Asianet Suvarna News Asianet Suvarna News

'ಅಪ್ಪಾಜಿಗೆ ಕೋಟ್ಯಧಿಪತಿ ಶೋ ತುಂಬಾ ಇಷ್ಟ'!

ಕಿರುತೆರೆಯ ಬಹುಜನಪ್ರಿಯ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ ಮತ್ತೆ ಶುರುವಾಗುತ್ತಿದೆ. ‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಜೂನ್‌ 22 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ‘ಕನ್ನಡದ ಕೋಟ್ಯಧಿಪತಿ’ ಪ್ರಸಾರವಾಗಲಿದೆ. ಈ ಸಲ ನಿರೂಪಕರ ಸೀಟಿಗೆ ಮತ್ತೆ ಪುನೀತ್‌ ರಾಜ್‌ಕುಮಾರ್‌ ಬಂದಿದ್ದಾರೆ.

Actor Puneeth Rajkumar shares Dr. Rajkumar Opinion about Kannadada Kotyadhipati
Author
Bangalore, First Published Jun 19, 2019, 8:46 AM IST

‘ಕನ್ನಡದ ಕೋಟ್ಯಧಿಪತಿ’ಯ ನಾಲ್ಕನೇ ಸೀಸನ್‌ ಇದು. ಆದರೆ ಕಲರ್ಸ್‌ ಕನ್ನಡ ವಾಹಿನಿಗೆ ಇದು ಮೊಟ್ಟಮೊದಲ ಸೀಸನ್‌. ಜತೆಗೆ ಇದರ ಆರಂಭದ ಎರಡು ಆವೃತ್ತಿಗಳಿಗೆ ನಿರೂಪಕರಾಗಿದ್ದ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಇದು ಮೂರನೇ ಸೀಸನ್‌. ಕನ್ನಡದ ಕೋಟ್ಯಧಿಪತಿ ಶೋಗೆ ಈಗಾಗಲೇ ಭರದ ಸಿದ್ಧತೆ ಸಾಗಿದೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಸ್ಟುಡಿಯೋದಲ್ಲಿ ಅದರ ಚಿತ್ರೀಕರಣಕ್ಕೆ ಭವ್ಯವಾದ ಸೆಟ್‌ ಹಾಕಲಾಗಿದೆ. ಈಗಾಗಲೇ ಹಲವು ಎಪಿಸೋಡ್‌ ಶೂಟ್‌ ಕೂಡ ಆಗಿದೆ. ಈ ಶೋ ಪ್ರಸಾರದ ಸಿದ್ಧತೆ ಕುರಿತು ಕಲರ್ಸ್‌ ಕನ್ನಡದ ಮುಖ್ಯಸ್ಥರ ಅದೇ ಸೆಟ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿತು. ಅಲ್ಲಿ ಶೋ ಕುರಿತು ಪುನೀತ್‌ ರಾಜ್‌ಕುಮಾರ್‌ ಹಲವು ಸಂಗತಿ ಹಂಚಿಕೊಂಡರು.

'ಕಷ್ಟಗಾಲದಲ್ಲಿ ಬರೋದೇ ಫ್ರೆಂಡ್ಸ್' ಇದು ಕನ್ನಡದ ಕೋಟ್ಯಧಿಪತಿ!

ಅಪ್ಪಾಜಿಗೆ ಈ ಶೋ ಅಂದ್ರೆ ತುಂಬಾ ಇಷ್ಟ...

ನನಗೆ ಈ ಪಯಣ ಶುರುವಾಗಿದ್ದು 2011 ರಿಂದ. ಈ ಶೋ ಆಫರ್‌ ಬಂದಾಗ ತಕ್ಷಣವೇ ನನಗೆ ನೆನಪಾಗಿದ್ದು ಅಪ್ಪಾಜಿ. ಯಾಕಂದ್ರೆ, ಅವರಿಗೆ ಹಿಂದಿಯ ‘ಕೌನ್‌ ಬನೇಗಾ ಕರೋಡ್‌ಪತಿ’ ಶೋ ಅಂದ್ರೆ ತುಂಬಾ ಇಷ್ಟ. ಅದರ ಪ್ರತಿ ಎಪಿಸೋಡ್‌ ನೋಡಿ ಖುಷಿ ಪಡುತ್ತಿದ್ದರು. ಅದೇನೋ ಅವರಿಗೆ ಸೋಜಿಗ. ಕಂಪ್ಯೂಟರ್‌ ಸ್ಕ್ರೀನ್‌ ಮೇಲೆ ಬರುತ್ತಿದ್ದ ಪ್ರಶ್ನೆಗಳು, ಅವುಗಳಿಗೆ ಸ್ಪರ್ಧಿಗಳು ಉತ್ತರಿಸುತ್ತಿದ್ದ ರೀತಿ ಎಲ್ಲವೂ ಅವರಿಗೆ ಖುಷಿಯೇ. ಯಾರು ಗೆಲ್ತಾರೆ, ಯಾರು ಸೋಲ್ತಾರೆ ಎನ್ನುವ ಕುತೂಹಲಕ್ಕಿಂತ ಆ ಶೋನಿಂದ ಜ್ಞಾನ ಹೆಚ್ಚಾಗುತ್ತದೆ ಎನ್ನುವುದೇ ಅವರ ಆಸಕ್ತಿಗೆ ಕಾರಣವಾಗಿತ್ತು. ಹಾಗಂತ ಅವರು ನನಗೆ ಹೇಳುತ್ತಿದ್ದರು. ಅದೇ ನನಗೂ ಸ್ಫೂರ್ತಿ ಆಗಿತ್ತು. ಅವರ ಮಾತು ನಿಜ. ಇದೊಂದು ಬರೀ ಮನರಂಜನೆಯ ಶೋ ಅಲ್ಲ, ಜ್ಞಾನ ನೀಡುವ ಶೋ.

ಅಮ್ಮನ ಮಾತೇ ಧೈರ್ಯ ತುಂಬಿತು..

Actor Puneeth Rajkumar shares Dr. Rajkumar Opinion about Kannadada Kotyadhipati

ಕನ್ನಡದ ಕೋಟ್ಯಧಿಪತಿ ಶೋಗೆ ನಿರೂಪಕನಾಗುವ ಅವಕಾಶ ಬಂದಾಗ ಒಂದೆಡೆ ಖುಷಿ ಮತ್ತೊಂದೆಡೆ ಭಯ ಎರಡು ಇದ್ದವು. ನೆಚ್ಚಿನ ನಟ ಅಮಿತಾಬ್‌ ಬಚ್ಚನ್‌ ಮೇಲಿನ ಅಭಿಮಾನಕ್ಕೆ ಆ ಕಾರ್ಯಕ್ರಮಕ್ಕೆ ನಾನು ಖಾಯಂ ವೀಕ್ಷಕ ಎನ್ನುವುದೇನೋ ನಿಜ, ಆದರೆ ಅದರ ನಿರೂಪಕನಾಗುವುದು ಅಷ್ಟುಸುಲಭವಲ್ಲ ಅನ್ನೋದು ನನಗಿದ್ದ ಭಯ. ಕೊನೆಗೆ ಅಮ್ಮ ಧೈರ್ಯ ತುಂಬಿದರು. ‘ನೀನ್‌ ಹೋದ್ರೆ ಚಚ್ಚಿ ಹಾಕ್ತೀಯಾ ಬಿಡು...’ ಅಂತ ಧೈರ್ಯ ಕೊಟ್ಟರು. ಹಾಗೆಯೇ ಶಿವಣ್ಣ ಸಾಥ್‌ ಕೊಟ್ಟರು. ರಾಘಣ್ಣ ಜತೆಗೆ ನಿಂತರು. ಅವರೆಲ್ಲರ ಬೆಂಬಲದಿಂದಾಗಿ ನಾನು ಮೊದಲು ಈ ಶೋ ನಿರೂಪಕನಾದೆ. ಹೊರಗಡೆ ಇದ್ದಾಗ ಏನೋ ಭಯ, ಆದ್ರೆ ಶೋ ಸ್ಟೇಜ್‌ಗೆ ಬಂದಾಗ ಅದೇನೋ ಎನರ್ಜಿ ಬರುತ್ತೆ. ಇಲ್ಲಿ ಪಾಸಿಟಿವ್‌ ವೈಬ್ರೇಷನ್‌ ಇರುತ್ತೆ.

ಪ್ರತಿಯೊಬ್ಬರು ಗೆಲ್ಲಬೇಕೆನ್ನುವುದು ನನ್ನಾಸೆ..

ಶೋ ನಿರೂಪಕ ನಾನು. ಹಾಟ್‌ ಸೀಟ್‌ ಮೇಲೆ ಕುಳಿತುಕೊಳ್ಳುವ ಕಂಟೆಸ್ಟ್‌ಗಳಿಗೆ ಒಂದಷ್ಟುಕಾಲೆಳೆಯಬೇಕು, ಕನ್‌ಫä್ಯಸ್‌ ಮೂಡುವಂತೆ ಮಾಡ್ಬೇಕೆನ್ನುವುದು ಶೋನ ಟ್ರಿಕ್ಸ್‌ ಆಗಿದ್ದರೂ, ನಾನಿಲ್ಲಿ ಅದಕ್ಕೆ ಹೆಚ್ಚು ಒತ್ತು ಕೊಡುವುದಿಲ್ಲ. ಆದಷ್ಟುಸ್ಪರ್ಧಿಗಳು ಆಪ್ತವಾಗಿಯೇ ಆಟ ಮುನ್ನಡೆಸಬೇಕು ಎನ್ನುವುದರ ಕಡೆಯೇ ಆದ್ಯತೆ ನೀಡುತ್ತೇನೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಸ್ಪರ್ಧಿಯೂ ಗೆಲ್ಲಬೇಕೆನ್ನುವುದು ನನ್ನಾಸೆ. ಕೆಲವರು ಕ್ಲಿಷ್ಟಪ್ರಶ್ನೆಗಳಿಗೂ ಉತ್ತರಿಸಿ, ಇನ್ನಾವುದೋ ಸರಳ ಪ್ರಶ್ನೆಗೆ ಉತ್ತರಿಸಲಾಗದೆ ಸ್ಪರ್ಧೆಯಿಂದ ಎದ್ದು ಹೊರಟಾಗ ಬೇಸರ ಎನಿಸುತ್ತೆ. ಯಾಕಂದ್ರೆ ಇಲ್ಲಿಗೆ ಬರುವವರೆಲ್ಲ ಏನೇನೋ ಕನಸು ಹೊತ್ತು ಬರುತ್ತಾರೆ. ಅವರು ಕನಸು ನನಸಾಗಬೇಕೆನ್ನುವ ಆಸೆಗಳು ಅವರ ಕಣ್ಣಲ್ಲಿ ಕಾಣುತ್ತವೆ. ಅದನ್ನು ಕಂಡಾಗ ನನಗೆ ಅವರು ಗೆಲ್ಲಬೇಕು ಅಂತಲೇ ಎನಿಸುತ್ತೆ.

ಭರದ ಸಿದ್ಧತೆ, ಸ್ಪರ್ಧಿಗಳ ಆಯ್ಕೆ

ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮವನ್ನು ಸೋನಿ ಪಿಕ್ಚರ್ಸ್‌ ಪ್ರೊಡಕ್ಷನ್‌ ಹೌಸ್‌ ಮತ್ತು ಸ್ಟುಡಿಯೋ ನೆಕ್ಟ್ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ. ಸಂತೂರ್‌ ಸೋಪ್‌ ಸೇರಿದಂತೆ ಹಲವು ಸಂಸ್ಥೆಗಳು ಸಾಥ್‌ ನೀಡಿವೆ. ಆ ಮೂಲಕ ಕಾರ್ಯಕ್ರಮದ ಒಂದು ಹಂತದ ಸ್ವರೂಪ ಸಿದ್ಧವಾಗಿದೆ. ‘ಕನ್ನಡದ ಕೋಟ್ಯಧಿಪತಿ ಶೋ ರೂಪುರೇಷೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ಸ್ಪರ್ಧಿಗಳ ಕತೆಗಳು, ಅವರ ಅಗತ್ಯಗಳು, ಕೋಟಿ ರೂಪಾಯಿ ಗೆಲ್ಲಲು ಅವರು ಪಡುವ ಪ್ರಯತ್ನ ಮತ್ತು ಬುದ್ಧಿವಂತಿಕೆ ಇತ್ಯಾದಿಗಳನ್ನು ತೋರಿಸುವ ವಿಧಾನ ಹೊಸದಾಗಿರುತ್ತದೆ. ಈಗಾಗಲೇ ರಾಜ್ಯದ ಐದು ನಗರಗಳಲ್ಲಿ ಆಡಿಷನ್‌ ನಡೆಸಿ ಸ್ಫರ್ಧಿಗಳನ್ನು ಆಯ್ಕೆ ಮಾಡಿದ್ದೇವೆ. ಸ್ಟುಡಿಯೋ ನೆಕ್ಷಾ…$್ಟಸಿದ್ಧಪಡಿಸಿದ ಪ್ರಶ್ನೆಗಳ ಮೂಲಕ ಸ್ಪರ್ಧಿಗಳ ಆಯ್ಕೆ ನಡೆದಿದೆ. ಸ್ಪರ್ಧಿಗಳ ಸಂಖ್ಯೆ ಎಷ್ಟಾಗುತ್ತೋ ಖಚಿತವಾಗಿಲ್ಲ. ಅದು ಆಟದ ಮೇಲೆ ನಿಂತಿರುತ್ತದೆ. ಅನೇಕ ಹೊಸ ಸಂಗತಿಗಳ ಮೂಲಕ ಇದನ್ನು ವೀಕ್ಷಕರಿಗೆ ನೀಡುತ್ತಿದ್ದೇವೆ. ಅದೆಲ್ಲಕ್ಕಿಂತ ಮುಖ್ಯವಾಗಿ ಪುನೀತ್‌ ರಾಜ್‌ ಕುಮಾರ್‌ ಶೋ ನಿರೂಪಕರಾಗಿದ್ದು ಖುಷಿ ತಂದಿದೆ. ಅವರು ಕಾರ್ಯಕ್ರಮ ನಡೆಸಿಕೊಡುವ ರೀತಿಯೇ ಅತ್ಯಾಕರ್ಷಕ. ಹಾಗಾಗಿ ಈ ಶೋ ವಿಶೇಷವಾಗಿರುತ್ತೆ ಎನ್ನುವ ನಂಬಿಕೆಯಿದೆ’ ಎನ್ನುತ್ತಾರೆ ಕಲರ್ಸ್‌ ಕನ್ನಡದ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ್‌ ಗುಂಡ್ಕಲ್‌.

- ಶೋಗೆ ಸ್ಟುಡಿಯೋ ನೆಕ್ಟ್ ಸಂಸ್ಥೆಯೇ ಪ್ರಶ್ನೆಗಳನ್ನು ತಯಾರಿಸುತ್ತಿದೆ. ಅದರ ತಂಡವೇ ಕನ್ನಡಕ್ಕೆ ಪೂರಕವಾಗಿ ನಿಗೂಢವಾಗಿ ಪ್ರಶ್ನೆಗಳ ಪಟ್ಟಿತಯಾರಿಸುತ್ತಿದೆ. ಅದರ ಚಾನೆಲ್‌ ಹಸ್ತಕ್ಷೇಪವೇ ಇರುವುದಿಲ್ಲ.

- ವೂಟ್‌ ಮತ್ತು ಮೈ ಜಿಯೋ ಆ್ಯಪ್‌ಗಳಲ್ಲೂ ಪ್ರಸಾರ ಪ್ರಾರಂಭಿಸಲಾಗಿದೆ. ಆ ಮೂಲಕ ಕಾರ್ಯಕ್ರಮ ವೀಕ್ಷಿಸುವ ಜನರು ಕೂಡ ಶೋ ಕ್ವೀಜ್‌ನಲ್ಲಿ ಭಾಗವಿಹಿಸಬಹುದು.

Follow Us:
Download App:
  • android
  • ios