‘ಈಗ ಹಾಡು ಹಾಗೂ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ನೋಡುಗರಿಂದ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿವೆ. ಇದೇ ಉತ್ಸಾಹದಲ್ಲಿ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಲು ಹೊರಟಿದ್ದೇವೆ. ಉಪೇಂದ್ರ ಅವರ ಸಿನಿಮಾ ಎಂದರೆ ವಿತರಕರು ಕಾಯುತ್ತಿರುತ್ತಾರೆ. ಈ ಚಿತ್ರಕ್ಕೂ ಹಾಗೆ ಕಾಯುತ್ತಿದ್ದಾರೆ. ತೆಲುಗಿನಲ್ಲಿ ಸಾಕಷ್ಟುಬೇಡಿಕೆ ಇದೆ. ಕರ್ನಾಟಕದಲ್ಲಿ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಐಲವ್‌ಯು ಸಿನಿಮಾ ತೆರೆಗೆ ಬರುತ್ತಿದೆ. ಈ ಜನರೇಷನ್‌ನ ಪ್ರೀತಿ- ಪ್ರೇಮದ ಕತೆಯ ಮೂಲಕ ಯುವ ಜನಾಂಗದ ಹೊಸ ಕನಸುಗಳನ್ನು ತೆರೆದಿಡುವ ಸಿನಿಮಾ ಇದು. ಉಪೇಂದ್ರ ಅವರ ಅಭಿಮಾನಿಗಳಿಗೆ ಈ ಸಿನಿಮಾ ಖಂಡಿತ ಇಷ್ಟವಾಗುತ್ತದೆ’ ಎಂದರು ಆರ್‌ ಚಂದ್ರು.

ಮೊನ್ನೆಯಷ್ಟೆ ಟಾಲಿವುಡ್‌ನಲ್ಲೂ ಹೋಗಿ ಈ ಚಿತ್ರದ ಪ್ರಚಾರಕ್ಕೆ ಆರ್‌ ಚಂದ್ರು ಚಾಲನೆ ಕೊಟ್ಟಿದ್ದರು. ‘ಉಪೇಂದ್ರ’, ‘ಎ’ ಚಿತ್ರಗಳನ್ನು ನೋಡಿದವರಿಗೆ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಕ್ರೇಜ್‌ ಹುಟ್ಟಿಸುತ್ತದೆ. ಯಾಕೆಂದರೆ ಇದು ಉಪ್ಪಿ ಬ್ರೈನ್‌, ಆರ್‌ ಚಂದ್ರು ಕತೆ ಸೇರಿ ಹುಟ್ಟಿರುವ ಸಿನಿಮಾ ‘ಐ ಲವ್‌ಯು’ ಎಂಬುದು ಚಿತ್ರತಂಡದ ನಂಬಿಕೆ. ಚಿತ್ರದ ನಾಯಕ ಉಪೇಂದ್ರ ಸಾಕಷ್ಟುಭರವಸೆಯಲ್ಲೇ ಇದ್ದರು. ಅದಕ್ಕೆ ಕಾರಣ ನಿರ್ದೇಶಕ ಆರ್‌ ಚಂದ್ರು. ‘ಸಾಮಾನ್ಯವಾಗಿ ಸಿನಿಮಾ ಬಿಡುಗಡೆ ಎಂದರೆ ಒಂದಿಷ್ಟುಒತ್ತಡಗಳು ಬರುತ್ತವೆ. ಆದರೆ, ನನಗೆ ಈ ಸಿನಿಮಾದಲ್ಲಿ ಅಂಥದ್ದು ಯಾವುದೇ ಟೆನ್ಷನ್‌ ಇಲ್ಲ. ಯಾಕೆಂದರೆ ಇದು ಚಂದ್ರು ಸಿನಿಮಾ. ಒಂದು ಚಿತ್ರವನ್ನು ಹೇಗೆ ರೂಪಿಸಬೇಕು, ಜನರಿಗೆ ಅದನ್ನು ತಲುಪಿಸುವುದು ಹೇಗೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ನನ್ನದೇ ನಟನೆಯ ಸಿನಿಮಾ ಆಗಿದ್ದರೂ ನಾನು ಆರಾಮಗಿದ್ದೇನೆ’ ಎಂದರು ಉಪೇಂದ್ರ. ಚಿತ್ರದಲ್ಲಿ ಇಬ್ಬರು ನಾಯಕಿರು ಸೋನು ಗೌಡ ಹಾಗೂ ರಚಿತಾ ರಾಮ್‌. ಆದರೆ, ಇದುವರೆಗೂ ಸೋನು ಗೌಡ ಅವರ ಪಾತ್ರ ಎಲ್ಲೂ ಬಂದಿಲ್ಲ. ಅವರ ಗೆಟಪ್‌ಗಳನ್ನು ನಿರ್ದೇಶಕರು ಬಿಟ್ಟು ಕೊಟ್ಟಿಲ್ಲ. ಈ ಬಗ್ಗೆ ಸೋನು ಗೌಡ ಅವರಿಗೆ ಬೇಸರ ಇದ್ದರೂ ನಿರ್ದೇಶಕರು ತಮ್ಮ ಪಾತ್ರದ ಗುಟ್ಟು ಕಾಪಾಡಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಉಪೇಂದ್ರ ‘ಐ ಲವ್ ಯೂ’ ಚಿತ್ರದ ಹಾಡು ರಿಲೀಸ್!

‘ಈ ಚಿತ್ರದಲ್ಲಿ ನನ್ನ ಪಾತ್ರ ಹೇಗಿರುತ್ತದೆ ಎಂಬುದರ ಕುತೂಹಲ ನನಗೂ ಇದೆ. ಯಾಕೆಂದರೆ ನನ್ನ ಟ್ರೇಲರ್‌, ಪೋಸ್ಟರ್‌ಗಳಲ್ಲಿ ಇದುವರೆಗೂ ತೋರಿಸಿಲ್ಲ. ಆ ಕುತೂಹಲದಲ್ಲೇ ಸಿನಿಮಾ ನೋಡಲು ಕಾಯುತ್ತಿರುವೆ’ ಎಂಬುದು ಸೋನು ಗೌಡ ಅವರ ಮಾತು. ಇನ್ನೂ ಚಿತ್ರದ ಛಾಯಾಗ್ರಾಹಕ ಸುಜ್ಞಾನ್‌ ಅವರ ಪ್ರಕಾರ ಸಿನಿಮಾ ತಾಂತ್ರಿಕವಾಗಿ ತುಂಬಾ ಚೆನ್ನಾಗಿ ಬಂದಿದೆಯಂತೆ. ಆರ್‌ ಚಂದ್ರು ಅವರ ಗುರುಗಳಾದ ರಾಜೇಂದ್ರ, ಸ್ನೇಹಿತರಾದ ಡಾ ಮಂಜುನಾಥ್‌ ಚಿತ್ರದ ಕತೆ ಕೇಳಿ ಫಿದಾ ಆಗಿದ್ದನ್ನು ವೇದಿಕೆ ಮೇಲೆ ಬಂದು ಹೇಳಿಕೊಂಡರು.