ಬೆಂಗಳೂರು (ಆ. 20): ನೆನಪಿರಲಿ ಪ್ರೇಮ್ ಮಕ್ಕಳ ಸಿನಿಮಾ ನೋಡಿ ಸಂಭ್ರಮಗೊಂಡಿದ್ದಾರೆ. ನೂರಾರು ಮಂದಿ ಮಕ್ಕಳ ಜತೆಗೆ ಬೆಂಗಳೂರಿನ ನವರಂಗ ಚಿತ್ರಮಂದಿರದಲ್ಲಿ ಪ್ರೇಮ್ ಸಿನಿಮಾ ನೋಡುವುದಕ್ಕೆ ಕಾರಣ ಅವರ ಪುತ್ರ ಏಕಾಂತ್.

ಇದು ಏಕಾಂತ್ ನಟಿಸಿರುವ ಮೊದಲ ಸಿನಿಮಾ. ಚಿತ್ರದ ಹೆಸರು ರಾಮರಾಜ್ಯ. ಶಾಲಾ ಮಕ್ಕಳಿಗಾಗಿಯೇ ರಿಯಾಯಿತಿ ದರದಲ್ಲಿ ಆಯೋಜಿಸಿದ್ದ ಪ್ರದರ್ಶನದಲ್ಲೇ ಮಕ್ಕಳೊಂದಿಗೆ ಸಿನಿಮಾ ನೋಡಿದ್ದಾರೆ. ‘ನನ್ನ ಮಗ ನಟಿಸಿರುವ ಸಿನಿಮಾ ಇದು. ಅವರು ತೆರೆ ಮೇಲೆ ಹೇಗೆ ಕಾಣುತ್ತಾನೆಂಬ ಕುತೂಹಲ ಅಪ್ಪನಾಗಿ ನನಗೂ ಇತ್ತು. ಹೀಗಾಗಿ ಚಿತ್ರಮಂದಿರದಲ್ಲೇ ನೋಡಬೇಕು ಅಂದುಕೊಂಡೆ. ಅದರಲ್ಲೂ ಮಕ್ಕಳ ಚಿತ್ರಕ್ಕೆ ಮಕ್ಕಳು ಹೇಗೆ ಪ್ರತಿಕ್ರಿಯಿಸುತ್ತಾರೆಂಬುದು ತಿಳಿಯುವುದಕ್ಕೆ ನವರಂಗ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದೆ. ಖುಷಿ ಆಯಿತು. ನನ್ನ ಮಗ ಏಕಾಂತ್ ಜತೆಗೆ ನಟಿಸಿರುವ ಇತರೆ ಕಲಾವಿದರು ಕೂಡ ತುಂಬಾ ಚೆನ್ನಾಗಿ ನಟಿಸಿದ್ದಾರೆ’ ಎಂದರು ಪ್ರೇಮ್.

ನೀಲ್ ಕಮಲ್ ಈ ಚಿತ್ರ ನಿರ್ದೇಶಿಸಿದ್ದು, ಆರ್ ಶಂಕರ್ ಗೌಡ ನಿರ್ಮಾಣದ ಚಿತ್ರವಿದು. ಶಾಲೆಗಳಿಗೆ ರಿಯಾಯಿತಿ ದರದಲ್ಲಿ ಟಿಕೆಟ್‌ಗಳನ್ನು ವಿತರಣೆ ಮಾಡುತ್ತಿದ್ದಾರೆ. ಒಂದೊಂದು ದಿನ ಒಂದೊಂದು ಶಾಲೆಯ ಮಕ್ಕಳು ಬಂದು ಸಿನಿಮಾ ನೋಡುತ್ತಿದ್ದಾರೆ. ಯಶವಂತಪುರ, ಕಮಲನಗರ ಹೀಗೆ ಮೂರು ಚಿತ್ರಮಂದಿರಗಳಲ್ಲಿ ‘ರಾಮರಾಜ್ಯ’ ಸಿನಿಮಾ ಪ್ರದರ್ಶನವಾಗುತ್ತಿದೆ.