Asianet Suvarna News Asianet Suvarna News

ಹೀರೋಗೋಸ್ಕರ ಸಿನಿಮಾ ನೋಡುವ ಕಾಲ ಇದಲ್ಲ: ಪ್ರೇಮ್

ನಟ ನೆನಪರಲಿ ಪ್ರೇಮ್ ಅಭಿನಯದ ಚಿತ್ರ ಸದ್ಯದಲ್ಲೇ ಬರಲಿದೆ. 25 ನೇ ಚಿತ್ರದಲ್ಲಿ ಪ್ರೇಮ್ ಬ್ಯುಸಿಯಾಗಿದ್ದಾರೆ. ’ಕನ್ನಡ ಪ್ರಭ’ ಜೊತೆ ಪ್ರೇಮ್ ಮಾತಿಗೆ ಸಿಕ್ಕಾಗ ತಮ್ಮ ಚಿತ್ರದ ಬಗ್ಗೆ ಮಾತು ಹಂಚಿಕೊಂಡಿದ್ದು ಹೀಗೆ. 

Actor Prem interview with Kannada Prabha
Author
Bengaluru, First Published Jul 30, 2018, 9:39 AM IST

ಬೆಂಗಳೂರು (ಜು. 30): ನೆನಪಿರಲಿ ಪ್ರೇಮ್ ತುಂಬಾ ದಿನಗಳ ನಂತರ ಮಾತಿಗೆ ಸಿಕ್ಕರು. 25 ನೇ ಚಿತ್ರದ ತಯಾರಿ, ಪ್ರೇಕ್ಷಕರಿಗೆ ಬೇಕಿರುವ ಸಿನಿಮಾ, ತಮ್ಮ ಬದಲಾವಣೆ, ಮಗನ ಸಿನಿಮಾ ಪಯಣ, ತೆರೆಗೆ ಸಜ್ಜಾಗಿರುವ ‘ಲೈಫ್ ಜೊತೆ ಒಂದ್ ಸೆಲ್ಫಿ’ ಕುರಿತು ಮಾತನಾಡಿದ್ದಾರೆ.

ಲೈಫ್‌ ಜೊತೆಒಂದ್ ಸೆಲ್ಫಿ ಸಿನಿಮಾಅನುಭವ ಹೇಗಿತ್ತು?
ಸೂಪರ್ ಆಗಿತ್ತು. ನಿರ್ದೇಶಕ ದಿನಕರ್ ಜತೆ ನಾನು ಎರಡು ಬಾರಿಗೆ ಮಾಡುತ್ತಿರುವ ಚಿತ್ರವಿದು. ಹೀಗಾಗಿ ಅವರ ಕೆಲಸದ ನೇಚರ್ ನನಗೆ ಗೊತ್ತು. ತುಂಬಾ ಪ್ಲಾನ್ ಮಾಡಿಕೊಂಡು ಸಿನಿಮಾ ಮಾಡುವ ನಿರ್ದೇಶಕ. ವಿಶೇಷ ಚಿತ್ರಕಥೆ ಒಳಗೊಂಡಿರುವ ಸಿನಿಮಾ ‘ಲೈಫ್ ಜೊತೆ ಒಂದ್ ಸೆಲ್ಫಿ’. ಮೂರು ಜನರ ಪ್ರಯಾಣದಲ್ಲಿ ಸಂಭವಿಸುವ ನಮ್ಮ- ನಿಮ್ಮೆಲ್ಲರ ಬದುಕಿನ ಕತೆ ಇದು. ಒಬ್ಬೊಬ್ಬರ ಕತೆಯ ಮೂಲಕ ಒಂದೊಂದು ದಾರಿಯಲ್ಲಿ ಸಿನಿಮಾ ಸಾlಗುತ್ತ ಮುಂದೆ ಇಡೀ ಸಿನಿಮಾ ಪ್ರೇಕ್ಷಕರದ್ದಾಗುತ್ತದೆ.  

ಮುಂದೆ ನೀವು ಯಾವ ರೀತಿಯ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ?
ನಾನು ಮುಂದೆ ಮಾಡಲಿರುವುದು 25 ನೇ ಚಿತ್ರ. ಹೀಗಾಗಿ ವಿಶೇಷವಾದ ಕತೆಗಾಗಿ ಹುಡುಕಾಟ ನಡೆಯುತ್ತಿದೆ. ಒಬ್ಬ ನಟನ ಜೀವನದಲ್ಲಿ 25 ಎನ್ನುವ ಸಂಖ್ಯೆ ಬಹು ಮುಖ್ಯ ತಿರುವು. ಆ ತಿರುವು ಭಿನ್ನವಾಗಿರಬೇಕು. ಆ ಕಾರಣಕ್ಕೆ ‘ಲೈಫ್ ಜೊತೆ ಒಂದ್ ಸೆಲ್ಫಿ’ ಮುಗಿಸಿದರೂ ಇನ್ನೂ ಯಾವ ಚಿತ್ರವನ್ನು ಒಪ್ಪಿಕೊಂಡಿಲ್ಲ. 25 ನೇ ಚಿತ್ರದ ನಂತರ ಬದಲಾಗುತ್ತಿರುವ ಪ್ರೇಮ್ ಕಾಣಬೇಕು ಎಂಬುದು ನನ್ನ ಗುರಿ.

ಅಂದರೆ ಯಾವ ರೀತಿಯ ಕತೆಯನ್ನು ಎದುರು ನೋಡುತ್ತಿದ್ದೀರಿ?
ನಟ ಕಾರ್ತಿ ಮಾಡಿದ ‘ಧೀರನ್’ ರೀತಿಯ ಕತೆಗಳು ನನಗೆ ಇಷ್ಟ. ತುಂಬಾ ರಿಯಲಿಸ್ಟಿಕ್ಕಾಗಿರಬೇಕು. ಸಿನಿಮಾ ನೋಡುವಾಗ ಒಂದು ಕ್ಷಣ ನಮ್ಮನ್ನು ನಡಗಿಸಬೇಕು. ಧೀರನ್ ಚಿತ್ರದಲ್ಲಿ ಕಳ್ಳರು ಬಂದು ಬಾಗಿಲು ತಟ್ಟುವ ದೃಶ್ಯ ನೋಡಿದಾಗ ನನಗೇ ಹೆದರಿಕೆ ಆಗುತ್ತಿತ್ತು. ಅದು ಕೇವಲ ಸಿನಿಮಾ ಅಂತ ಗೊತ್ತು, ಆದರೂ ನಮ್ಮ ಕಣ್ಣ ಮುಂದೆ ನಿಜವಾಗಿ ನಡೆಯುತ್ತಿದೆ ಎನ್ನುವಷ್ಟು ನೈಜವಾಗಿತ್ತು. ಅಂಥ ಚಿತ್ರಕತೆ, ಸಿನಿಮಾ ಮಾಡುವಾಸೆ.

ನಿಮ್ಮ ಈ ಯೋಚನೆಗೆ ಕಾರಣ ಏನು?
ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ನಾವೂ ಬದಲಾಗಬೇಕು. ನಾಲ್ಕು ಹಾಡು, ಮೂರು ಫೈಟು, ಒಂದು ಐಟಂ ಸಾಂಗು, ಒಂದಿಷ್ಟು ಪಂಚ್ ಡೈಲಾಗ್‌ಗಳನ್ನೇ ನೆಚ್ಚಿಕೊಂಡಿದ್ದರೆ ನಾವು ಹಿಂದೆ ಉಳಿಯುತ್ತೇವೆ. ಯಾಕೆಂದರೆ ಪ್ರೇಕ್ಷಕರು ಬೇರೆಯದ್ದೇ ಆದ ಕತೆಗಳನ್ನು ಬಯಸುತ್ತಿದ್ದಾರೆ. ಅವರ ಭಿನ್ನ ಆಲೋಚನೆಗಳಿಗೆ ತಕ್ಕಂತೆ ಸಿನಿಮಾ ಮಾಡದಿದ್ದರೂ ಹೀಗೆ ಇರುತ್ತೇವೆ.

ಹಾಗಾದರೆ ಯಾವ ರೀತಿಯ ಚಿತ್ರಗಳು ಪ್ರೇಕ್ಷಕರಿಗೆ ಬೇಕಿದೆ?
ರಾಮಾ ರಾಮಾ ರೇ, ತಿಥಿ, ರಂಗಿತರಂಗ ರೀತಿಯ ಸಿನಿಮಾಗಳಲ್ಲಿ ಯಾವ ಸ್ಟಾರ್ ನಟರು ಇಲ್ಲದಿದ್ದರೂ ಜನಕ್ಕೆ ಇಷ್ಟವಾಯಿತು. ಯಾಕೆಂದರೆ ಹೊಸ ರೀತಿಯ ಕತೆ. ನಮ್ಮತನದ ಸಿನಿಮಾ ಅನಿಸಿತು. ಈಗ ನೋಡಿ ಹಲವು ವರ್ಷಗಳ ನಂತರವೂ ‘ನಾಗರಹಾವು’ ಚಿತ್ರವನ್ನು ಜನ ಮುಗಿ ಬಿದ್ದು ನೋಡುತ್ತಿದ್ದಾರೆ. ಯಾಕೆ? ಆ ಸಿನಿಮಾ ಮಾಡುವಾಗ ನಿರ್ದೇಶಕ ಪುಟ್ಟಣ್ಣ  ಬಿಟ್ಟರೆ ಬೇರೆ ಯಾರೂ ಸ್ಟಾರ್‌ಗಳಲ್ಲ. ಆಗಲೂ ಚಿತ್ರವನ್ನು ಜನ ನೋಡಿದರು. ಈಗಲೂ ಜನ ನೋಡುತ್ತಿದ್ದಾರೆ. ಅಲ್ಲಿಗೆ ಕತೆಗೆ ಜನ ಗೌರವ ಕೊಡುತ್ತಿದ್ದಾರೆ ಅಂದಹಾಗಾಯಿತು.

ಅಂದ್ರೆ ಕತೆಗಳು ಹೀರೋಗಳ ಮೂಗಿನ ನೇರಕ್ಕೆ ಇರುತ್ತಿವೆ ಅಂತೀರಾ?
ಹಾಗಂತಲ್ಲ. ಆದರೆ, ಜನ ಈಗ ಹೀರೋಗಾಗಿ ಸಿನಿಮಾ ನೋಡುವುದು ಕಡಿಮೆ. ಕತೆ ಚೆನ್ನಾಗಿರಬೇಕು. ನಾವು ತೋರಿಸುವ ಅಥವಾ ಹೇಳುವ ಕತೆ ಪ್ರೇಕ್ಷಕನಲ್ಲಿ ಕುತೂಹಲ ಮೂಡಿಸುವ ಅವನದ್ದೇ ಪರಿಸರದ ರಿಯಲ್ ಸ್ಟೋರಿ ಆಗಿರಬೇಕು. ಆಗ ಚಿತ್ರ ನೋಡುಗ ಪ್ರೇಕ್ಷಕ ಕನೆಕ್ಟ್ ಆಗುತ್ತಾನೆ. ಯಾವ ಚಿತ್ರದ ಜತೆಗೆ ಪ್ರೇಕ್ಷಕ ತನ್ನನ್ನು ಗುರುತಿಸಿಕೊಳ್ಳುತ್ತಾನೋ ಆ ಸಿನಿಮಾ ಕಮರ್ಷಿಯಲ್ಲಾಗೂ ಗೆಲ್ಲುತ್ತದೆ.

ನಿಮ್ಮ ಪುತ್ರ ಏಕಾಂತ್ ನಟನಾಗಲು ತುಂಬಾ ತಯಾರಿ ಮಾಡಿಕೊಳ್ಳುತಿದ್ದೀರಂತೆ?
ಅವನು ನಟ ಆಗಬೇಕೆನ್ನುವುದು ನನ್ನ ಬಲವಂತದ ಆಸೆಯಲ್ಲ. ಅವನ ಇಷ್ಟದಂತೆಯೇ ತೀರಾ ಚಿಕ್ಕ ವಯಸ್ಸಿನಿಂದಲೇ ನಟನೆಯ ಕನಸು ಕಾಣುತ್ತಿದ್ದಾನೆ. ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾನೆ. ಮಾಸ್ಟರ್ ಚಾಮರಾಜ ಅವರ ಗರಡಿಯಲ್ಲಿ ಕಲಿಕೆ ಶುರುವಾಗಿದೆ. ಡ್ಯಾನ್ಸ್, ಫೈಟ್, ಜಿಮ್ನಾಸ್ಟಿಕ್, ಅಭಿನಯ ಹೀಗೆ ಎಲ್ಲದರ ಬಗ್ಗೆಯೂ ತಿಳಿದುಕೊಳ್ಳುತ್ತಿದ್ದಾನೆ. ಓದಿನ ಜತೆ ಜತೆಗೆ ಇದನ್ನ ಅವನ ಸ್ವಂತ ಆಸಕ್ತಿಯಿಂದ ಕಲಿಯುತ್ತಿದ್ದಾನೆ. ಈಗ ಮೂರು ಚಿತ್ರಗಳಲ್ಲಿ ನಟಿಸಿದ್ದಾನೆ. 

-ಕೇಶವಮೂರ್ತಿ 

Follow Us:
Download App:
  • android
  • ios