ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿದ ಮಿ.ಆ್ಯಂಡ್ ಮಿಸಸ್ ರಂಗೇಗೌಡ ಧಾರವಾಹಿ ಖ್ಯಾತಿಯ ರಘು ಹಾಗೂ ಅಮೃತಾ ಸಪ್ತಪದಿ ತುಳಿಯಲು ನಿರ್ಧರಿಸಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ನಮ್ಮನೆ ಯುವರಾಣಿ' ಧಾರವಾಹಿ ನಟ ಸಾಕೇತ್ ಅಲಿಯಾಸ್ ರಘುವಿಗೆ ನೈಜ ಜೀವನದಲ್ಲಿ ಯುವರಾಣಿಯಾಗುತ್ತಿದ್ದಾರೆ 'ಕುಲವಧು' ಖ್ಯಾತಿಯ ವಚನಾ ಅಲಿಯಾಸ್ ಅಮೃತಾ ರಾಮೂರ್ತಿ.

ಮಿ. ಆ್ಯಂಡ್ ರಂಗೇಗೌಡ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಈ ಜೋಡಿ ನಿಜ ಜೀವನದಲ್ಲಿಯೂ ಒಂದಾಗುತ್ತಿದ್ದಾರೆ. ಕೆಲವು ತಿಂಗಳ ಹಿಂದೆ 'ಕುಲವಧು' ಧಾರಾವಾಹಿ ತಂಡದಿಂದ ಲಾಂಚ್‌ ಆದ 'ನಮ್ಮನೆ ಯುವರಾಣಿ' ಸೀರಿಯಲ್‌ನಲ್ಲಿಯೂ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿತ್ತು.

ಮುದ್ದು ಮುಖದ ಆಮೃತಾ ಧಾರವಾಹಿಗಳಲ್ಲಿ ಹೆಸರು ಮಾಡಿದ್ದಲ್ಲದೇ, ಸಿನಿಮಾ ಕ್ಷೇತ್ರದಲ್ಲಿಯೂ ಈಗಾಗಲೇ ತಮ್ಮ ಕಮಾಲ್ ತೋರಿಸಿದ್ದು, 'H/34 ಪಲ್ಲವಿ ಟಾಕಿಸ್' ಹಾಗೂ 'ಸೈಕೋ ಶಂಕ್ರ'ದಲ್ಲಿಯೂ ಅಭಿನಯಿಸಿದ್ದಾರೆ.

ಮಾರ್ಚ್ 6 ರಂದು ಹುಟ್ಟು ಹಬ್ಬ ಆಚರಿಸಿಕೊಂಡ ಅಮೃತಾ ಬರ್ತ್ ಡೇ ಪೋಸ್ಟಿನಲ್ಲಿ 'ವಾಡ್ರೋಬ್ ಐಡಿಯಾ' ಎಂದು ಧರಿಸಿರುವ ಉಡುಪಿಗೆ ಐಡಿಯಾ ಕೊಟ್ಟ ರಘು ಅವರಿಗೆ ಥ್ಯಾಂಕ್ಸ್ ಹೇಳಿದ್ದರು. ಆಗಲೇ ಈ ಇಬ್ಬರ ನಡುವೆ ಕುಚು ಕುಚು ನಡೆಯುತ್ತಿದೆ ಎಂಬ ಗಾಸಿಪ್ ಕೇಳಿ ಬಂದಿತ್ತು.

ಮದ್ವೆ ಬಗ್ಗೆ ಅಮೃತಾ ಹೇಳುವುದೇನು?

ಇದೀಗ ರಘು ತಮ್ಮ ಫೇಸ್‌ಬುಕ್ ಪೋಸ್ಟಿನಲ್ಲಿ 'ಇಟ್ಸ್ ಅಫಿಷಿಯಲ್. ನಿಜ ಜೀವನದಲ್ಲೂ ಮಿ. ಆ್ಯಂಡ್ ಮಿಸಸ್ ರಂಗೇಗೌಡ... ಜೀವನದ ಮೌಲ್ಯದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ವಂಡರ್‌ಫುಲ್ ಹುಡುಗಿ ನನಗೆ ಸಿಕ್ಕಿದ್ದಾಳೆ. ಥ್ಯಾಂಕ್ಸ್ ನನ್ನ ಜೀವನದಲ್ಲಿ ಬಂದಿದ್ದಕ್ಕೆ. ಇನ್ನು ನಾನೇ ಸ್ಟ್ರಾಂಗೆಸ್ಟ್' ಎಂದು ಬರೆದು ಕೊಂಡಿದ್ದಾರೆ. ಆ ಮೂಲಕ ಈ ಜೋಡಿ ಹಸೆಮಣೆ ಏರುತ್ತಿರುವುದನ್ನು ಕನ್ಫರ್ಮ್ ಮಾಡಿದೆ.