ಅದ್ಧೂರಿ ವೆಚ್ಚದ ಜತೆಗೆ ಬಹುತಾರಾಗಣದ ಕಾರಣಕ್ಕೆ ತೀವ್ರ ಕುತೂಹಲ ಹುಟ್ಟಿಸಿರುವ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ಆಡಿಯೋ ಲಾಂಚ್‌ ಕಾರ್ಯಕ್ರಮ ಜುಲೈ 7 ರಂದು ನಡೆಯಲಿದೆ. ದೊಡ್ಡ ಮಟ್ಟದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಈಗಾಗಲೇ ಚಿತ್ರತಂಡದಿಂದ ಪಾಸ್‌ ವಿತರಣೆ ಶುರುವಾಗಿದಂತೆ. ಸದ್ಯಕ್ಕೆ ಆ ಪಾಸ್‌ಗಳು ಎಲ್ಲಿ ಲಭ್ಯವಾಗುತ್ತಿವೆ, ಯಾರು ಕೊಡುತ್ತಿದ್ದಾರೆನ್ನುವುದು ಚಿತ್ರತಂಡಕ್ಕೂ ಗೊತ್ತಿಲ್ಲ. ಆದರೆ ಆ ಪಾಸ್‌ನಲ್ಲಿ ಚಿತ್ರದ ನಾಯಕ ನಟ ದರ್ಶನ್‌ ಅವರ ಭಾವಚಿತ್ರ ಇಲ್ಲ ಎನ್ನುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬಿಡುಗಡೆಗೆ ಮುನ್ನ 20 ಕೋಟಿ ಗಳಿಸಿದ ಕುರುಕ್ಷೇತ್ರ!

ಚಿತ್ರದ ನಿರ್ಮಾಪಕರ ವಿರುದ್ಧ ತಮ್ಮ ಅಭಿಮಾನಿಗಳೆನ್ನಲಾದ ಕೆಲವು ವ್ಯಕ್ತಿಗಳು ಬಹಿರಂಗವಾಗಿಯೇ ತಮ್ಮ ಆಕ್ರೋಶ ಹೊರ ಹಾಕಿರುವುದು ದರ್ಶನ್‌ ಅವರಿಗೂ ಬೇಸರ ತರಿಸಿದೆ. ಈ ಹಿನ್ನೆಲೆಯಲ್ಲಿಯೇ ಸೋಮವಾರ ಟ್ವಿಟ್ಟರ್‌ ಮೂಲಕ ದರ್ಶನ್‌ ತಮ್ಮ ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ. ‘ ಕುರುಕ್ಷೇತ್ರ ಎನ್ನುವುದು ಬಹುತಾರಾಗಣದ ಚಿತ್ರ. ಎಲ್ಲರನ್ನು ಸಮಾನವಾಗಿ ಕಾಣಬೇಕೆಂಬ ಸದುದ್ದೇಶದಿಂದ ಯಾವ ತಾರೆಯರ ಫೋಟೋಗಳನ್ನು ಪಾಸ್‌ ಮೇಲೆ ಪ್ರಿಂಟ್‌ ಮಾಡಿಲ್ಲ. ಇಂತಹ ಚಿಕ್ಕ ವಿಷಯಗಳಿಗೆಲ್ಲ ಬೇಸರ ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ಚಿತ್ರದಲ್ಲಿ ಎಲ್ಲರಿಗೂ ತಕ್ಕ ನ್ಯಾಯವನ್ನು ಒದಗಿಸಲಾಗಿದೆ. ಆರಾಮಾಗಿ ಬನ್ನಿ, ಆಡಿಯೋ ಬಿಡುಗಡೆಯಲ್ಲಿ ಪಾಲ್ಗೊಳ್ಳಿ’ ಎಂದು ಮನವಿ ಮಾಡಿದ್ದಾರೆ.