅನ್ನೋ ಕಾರಣಕ್ಕೆ ಕೆಲವರಿಗೆ ಈ ಅನುಮಾನ ಇರಬಹುದು. ಆದ್ರೆ, ನಾನು ಶುದ್ಧ ಕನ್ನಡತಿ. ಮಂಗಳೂರು ಹುಡುಗಿ.

ಅದು ಸರಿ,‘ರಂಗಿತರಂಗ’ದ ಮೂಲಕ ನೀವು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆಗಿದ್ದು ಹೇಗೆ?

ಕುತೂಹಲ ಅಂದ್ರೆ, ಅದು ಅಮೆರಿಕದಿಂದ  ಶುರುವಾದ ನಂಟು. ಸಹೋದರ ಸಂಬಂಧಿಯೊಬ್ಬರು ಅಮೆರಿಕದಲ್ಲಿದ್ದರು. ಅವರಿಗೆ ಅಲ್ಲಿ ನಿರ್ದೇಶಕ ಅನೂಪ್ ಪರಿಚಯವಿತ್ತು. ಇಬ್ಬರೂ ಒಮ್ಮೆ ಭೇಟಿ ಆದಾಗ ‘ರಂಗಿತರಂಗ’ ಚಿತ್ರದ ವಿಷಯ ಪ್ರಸ್ತಾಪವಾಗಿತ್ತಂತೆ. ಆ ಟೈಮ್'ನಲ್ಲಿ ಅವರು ಅನೂಪ್‌ಗೆ ನನ್ನ ವಿಷಯ ತಿಳಿಸಿದ್ದರು. ಆ ಹೊತ್ತಿಗೆ ನನಗೂ ನಟಿಯಾಗಿ ಕನ್ನಡಕ್ಕೆ ಬರುವ ಆಸಕ್ತಿಯಿತ್ತು. ಅದೃಷ್ಟ ಎನ್ನುವ ಹಾಗೆ ಅದಕ್ಕೆ ಕಾಲ ಕೂಡಿಬಂತು. ನಿರ್ದೇಶಕ ಅನೂಪ್ ಆಡಿಷನ್‌ಗೆ ಬರುವಂತೆ ಹೇಳಿದ್ರು. ಒಂದಷ್ಟು ದಿನ ಕಳೆಯುವ ಹೊತ್ತಿಗೆ ಆಡಿಷನ್ ಮುಗಿಯಿತು. ಸಿನಿಮಾಕ್ಕೂ ಸೆಲೆಕ್ಟ್ ಆದೆ.

ಆ ಸಮಯಕ್ಕೆ ನಿಮಗಿದ್ದ ಆ್ಯಕ್ಟಿಂಗ್ ಅನುಭವ ಏನು?

ಆಗಲೇ ಒಂದಷ್ಟು ಆ್ಯಡ್ ಫಿಲ್ಮ್‌ಗಳಲ್ಲಿ ಕಾಣಿಸಿಕೊಂಡಿದ್ದೆ. ಆ್ಯಕ್ಟಿಂಗ್ ಟ್ರೈನಿಂಗ್ ಕೂಡ ಕಂಪ್ಲೀಟ್ ಆಗಿತ್ತು. ಆದ್ರೆ, ಮನೆಯವರಿಗೆ ನಾನು ಸಿನಿಮಾ ಜಗತ್ತಿಗೆ ಬರುವುದು ಇಷ್ಟ ಇರಲಿಲ್ಲ. ಆದ್ರೂ, ಅದು ನನ್ನಿಷ್ಟದ ಕ್ಷೇತ್ರ. ಕಾಕತಾಳೀಯ ಎನ್ನುವ ಹಾಗೆ ಅನೂಪ್ ತಮ್ಮ ಮೊದಲ ಸಿನಿಮಾಕ್ಕೆ ನನ್ನನ್ನೇ ನಾಯಕಿಯಾಗಿ ಸೆಲೆಕ್ಟ್ ಮಾಡಿಕೊಂಡಿದ್ದರು. ಆಡಿಷನ್‌'ಗೆ ಬಂದಾಗ ನನ್ನ ವೇಷ-ಭೂಷಣ ಅಷ್ಟಾಗಿ ಗ್ಲಾಮರಸ್ ಆಗಿರಲಿಲ್ಲ. ಹೇಗೋ ಏನೋ ಎನ್ನುವ ಅನುಮಾನ ಇತ್ತು. ಆದ್ರೆ ಅವತ್ತು ಅನೂಪ್ ನನ್ನ ಲುಕ್‌'ಗಿಂತ  ಪರ್‌'ಫಾರ್ಮೆನ್ಸ್ ನೋಡಿ ಸೆಲೆಕ್ಟ್ ಮಾಡಿಕೊಂಡಿದ್ದರಂತೆ. ಆನಂತರದ ದಿನಗಳಲ್ಲಿ ಅವರು ಅದನ್ನು ಹೇಳಿದ್ದರು.

‘ರಂಗಿತರಂಗ’ ಚಿತ್ರದ ನಂತರ ನಿಮಗೆ ಕನ್ನಡದಿಂದ ಬಂದ ಸಿನಿಮಾಗಳ ಆಫರ್ ಎಷ್ಟು?

ಖಚಿತವಾಗಿ ಇಷ್ಟೇ ಅಂತ ಗೊತ್ತಿಲ್ಲ. ಆದ್ರೆ, ಸಾಕಷ್ಟು ಮಂದಿ ಸಂಪರ್ಕ ಮಾಡಿದರು. ಸ್ಟಾರ್ ಸಿನಿಮಾಗಳೂ ಬಂದವು. ಒಂದಷ್ಟು ಕತೆ ಕೇಳಿದೆ. ಆದ್ರೆ ಆ ಟೈಮ್ನ್‌ಲ್ಲಿ ನಾನು ಯಾವುದನ್ನು ಒಪ್ಪಿಕೊಳ್ಳಲಿಲ್ಲ. ಹಾಗಂತ, ಅವ್ಯಾವು ಇಷ್ಟ ಆಗಲಿಲ್ಲ ಅಂತಲ್ಲ. ಒಂದಷ್ಟು ದಿನ ನಾನು ಫಾರಿನ್‌ಗೆ ಹೊರಟಿದ್ದೆ. ಹಾಗಾಗಿ ಕಾಲ್‌'ಶೀಟ್ ನೀಡುವ ಹಾಗಿರಲಿಲ್ಲ. ಅಲ್ಲಿಂದ ಬಂದಾಗ ಅನೂಪ್ ಹೊಸ ಸಿನಿಮಾ ‘ರಾಜರಥ’ದ ಸಿದ್ಧತೆ ನಡೆದಿತ್ತು. ಅದರಲ್ಲಿ ಬ್ಯುಸಿ ಆದೆ. ಆ ಹೊತ್ತಿಗೆ ನಾನೇ ಆ ಸಿನಿಮಾದ ನಾಯಕಿ ಅಂತ ಗೊತ್ತಿರಲಿಲ್ಲ. ಅನೂಪ್ ಕೂಡ ನಂಗೆ ಹೇಳಿರಲಿಲ್ಲ. ನಾನೂ ಅದರ ಭಾಗವಾದ್ರೆ ಸಾಕು ಎನ್ನುವುದಷ್ಟೆ ನನ್ನ ಆಲೋಚನೆ. ಅದಕ್ಕಾಗಿ ಮುಂಬೈ ಟು ಬೆಂಗಳೂರು ಓಡಾಡುತ್ತಲೇ ಇದ್ದೆ. ಈ  ಓಡಾಟದ ನಡುವೆ ‘ಕಲ್ಪನಾ 2’ ಆಫರ್ ಬಂತು. ಆಮೇಲೆ ‘ರಾಜು ಕನ್ನಡ ಮೀಡಿಯಂ’ ಅವಕಾಶ ಬಂತು. ಅವರೆಡನ್ನು ಮುಗಿಸುವ ಹೊತ್ತಿಗೆ ‘ರಾಜರಥ’ ಸೆಟ್ಟೇರಿತು.

‘ರಂಗಿತರಂಗ’ ಚಿತ್ರಕ್ಕಿಂತ ‘ರಾಜರಥ’ ಹೇಗೆ ಭಿನ್ನ?

ತುಂಬಾನೆ ಡಿಫೆರೆನ್ಸ್ ಇದೆ. ಇದೊಂದು ಹೊಸ ಬಗೆಯ ಕತೆ. ಅದರ ನಿರೂಪಣೆಯೇ ಅದ್ಭುತವಾಗಿದೆ. ನಾನು ನೋಡಿದ ಹಾಗೆ, ಅನೂಪ್ ಶುದ್ಧ ವೃತ್ತಿಪರ ನಿರ್ದೇಶಕ. ಮೊದಲ ಸಿನಿಮಾದ ಛಾಯೆ ಕಿಂಚಿತ್ತು ಕಾಣದ ಹಾಗೆ ಈ ಸಿನಿಮಾ ನಿರ್ದೇಶಿಸಿದ್ದಾರೆ. ಜತೆಗೆ, ಇದೊಂದು ಅದ್ಧೂರಿ ಮೇಕಿಂಗ್ ಸಿನಿಮಾ. ಹಾಲಿವುಡ್ ತಂತ್ರಜ್ಞರೇ ಇದರ ಟೆಕ್ನಿಕಲ್ ವರ್ಕ್ ಮಾಡಿದ್ದು. ತಾರಾಗಣದಲ್ಲೂ ವಿಶೇಷತೆಯಿದೆ. ನಿರೂಪ್, ಆರ್ಯ, ರವಿಶಂಕರ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಕಾಲಿವುಡ್ ನಟ ಆರ್ಯ ಇದೇ ಮೊದಲು ಕನ್ನಡಕ್ಕೆ ಬಂದಿದ್ದಾರೆ. ವಿಲನ್ ರವಿಶಂಕರ್ ಸರ್, ಇಲ್ಲಿ ಹೊಸ ಬಗೆಯ ಪಾತ್ರ ನಿರ್ವಹಿಸಿದ್ದಾರೆ. ಹಾಗೆಯೇ ಈ ಚಿತ್ರ ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲೂ ನಿರ್ಮಾಣವಾಗಿದೆ.ಕತೆಗೆ ತಕ್ಕಂತೆ ನಿರ್ಮಾಪಕರು ಬಂಡವಾಳ ಹಾಕಿದ್ದಾರೆ. ಅನೂಪ್ ಸಂಗೀತದ ಜತೆಗೆ ಅಪ್ಪು ಸರ್ ನಿರೂಪಣೆ ಈ ಚಿತ್ರದ ಹೈಲೆಟ್. ಇದರ ವಿಭಿನ್ನತೆಗೆ ಇಷ್ಟು ಸಾಕು.

ನಿಮ್ಮ ಪಾತ್ರದ ಬಗ್ಗೆ ಹೇಳೋದಾದ್ರೆ...

ಕತೆ ಮತ್ತು ಪಾತ್ರ ಎರಡು ಸೀಕ್ರೆಟ್. ಯಾಕಂದ್ರೆ, ನಿರ್ದೇಶಕರೇ ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ. ಕುತೂಹಲಕ್ಕೆ ಹೇಳೋದಾದ್ರೆ, ನಾನಿಲ್ಲಿ ಕಾಲೇಜು ವಿದ್ಯಾರ್ಥಿನಿ. ಹೆಸರು ಮೇಘಾ. ಈ ಕಾಲದ ಹುಡುಗಿ. ಮಾಡ್ರನ್ ಚೆಲುವೆ. ವಿಶೇಷ ಅಂದ್ರೆ, ಈಕೆ ನನ್ನ ನಿಜ ಜೀವನಕ್ಕೆ ವಿರುದ್ಧವಾದ ಹುಡುಗಿ. ಆಕೆಯ ಸ್ವಭಾವ, ಚಿಂತನೆ ಯಾವುದು ನನಗೆ ಕನೆಕ್ಟ್ ಆಗುವುದಿಲ್ಲ. ಹಾಗಾಗಿ ಅಭಿನಯಕ್ಕೆ ಸವಾಲಾಗಿದ್ದ ಪಾತ್ರ ಅದು. ಅದರಲ್ಲೇ ಒಂಥರ ಥ್ರಿಲ್ ಇತ್ತು

‘ರಾಜರಥ’ದ ಮೂಲಕ ಟಾಲಿವುಡ್‌ಗೂ ಕಾಲಿಡುತ್ತಿರುವ ಖುಷಿ ಹೇಗಿದೆ?

ತುಂಬಾ ಖುಷಿಯಿದೆ. ತೆಲುಗು ಆಡಿಯನ್ಸ್ ಹೇಗೆ  ಸ್ವೀಕರಿಸುತ್ತಾರೆನ್ನುವ ಕಾರಣಕ್ಕೆ ಎಕ್ಸೈಟ್ ಆಗಿದ್ದೇನೆ. ನನಗೆ ತೆಲುಗು ಬರೋದಿಲ್ಲ. ಹೇಳಿಕೊಟ್ಟರು ಮಾತನಾಡುವುದಕ್ಕೆ ಕಷ್ಟ. ಆದ್ರೂ ಅಲ್ಲಿ ನಾನೇ ಡಬ್ ಮಾಡಿದ್ದೇನೆ. ಟೀಚರ್ ಮೂಲಕ ಒಂದಷ್ಟು ದಿನ ತೆಲುಗು ಪ್ರಾಕ್ಟಿಸ್ ಮಾಡಿಕೊಂಡ ನಂತರ ಡಬ್ಬಿಂಗ್ ಮುಗಿಸಿದೆ. ಅದಕ್ಕೆ ಅವಕಾಶ ಕೊಟ್ಟಿದ್ದು ನಿರ್ದೇಶಕ ಅನೂಪ್. ಈ ಕ್ರೆಡಿಟ್ ಅವರಿಗೆ ಸಲ್ಲುತ್ತದೆ.

ಚಿತ್ರೀಕರಣದ ಅನುಭವ ಹೇಗಿತ್ತು?

ಮೈಸೂರು, ಊಟಿ, ಪುಣೆ , ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಣಕ್ಕಾಗಿ ಸುತ್ತು ಹಾಕಿ ಬಂದಿದ್ದೇವೆ. ಇದರಲ್ಲಿ ನಮಗೆ ಚಾಲೆಂಜ್ ಅಂತ ಎನಿಸಿದ್ದು ಊಟಿ ಮತ್ತು ಪುಣೆಯ ವಿವಿಧೆಡೆ ನಡೆದ  ಚಿತ್ರೀಕರಣ. ಊಟಿ ಚಳಿಗೆ ಗಡ ಗಡ ನಡುಗಿದ್ದೇವೆ. ಪುಣೆ ಹತ್ತಿರದ ಒಂದು ಫಾಲ್ಸ್ ಬಳಿ ಶೂಟಿಂಗ್ ನಡೆಯುತ್ತಿದ್ದಾಗ ನಿರೂಪ್ ನೀರಿನಲ್ಲಿ ಜಾರಿ ಬಿದ್ದು, ಗಾಯಗೊಂಡರು. ಆ ಕಾರಣಕ್ಕೆ ಒಂದೆರೆಡು ದಿವಸ ಶೂಟಿಂಗ್ ಸ್ಟಾಪ್ ಆಯಿತು. ಚಿತ್ರ ಸೊಗಸಾಗಿ ಬರಬೇಕು ಅನ್ನೋ ಕಾರಣಕ್ಕೆ ಅದೆಲ್ಲ ವನ್ನು ಲೆಕ್ಕಿಸದೆ ಅನೂಪ್ ಚಿತ್ರೀಕರಣ ಮುಗಿಸಿದರು. ಆ ಟೈಮ್ನ್‌ಲ್ಲಿ  ಅದು ನಮಗೆ ಕಷ್ಟ ಅಂತ ಎನ್ನಿಸಿದ್ದರೂ, ಈಗ ತೆರೆ ಮೇಲೆ ಆ ದೃಶ್ಯಗಳನ್ನು ನೋಡಿದಾಗ ಖುಷಿ ಆಗುತ್ತಿದೆ. ಎಷ್ಟು ಸುಂದರವಾದ ಲೋಕೆಷನ್ ಅಂತ ನಾವೇ ಅಚ್ಚರಿಯಾಗುವ ಹಾಗಿದೆ ದೃಶ್ಯರೂಪ.

ನಿರೂಪ್, ಆರ್ಯ, ರವಿಶಂಕರ್ ಕಾಂಬಿನೇಷನಲ್ಲಿ ನಟಿಸಿದ ಅನುಭವದ ಬಗ್ಗೆ ಹೇಳಿ...

ನಿರೂಪ್ ಜತೆಗೆ ಇದು ಎರಡನೇ ಸಿನಿಮಾ. ಅವರು ಯಾವಾಗಲೂ ಕಂಫರ್ಟ್ ಕೋ ಸ್ಟಾರ್. ಅದು ಬಿಟ್ಟರೆ ಕಾಲಿವುಡ್ ನಟ ಆರ್ಯ ಜತೆಗೆ ನನಗೆ ಇದಿದ್ದು ತುಂಬಾನೆ ಕಮ್ಮಿ ಸೀನ್. ಆದ್ರೆ ಸೆಟ್‌ನಲ್ಲಿದ್ದಾಗ ಅವರ ಜತೆ ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡಿದ್ದೇನೆ. ಅವರು ತುಂಬಾನೆ ಫ್ರೆಂಡ್ಲಿ ಆಗಿರುತ್ತಿದ್ದರು. ಯಾವುದೇ ಡೌಟ್ ಕೇಳಿದ್ರೂ ತಾಳ್ಮೆಯಿಂದಲೇ ಉತ್ತರಿಸುತ್ತಿದ್ದರು. ರವಿಶಂಕರ್ ಸರ್ ನನ್ನ ನೆಟ್ಟಿನ ನಟ. ಆದ್ರೆ, ಅವರು ಎದುರಿಗೆ ಬಂದಾಗ ಭಯ ಪಟ್ಟಿದ್ದು ಇದೆ. ಯಾಕಂದ್ರೆ, ಒಂದೆರೆಡು ಸಿನಿಮಾಗಳಲ್ಲಿ ಅವರನ್ನು ನೆಗೆಟಿವ್  ರೋಲ್‌ನಲ್ಲಿ ನೋಡಿದ್ದೆ. ಅದೇ ಕಣ್ಮುಂದೆ ಬರುತ್ತಿತ್ತು. ದಿನ ಕಳೆದಂತೆ ಅವರು ಹತ್ತಿರವಾದರು. ಅವರ ಮಾನವೀಯ ಮುಖ ಆಗ ತಿಳಿಯಿತು. ಅವರ ಜತೆಗೆ ಅಭಿನಯಿಸಿದ್ದು ಒಂದು ಅದ್ಭುತ  ಅನುಭವವೇ ಹೌದು. ಈಗ ರಿಲೀಸ್‌ಗೆ ರೆಡಿ ಆಗಿರುವ ‘ರಾಜು ಕನ್ನಡ  ಮೀಡಿಯಂ’ ಚಿತ್ರದ ಬಗ್ಗೆ ಹೇಳೋದಾದ್ರೆ.. ಅಲ್ಲೂ ನಾನು ಸ್ಟೂಡೆಂಟ್. ಅಲ್ಲಿನ ಕಾಸ್ಟ್ಯೂಮ್ ಹೈಸ್ಕೂಲ್ ದಿನಗಳನ್ನು ನೆನಪಿಸುತ್ತದೆ. ಆದ್ರೆ, ಚಿತ್ರದಲ್ಲೀಗ ನನ್ನ ಪಾತ್ರಕ್ಕೆ ಎಷ್ಟು ಆದ್ಯತೆ ಸಿಕ್ಕಿದೆ, ಹೇಗೆಲ್ಲ ತೆರೆ ಮೇಲೆ ಬಂದಿದೆ ಅನ್ನೋದು ಗೊತ್ತಿಲ್ಲ. ಜತೆಗೆ ಆ ಪಾತ್ರಕ್ಕೆ ವಾಯ್ಸ್ ಡಬ್ಬಿಂಗ್ ನಾನು ಮಾಡಿಲ್ಲ. ಅದ್ಯಾಕೆ ಅಂತ ನಿಮ್ಗೆಲ್ಲ ಗೊತ್ತಿದೆ. ಆದರೂ ಪಾತ್ರ ಚೆನ್ನಾಗಿ ಬಂದಿದೆ ಎನ್ನುವ ಖುಷಿಯಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಅಂತ  ಬಯಸುತ್ತೇನೆ.

-ದೇಶಾದ್ರಿ ಹೊಸ್ಮನೆ

loader