ಬೆಂಗಳೂರು [ಆ.29]: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಬೆಂಗಳೂರಿಗೆ ಆಗಮಿಸಿ, ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ದಾಖಲಾದ ಸಹೋದರನ ಆರೋಗ್ಯ ವಿಚಾರಿಸಿದರು.

ಸಹೋದರ ಸತ್ಯನಾರಾಯಣ ರಾವ್ ಅವರು ಅನಾರೋಗ್ಯ ನಿಮಿತ್ತ ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಯೋಗಕ್ಷೇಮ ವಿಚಾರಿಸುವ ಸಲುವಾಗಿ ರಜನಿ ಬೆಂಗಳೂರಿಗೆ ಬುಧವಾರ ಭೇಟಿ ನೀಡಿದ್ದರು. 

ಅವರ ಸಹೋದರ ಸತ್ಯನಾರಾಯಣ ರಾವ್ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಅವರ ಆರೋಗ್ಯ ವಿಚಾರಿಸಿದರು.  

ಈ ವೇಳೆ ರಜಿನಿಕಾಂತ್ ಅವರ ಸಹೋದರ ಸತ್ಯನಾರಾಯಣ ರಾವ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಪ್ರತಿಕ್ರಿಯಿಸಿದ ಇಲ್ಲಿನ ವೈದ್ಯರಾದ ಕಿರಣ್ ಚೌಕ, ಸದ್ಯ ಸತ್ಯನಾರಾಯಣ ರಾವ್ ಅವರು ಚೇತರಿಸಿಕೊಳ್ಳುತ್ತಿದ್ದು, ಸರ್ಜರಿ ನಡೆಸಿದ ದಿನವೇ ನಡೆದಾಡುವಷ್ಟು ಶಕ್ತರಾಗಿದ್ದಾರೆ ಎಂದರು.  

ಸೂಪರ್ ಸ್ಟಾರ್ ಬೆಂಗಳೂರಿಗೆ ಆಗಮಿಸುವ ಸುದ್ದಿ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಆಸ್ಪತ್ರೆಯ ಬಳಿ ಜಮಾಯಿಸಿ, ಸಂಚಾರ ದಟ್ಟಣೆ ಉಂಟಾಗಿತ್ತು.