ಕೋಟಿಗೊಬ್ಬ ಸೆಟ್‌ನಲ್ಲಿ ಕಿಚ್ಚ ಸುದೀಪ್
ಸುದೀಪ್ ರಾಜಕೀಯ ಪ್ರಚಾರದಲ್ಲಿ ತೊಡಗಿಸಿಕೊಳ್ಳದಿದ್ದರೂ ತಮ್ಮ ನಟನೆಯ ಚಿತ್ರಗಳ ಶೂಟಿಂಗ್‌ಗೆ ಒಂದಿಷ್ಟು ಬಿಡುವು ಕೊಟ್ಟಿದ್ದರು. ಈಗ ಚುನಾವಣೆ ಮುಗಿದಿದೆ. ಹೀಗಾಗಿ ‘ಕೋಟಿಗೊಬ್ಬ ೩’ ಚಿತ್ರೀಕರಣದಲ್ಲಿ ಕಿಚ್ಚ ಭಾಗಿಯಾಗಿದ್ದಾರೆ. ಈಗಾಗಲೇ ತೆಲುಗಿನ ‘ಸೈರಾ’ ಮುಗಿಸಿದ್ದಾರೆ. ಮೇ.1ರ ವರೆಗೂ ‘ಕೋಟಿಗೊಬ್ಬ 2’ ಚಿತ್ರೀಕರಣ ನಡೆಯಲಿದ್ದು, ಆ ನಂತರ ಹಿಂದಿಯ ‘ದಬಾಂಗ್ ೩’ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಸದ್ಯಕ್ಕೆ ಸುದೀಪ್ ಅವರು ಹೈದರಾಬಾದ್‌ನಲ್ಲಿ ಹಾಕಲಿರುವ ಸೆಟ್‌ನಲ್ಲಿ ‘ಕೋಟಿಗೊಬ್ಬ 2’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸೂರಪ್ಪ ಬಾಬು ನಿರ್ಮಿಸಿ, ಶಿವ ಕಾರ್ತಿಕ್ ನಿರ್ದೇಶಿಸುತ್ತಿರುವ ಚಿತ್ರವಿದು.

ದರ್ಶನ್ ರಾಬರ್ಟ್ ಶುರು
ಕಳೆದ ಒಂದು ತಿಂಗಳಿನಿಂದ ಮಂಡ್ಯದ ರಾಜಕೀಯ ಅಖಾಡದಲ್ಲಿ ಬ್ಯುಸಿಯಾಗಿದ್ದವರು ದರ್ಶನ್. ಸುಮಲತಾ ಅಂಬರೀಶ್ ಪರವಾಗಿ ಮತಯಾಚನೆಗೆ ಇಳಿದ ಮೇಲೆ ಇವರ ಚಿತ್ರಗಳ ಶೂಟಿಂಗ್‌ಗೂ ಬ್ರೇಕ್ ಬಿತ್ತು. ನಿರ್ದೇಶಕ ತರುಣ್ ಸುಧೀರ್ ಅವರ ‘ರಾಬರ್ಟ್’ ಚಿತ್ರಕ್ಕೆ ಏಪ್ರಿಲ್ ಮೊದಲ ವಾರದಲ್ಲೇ ಮುಹೂರ್ತ ನಡೆಯಬೇಕಿತ್ತು. ಚಿತ್ರತಂಡ ಕೂಡ ಆ ನಿಟ್ಟಿನಲ್ಲಿ ತಯಾರಿ ನಡೆಸಿಕೊಂಡಿತು. ಆದರೆ, ದರ್ಶನ್ ಪ್ರಚಾರಕ್ಕೆ ನಿಂತರು. ‘ರಾಬರ್ಟ್’ ಚಿತ್ರದ ಮುಹೂರ್ತ ಮುಂದಕ್ಕೆ ಹೋಯಿತು. ಈಗ ಬಂದಿರುವ ಮಾಹಿತಿ ಪ್ರಕಾರ 22 ಅಥವಾ 23 ರಿಂದ ‘ರಾಬರ್ಟ್’ ಕೆಲಸಗಳು ಶುರುವಾಗಲಿವೆ. ಚಿತ್ರಕ್ಕೆ ಮುಹೂರ್ತ ಮಾಡಿಕೊಂಡು ಒಂದು ಶೆಡ್ಯೂಲ್ ಶೂಟಿಂಗ್ ಮುಗಿಸಲಿದ್ದಾರಂತೆ. ಆನಂತರ ಎಂಡಿ ಶ್ರೀಧರ್ ನಿರ್ದೇಶನದ ‘ಒಡೆಯ’ ಚಿತ್ರಕ್ಕೆ ಬಾಕಿ ಉಳಿದಿರುವ ಎರಡು ಹಾಡಿನ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳುವ ಯೋಚನೆ ದರ್ಶನ್ ಅವರದ್ದು. 

ಕೆಜಿಎಫ್ ಅಂಗಳದಲ್ಲಿ ಗಡ್ಡಧಾರಿ ಯಶ್
ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್‌ನ ‘ಕೆಜಿಎಫ್-2’ಗೆ ಈಗಾಗಲೇ ಶೂಟಿಂಗ್ ಶುರುವಾಗಿದೆ. ರವಿ ಬಸ್ರೂರು ಸಾರಥ್ಯದಲ್ಲಿ ಹಾಡುಗಳ ರೆಕಾರ್ಡಿಂಗ್ ಕೂಡ ನಡೆದಿದೆ. ಮೂಡಿಗೆರೆ ಭಾಗದಲ್ಲಿ ಅದ್ದೂರಿಯಾದ ಸೆಟ್ ಹಾಕಿದ್ದು, ಇಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಇದೆ. ಆದರೆ, ಯಶ್ ಮಾತ್ರ ಮಂಡ್ಯ ರಣರಂಗದಲ್ಲಿ ತೊಡಗಿಸಿಕೊಂಡಿದ್ದರಿಂದ ಶೂಟಿಂಗ್ ಕಡೆ ಮುಖ ಮಾಡಿಲ್ಲ. ಆದರೂ ಬೇರೆ ಬೇರೆ ಪಾತ್ರಧಾರಿಗಳ ಚಿತ್ರೀಕರಣ ಆರಂಭಗೊಂಡಿದೆ ಎನ್ನಲಾಗುತ್ತಿದೆ. ಇನ್ನೇನು ಯಶ್, ರಾಜಕೀಯ ಗದ್ದಲಕ್ಕೆ ವಿರಾಮ ಹಾಕಿದ್ದು ಸದ್ಯದಲ್ಲೇ ಕೆಜಿಎಫ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಮೇ.1ರಿಂದ ಪೊಗರು ಚಿತ್ರಕ್ಕೆ ಚಾಲನೆ
ಧ್ರುವ ಸರ್ಜಾ ಅಭಿನಯದ, ನಂದಕಿಶೋರ್ ನಿರ್ದೇಶನದ ‘ಪೊಗರು’ ಚಿತ್ರಕ್ಕೆ ಬ್ರೇಕ್ ನೀಡಲಾಗಿತ್ತು. ಮೇ.1ರಿಂದ ಮತ್ತೆ ಚಾಲನೆ ನೀಡಲಾಗುತ್ತಿದೆ. ರಾಜಕೀಯ ಕೆಲಸಗಳ ಒತ್ತಡದಲ್ಲಿ ಸಿನಿಮಾ ಕೆಲಸಗಳಿಗೆ ಗಮನ ಕೊಡಲು ಸಾಧ್ಯವಿಲ್ಲ ಎನ್ನುವ ಆಲೋಚನೆಯಲ್ಲಿ ಹೈದಾರಬಾದ್‌ನಲ್ಲಿ ನಡೆಯುತ್ತಿದ್ದ ಚಿತ್ರೀಕರಣಕ್ಕೆ ವಿರಾಮ ನೀಡಲಾಗಿತ್ತು. ಇಲ್ಲಿವರೆಗೂ 55 ದಿನ ಚಿತ್ರೀಕರಣ ಮಾಡಲಾಗಿದ್ದು, ಶೇ.50 ಭಾಗ ಶೂಟಿಂಗ್ ಮುಕ್ತಾಯ ಮಾಡಲಾಗಿದೆ. ಮೇ.1ರಿಂದ ಮತ್ತೆ ‘ಪೊಗರು’ ಚಿತ್ರದ ಶೂಟಿಂಗ್ ಮೈದಾನಕ್ಕೆ ಆ್ಯಕ್ಷನ್ ಪ್ರಿನ್ಸ್ ಇಳಿಯಲಿದ್ದಾರೆ. ಇವರ ನಡುವೆ ನೆನಪಿರಲಿ ಪ್ರೇಮ್ ತಮ್ಮ ನಟನೆಯ 25ನೇ ಚಿತ್ರವಾದ ‘ಪ್ರೇಮಂ ಪೂಜ್ಯಂ’ ಚಿತ್ರದ ಕೆಲಸಗಳಿಗೂ ಚುರುಕು ಮುಟ್ಟಿಸಿದ್ದಾರೆ. ಜೋಗಿ ಪ್ರೇಮ್ ತಮ್ಮ ಬಾಮೈದ ನಟನೆಯ ‘ಏಕಲವ್ಯ’ ಚಿತ್ರಕ್ಕೆ ನಾಯಕಿ ಹುಡುಕುತ್ತಿದ್ದಾರೆ.