ಬೆಂಗಳೂರು (ಆ. 04): ಅಂಬರೀಷ್ ಹಾಗೂ ಸುದೀಪ್ ಅಭಿನಯದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ ಬಹುತೇಕ ಈ ತಿಂಗಳ ಕೊನೆಯಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.

ನಿರ್ಮಾಪಕ ಜಾಕ್ ಮಂಜು ಈ ತಿಂಗಳ ಕೊನೆಯಲ್ಲೇ ಚಿತ್ರವನ್ನು ತೆರೆಗೆ ತಂದರೆ ಒಳ್ಳೆಯದು ಎನ್ನುವ ಲೆಕ್ಕಚಾರದಲ್ಲಿದ್ದಾರೆ. ಅದಕ್ಕೆ ಪೂರಕವಾಗಿಯೇ ಚಿತ್ರದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಅವರು ಬ್ಯುಸಿ ಆಗಿದ್ದು, ಆಗಸ್ಟ್ 15 ರೊಳಗೆ ನಗರದಲ್ಲಿ ಅದ್ಧೂರಿಯಾಗಿಯೇ ಆಡಿಯೋ ರಿಲೀಸ್ ಮಾಡಲು ಸಜ್ಜಾಗಿದ್ದಾರೆ. ಬೆಂಗಳೂರಿನ ಅರಮನೆ ಆವರಣದಲ್ಲಿನ ತ್ರಿಪುರ ವಾಸಿನಿ ಸಭಾಂಗಣದಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ತಯಾರಿ ನಡೆದಿದೆ.

ಅವತ್ತಿನ ಕಾರ್ಯಕ್ರಮಕ್ಕೆ ಕಾಲಿವುಡ್ ನಟ ಧನುಷ್ ಆಗಮಿಸುವ ಸಾಧ್ಯತೆ ಇದೆ ಎನ್ನುತ್ತಿವೆ ಚಿತ್ರತಂಡ. ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ ತಮಿಳಿನ ‘ಪವರ್ ಪಾಂಡಿ’ ಚಿತ್ರದ ರಿಮೇಕ್. ಅಲ್ಲಿ ಈ ಚಿತ್ರವನ್ನು ನಿರ್ಮಿಸಿ, ತೆರೆಗೆ ತಂದಿದ್ದು ನಟ ಧನುಷ್. ಹಾಗೆಯೇ ಚಿತ್ರದಲ್ಲೂ ಅವರೇ ಅಭಿನಯಿಸಿದ್ದರು.

ಅದೇ ನಂಟಿನೊಂದಿಗೆ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಧನುಷ್ ಆಗಮಿಸುತ್ತಿದ್ದಾರೆನ್ನಲಾಗಿದೆ. ಹಾಗೆಯೇ ಆಡಿಯೋ ರಿಲೀಸ್ ಕಾರ್ಯಕ್ರಮವನ್ನು ವಿಭಿನ್ನವಾಗಿಯೇ ನಡೆಸಲು ನಿರ್ಮಾಪಕ ಜಾಕ್ ಮಂಜು ನಿರ್ಧರಿಸಿದ್ದಾರೆ.