ಬೆಂಗಳೂರು(ಆ.9): ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ನೋ ಪಾರ್ಕಿಂಗ್ ವಲಯದಲ್ಲಿ ಕಾರು ನಿಲ್ಲಿಸಿ ವಿವಾದಕ್ಕೀಡಾಗಿದ್ದಾರೆ. ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಜೆ ಪಿ ನಗರದ 6ನೇ ಹಂತದ 28ನೇ ಎ ಮುಖ್ಯ ರಸ್ತೆಯಲ್ಲಿ ನೋ ಪಾರ್ಕಿಂಗ್ ವಲಯದಲ್ಲಿ ರಕ್ಷಿತ್ ತಮ್ಮ ಆಡಿ ಕಾರನ್ನು ನಿಲುಗಡೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ಕಳೆದೆರಡು ದಿನಗಳಿಂದ ನೋ ಪಾರ್ಕಿಂಗ್ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಲಾಗಿದೆ ಎಂದು ಅಲ್ಲಿನ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಜೆ ಪಿ ನಗರದ ನಿವಾಸಿಯಾಗಿರುವ ಧನಂಜಯ್ ಪದ್ಮನಾಭಾಚಾರ್ ಈ ಬಗ್ಗೆ ನಗರ ಸಂಚಾರ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರಿನ ದಾಖಲಾತಿ ಸಂಖ್ಯೆಯನ್ನು ಪರಿಶೀಲಿಸಿದಾಗ ಅದು ನಟ ರಕ್ಷಿತ್ ಶೆಟ್ಟಿಗೆ ಸೇರಿದ ಕಾರು ಎಂದು ತಿಳಿದು ಬಂದಿದ್ದು, ಇದು ನಿಮ್ಮ ಕಾರು ಅಲ್ಲವೇ ಎಂದು ರಕ್ಷಿತ್ ಶೆಟ್ಟಿಯವರಲ್ಲಿ ಧನಂಜಯ್ ಪ್ರಶ್ನೆ ಕೇಳಿ ಟ್ವೀಟ್ ಮಾಡಿದ್ದಾರೆ.

ಕಾರನ್ನು ಕಳೆದೆರಡು ದಿನಗಳಿಂದ ನೋ ಪಾರ್ಕಿಂಗ್ ಪ್ರದೇಶದಲ್ಲಿ ಪಾರ್ಕಿಂಗ್ ಮಾಡಲಾಗಿದೆ. ರಸ್ತೆಯ ಮೂಲೆಯಲ್ಲಿ ಈ ರೀತಿ ನೋ ಪಾರ್ಕಿಂಗ್ ವಲಯದಲ್ಲಿ ಕಾರು ನಿಲ್ಲಿಸಿದರೆ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು ಭದ್ರತಾ ಸಿಬ್ಬಂದಿ ಹಲವು ಬಾರಿ ಕಾರಿನ ಚಾಲಕರಿಗೆ ಸಲಹೆ ನೀಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಯಾವಾಗೆಲ್ಲ ಈ ಕಾರು ಈ ಪ್ರದೇಶಕ್ಕೆ ಬರುತ್ತದೋ ಇಲ್ಲಿ ನಿಲ್ಲಿಸಿ ಹೋಗುತ್ತಾರೆ. 

ನೀತಿ, ನಿಯಮವೆಂಬುದು ಕೇವಲ ಸಾಮಾನ್ಯ ಜನರಿಗೆ ಮಾತ್ರ ಇರುವುದೇ, ಸ್ಯಾಂಡಲ್ ವುಡ್ ಹೀರೋಗಳಿಗೆ ಬೇರೆ ನಿಯಮವಿದೆಯೇ ಎಂದು ವೃತ್ತಿಯಲ್ಲಿ ಟೆಕ್ಕಿಯಾಗಿರುವ ಧನಂಜಯ್ ಟ್ವೀಟ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಇದು ಅಪಘಾತವಾಗುವ ಅಪಾಯಕಾರಿ ಸ್ಥಳವಾಗಿರುವುದರಿಂದ ಇಲ್ಲಿ ಕಳೆದ ಮೂರು ವರ್ಷಗಳಿಂದ ನೋ ಪಾರ್ಕಿಂಗ್ ವಲಯ ಎಂದು ಬೋರ್ಡ್ ಹಾಕಲಾಗಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿಯವರ ಮ್ಯಾನೇಜರ್ ನ್ನು ಕೇಳಿದರೆ, ಆ ಕಾರನ್ನು ರಕ್ಷಿತ್ ಶೆಟ್ಟಿಯವರು ತಮ್ಮ ಸ್ನೇಹಿತನೊಬ್ಬನಿಗೆ ನೀಡಿದ್ದು ಈಗ ಅವರ ಬಳಿ ಅದು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ತಾವು ಸದ್ಯದಲ್ಲಿಯೇ ಕಾರನ್ನು ಅಲ್ಲಿಂದ ತೆಗೆಯಲಿದ್ದೇವೆ. ಹಲವು ದಿನಗಳವರೆಗೆ ನೋ ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದರೆ ಕಾನೂನು ಕ್ರಮವಾಗಿ ಅದನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಜೆಪಿ ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ.